Advertisement

“ಜನರೇ ಚಂದಾ ಎತ್ತಿ ಖರ್ಚು ಮಾಡಿದ್ದರು’

12:29 AM Jan 28, 2023 | Team Udayavani |

ಎಚ್‌.ಡಿ. ದೇವೇಗೌಡ, ಮಾಜಿ ಪ್ರಧಾನಿ
ಮೂಲತಃ ವೃತ್ತಿಯಲ್ಲಿ ಕಂಟ್ರಾಕ್ಟರ್‌ ಆಗಿದ್ದ ನಾನು ಹರದನಹಳ್ಳಿಯಿಂದ ಹೊಳೇನರಸೀಪುರಕ್ಕೆ ಆಗಾಗ್ಗೆ ಬಂದು ಹೋಗುತ್ತಿದ್ದೆ. ಅಲ್ಲಿ ಸ್ನೇಹಿತರ ಜತೆ ಹೊಟೇಲ್‌ನಲ್ಲಿ ಸೇರುವುದು ನನಗೆ ರೂಢಿ. ಆಗ ಸಾಮಾನ್ಯವಾಗಿ ರಾಜಕೀಯ ವಿಚಾರಗಳು ಪ್ರಸ್ತಾವವಾಗುತ್ತಿದ್ದವು. ಕೃಷಿ ಹಾಗೂ ಹಳ್ಳಿಗಾಡಿನ ಜನರ ಅಭಿವೃದ್ಧಿಯ ಕುರಿತ ನನ್ನ ಕಾಳಜಿ ಕಂಡ ಸ್ನೇಹಿತರು ಬಲವಂತ ಮಾಡಿ 1955ರಲ್ಲಿ ತಾಲೂಕು ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್‌ ಚುನಾವಣೆಗೆ ನಿಲ್ಲಿಸಿದರು. ಮೊದಲ ಚುನಾವಣೆಯಲ್ಲಿ ಸೋತು ಎರಡನೇ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ.

Advertisement

ನನಗೆ ರಾಜಕೀಯದಲ್ಲಿ ಗುರು ಆಗಿದ್ದವರು ಹಿರಿಯ ಕಾಂಗ್ರೆಸಿಗ ಹಾಗೂ ಗಾಂಧೀವಾದಿ ಎ.ಜಿ. ರಾಮಚಂದ್ರ ರಾಯರು. 1952ರ ಪ್ರಥಮ ಸಾರ್ವತ್ರಿಕ ಚುನಾ ವಣೆ ಯಲ್ಲಿ ಹೊಳೇನರಸೀಪುರ ಕ್ಷೇತ್ರ ದಿಂದ ಸ್ಪರ್ಧಿಸಿ ಶಾಸಕ ರಾಗಿದ್ದ ರಾಮಚಂದ್ರರಾಯರು ಕೆಂಗಲ್‌ ಹನುಮಂತಯ್ಯ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದರು.
1957ರ ದ್ವಿತೀಯ ಸಾರ್ವತ್ರಿಕ ಚುನಾವಣೆಯಲ್ಲಿ ಎ.ಜಿ.ರಾಮಚಂದ್ರರಾಯರು ಮತ್ತೆ ಸ್ಪರ್ಧಿಸಿ ಪ್ರಜಾ ಸಮಾಜ ವಾದಿ ಪಕ್ಷದ ಅಭ್ಯರ್ಥಿ ವೈ. ವೀರಪ್ಪ ಅವರ ಎದುರು ಸೋಲು ಅನುಭವಿಸಿದರು. 1962ರಲ್ಲಿ ಮೂರನೇ ಸಾರ್ವತ್ರಿಕ ಚುನಾವಣೆಯಲ್ಲಿ ವಯಸ್ಸಿನ ದೃಷ್ಟಿಯಿಂದ ಸ್ಪರ್ಧೆಯಿಂದ ಹಿಂದೆ ಸರಿದು