ಕೊಚ್ಚಿ: ಎಂಟು ವರ್ಷಗಳ ಹಿಂದೆ ಇಟಲಿ ನಾವಿಕರಿಂದ ಹತ್ಯೆಯಾಗಿದ್ದ ಕೇರಳ ಮೀನುಗಾರರ ದೋಣಿಯಲ್ಲಿದ್ದ ಬಾಲಕನ ಕುಟುಂಬ ಇಟಲಿ ಸರಕಾರ ತಮಗೆ 100 ಕೋಟಿ ರೂ. ಪರಿಹಾರ ನೀಡಬೇಕು ಎಂದು ಮನವಿ ಮಾಡಿದೆ.
ಈ ಬಗ್ಗೆ ಜು.6ರಂದು ಕೇಂದ್ರ ಸಂಪುಟ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ. 2012ರ ಫೆ.15ರಂದು ಎನ್ರಿಕಾ ಲೆಕ್ಸಿ ಎಂಬ ತೈಲ ಹಡಗಿನಲ್ಲಿ ಈ ಘಟನೆ ನಡೆದಿತ್ತು.
ಕೇರಳದ ಮೀನುಗಾರಿಕಾ ದೋಣಿಯಲ್ಲಿ ಇದ್ದ ಪ್ರಿಜಿನ್ ಎ. ಎಂಬಾತನ ಕುಟುಂಬ ಈ ಮನವಿ ಮಾಡಿದೆ. ಘಟನೆಯ ಬಳಿಕ ಖಿನ್ನತೆಗೆ ಒಳಗಾಗಿದ್ದ ಪ್ರಿಜನ್ ಕಳೆದ ವರ್ಷ ಅಸುನೀಗಿದ್ದ. ಈ ಬಗ್ಗೆ ಚಿಕಿತ್ಸೆ ನೀಡಿದರೂ ಫಲಕಾರಿಯಾಗಿರಲಿಲ್ಲ. ಘಟನೆ ನಡೆದ ವೇಳೆ ಆತನಿಗೆ 14 ವರ್ಷ ವಯಸ್ಸಾಗಿತ್ತು.
ಈತನನ್ನೂ 2012ರ ಫೆ. 15ರ ಘಟನೆಯ ದುರ್ದೈವಿ ಎಂದು ಪರಿಗಣಿಸಬೇಕು. ಇಟಲಿಯ ಸರಕಾರದಿಂದ 100 ಕೋಟಿ ರೂ. ಪರಿಹಾರ ಕೊಡಿಸಬೇಕು ಎಂದು ಆತನ ಕುಟುಂಬ ಕೇಳಿಕೊಂಡಿದೆ.
ವಿಶ್ವಸಂಸ್ಥೆಯ ಕಡಲು ವ್ಯಾಜ್ಯ ಪರಿಹಾರ ಕಾಯ್ದೆಯ ಅನ್ವಯ ಪರಿಹಾರ ಕೊಡಿಸಬೇಕು ಎಂದು ಅವರು ಮನವಿ ಮಾಡಲಾಗಿದೆ.
ಆತನಿಗೆ ಅಂತಾರಾಷ್ಟ್ರೀಯ ಮಕ್ಕಳ ಹಕ್ಕುಗಳ ಪ್ರಕಾರ ಮತ್ತು ಭಾರತೀಯ ಸಂವಿಧಾನದ ಅನ್ವಯ ಪ್ರಿಜಿನ್‌ಗೆ ರಕ್ಷಣೆ ಕೊಡಲಾಗಿಲ್ಲ ಎಂದು ಕುಟುಂಬದ ಪರ ವಕೀಲರು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಮಧ್ಯಸ್ತಿಕೆ ಮಂಡಳಿ ಇಟಲಿಯ ಇಬ್ಬರು ನಾವಿಕರ ವಿರುದ್ಧ ಕೈಗೊಂಡ ಕಾನೂನು ಕ್ರಮ ಸಮರ್ಪಕವಾಗಿದೆ. ಭಾರತ ಸರಕಾರ ಸೂಕ್ತ ರೀತಿಯಲ್ಲಿ ಪರಿಹಾರ ಪಡೆಯಲೂ ಅರ್ಹತೆ ಪಡೆದಿದೆ ಎಂದು ತೀರ್ಮಾನ ಪ್ರಕಟಿಸಿತ್ತು.