Advertisement

ವಿದೇಶಕ್ಕೆ ತೆರಳದಂತೆ ಡಿಕೆಶಿ ಮೇಲೆ ಐಟಿ ನಿಗಾ?

08:05 AM Aug 06, 2017 | Team Udayavani |

ಬೆಂಗಳೂರು: ಶೋಧ ಕಾರ್ಯ ಪೂರ್ಣಗೊಂಡ ಬೆನ್ನಲ್ಲೇ ತಾತ್ಕಾಲಿಕ ರಿಲೀಫ್ ಪಡೆದುಕೊಂಡಿರುವ ಇಂಧನ ಸಚಿವ ಡಿ.ಕೆ ಶಿವಕುಮಾರ್‌ ಅವರು ವಿದೇಶಕ್ಕೆ ತೆರಳದಂತೆ ನಿಗಾ ಇಡಲು ಐಟಿ ಅಧಿಕಾರಿಗಳು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಖುದ್ದು ಶಿವಕುಮಾರ್‌ ಅವರಿಗೆ ತಿಳಿಸಿರುವ ಐಟಿ ಅಧಿಕಾರಿಗಳು, ತನಿಖೆ ಪೂರ್ಣಗೊಂಡಿಲ್ಲ. ಹೀಗಾಗಿ, ನೀವು ವಿದೇಶಕ್ಕೆ ತೆರಳುವಂತಿಲ್ಲ ಎಂದು ಮೌಖೀಕ ಸೂಚನೆ ನೀಡಿದ್ದಾರೆ. ಜತೆಗೆ ರಾಜ್ಯದ ವಿಮಾನ ನಿಲ್ದಾಣಗಳಲ್ಲಿನ ಅಧಿಕಾರಿಗಳಿಗೆ ಶಿವಕುಮಾರ್‌ ಅವರ ವಿದೇಶಿ ಪ್ರಯಾಣದ ಬಗ್ಗೆ ನಿಗಾವಹಿಸಿ ಎಂದು ಸಂದೇಶ ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಸಿಹಿ ಹಂಚಿ ಸಂಭ್ರಮಿಸಿದ ಬೆಂಬಲಿಗರು!: ಈ ಮಧ್ಯೆ, ಐಟಿ ಅಧಿಕಾರಿಗಳು ಶೋಧ ಕಾರ್ಯ ಪೂರ್ಣಗೊಳಿಸಿ ವಾಪಸ್‌ ತೆರಳುತ್ತಿದ್ದಂತೆ, ಸದಾಶಿವನಗರದ ಅವರ ನಿವಾಸದ ಮುಂದೆ ನೆರೆದಿದ್ದ ಸಚಿವರ ಬೆಂಬಲಿಗರು ಸಂಭ್ರಮಾಚರಣೆಯಲ್ಲಿ ತೊಡಗಿದರು. ಸಚಿವ ಶಿವಕುಮಾರ್‌ ಅವರು ಮಾಧ್ಯಮಗಳ ಮುಂದೆ, ಖಡಕ್‌ ಆಗಿ ಆರೋಪ ಮುಕ್ತರಾಗುವ ಬಗ್ಗೆ
ವಿಶ್ವಾಸದಿಂದಲೇ ಹೇಳಿಕೆ ನೀಡಿದ ಮೇಲಂತೂ, ಅವರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಹಲವು ಬೆಂಬಲಿಗರು ಡಿಕೆಶಿ
ಪರ ಘೋಷಣೆಗಳನ್ನು ಕೂಗಿ ಸಿಹಿ ಹಂಚಿ ಸಂಭ್ರಮಿಸಿದರು. ಅಲ್ಲದೆ, ಕಳೆದ ನಾಲ್ಕು ದಿನಗಳಿಂದ ಗಂಭೀರತೆಯಿಂದ ಕೂಡಿದ್ದ “ಕೆಂಕೇರಿ’ ನಿವಾಸ ಶನಿವಾರ ಮಧ್ಯಾಹ್ನದ ವೇಳೆಗೆ ಎಂದಿನಂತೆ ಲಘುಬಗೆಯ ಚಟುವಟಿಕೆಗೆ ಮರಳಿತು.

ಮಾವನ ಮನೆಯಲ್ಲಿ ಮಹತ್ವದ ದಾಖಲೆ?

ಮೈಸೂರು: ಡಿ.ಕೆ.ಶಿವಕುಮಾರ್‌ ಅವರ ಮಾವ ತಿಮ್ಮಯ್ಯ ಅವರ ಮನೆಯಲ್ಲಿ ನಿರಂತರ 77 ಗಂಟೆಗಳ ಕಾಲ ತಪಾಸಣೆ ನಡೆಸಿದ ಐಟಿ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಶನಿವಾರ ಮಧ್ಯಾಹ್ನದ ವೇಳೆಗೆ ತಿಮ್ಮಯ್ಯ ಅವರ ಮನೆಯಿಂದ ಹೊರನಡೆದ ಏಳು ಮಂದಿ ಅಧಿಕಾರಿಗಳು ಒಂದು ಸೂಟ್‌ಕೇಸ್‌, 2 ಬ್ಯಾಗ್‌ , ಒಂದು ಪ್ರಿಂಟರ್‌ ಹಾಗೂ ಒಂದು ಹಾರ್ಡ್‌ ಡಿಸ್ಕ್ ವಶಪಡಿಸಿಕೊಂಡು ಹೋಗಿದ್ದಾರೆ. ಈ ಮಧ್ಯೆ ಡಿಕೆಶಿ ಅವರಿಗೆ ಸೇರಿದ
ದಾಖಲೆಗಳು ತಿಮ್ಮಯ್ಯ ಅವರ ಮನೆಯಲ್ಲಿವೆ? ತಮ್ಮ ಎಲ್ಲಾ ಬೇನಾಮಿ ವ್ಯವಹಾರಗಳನ್ನೂ ಭಾವಮೈದುನ ಸತ್ಯನಾರಾಯಣ್‌ ಹೆಸರಲ್ಲಿ ಸಚಿವರು ಮಾಡುತ್ತಿದ್ದರೇ ಎಂಬ ಚರ್ಚೆಗಳು ಕೇಳಿ ಬರುತ್ತಿವೆ. ಇದಕ್ಕೆ ಪೂರಕವೆಂಬಂತೆ
ಐಟಿ ಅಧಿಕಾರಿಗಳು ತಿಮ್ಮಯ್ಯ ಅವರಿಗಿಂತ ಅವರ ಮಗ-ಸೊಸೆಯನ್ನೇ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಸತತ 77 ಗಂಟೆ ಪರಿಶೀಲನೆ: ಬುಧವಾರ ಬೆಳಗ್ಗೆ 6.30ರ ಸುಮಾರಿಗೆ ಇಟ್ಟಿಗೆಗೂಡಿನಲ್ಲಿರುವ ತಿಮ್ಮಯ್ಯ ಅವರ ಮನೆ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು, ಊಟ- ತಿಂಡಿ, ರಾತ್ರಿ ವಾಸ್ತವ್ಯವನ್ನೂ ಇಲ್ಲಿಯೇ ಮಾಡಿ, ಸತತ 77 ಗಂಟೆಗಳ ದಾಖಲೆಯ ತಪಾಸಣೆ ನಡೆಸಿದರು. ತಿಮ್ಮಯ್ಯ ಅವರ ಮೊಮ್ಮಕ್ಕಳಿಗೆ ಶಾಲೆಗೆ ಹೋಗಿ ಬರಲು ಹಾಗೂ ತಿಮ್ಮಯ್ಯ ಆಪ್ತ ಎಡ್ವಿನ್‌ಗೆ ಅವರ ಮನೆಗೆ ಹೋಗಿ ಬರಲು ಅವಕಾಶ ನೀಡಿದ್ದು ಬಿಟ್ಟರೆ, ಬೇರ್ಯಾರಿಗೂ ಮನೆಯಿಂದ ಹೊರಹೋಗಲು-ಒಳ ಬರಲು ಅವಕಾಶ ನೀಡಲಿಲ್ಲ. ಹಾಲು ಮಾರುವವರು, ಪೇಪರ್‌ ಹಾಕುವ ಹುಡುಗರಿಗೂ ಮನೆಯ
ಕಾಂಪೌಂಡ್‌ ಒಳಗೆ ಬಿಡಲಿಲ್ಲ. ಆದರೆ, ಐಟಿ ಅಧಿಕಾರಿಗಳಾಗಲಿ, ತಿಮ್ಮಯ್ಯ ಕುಟುಂಬದರಾಗಲಿ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next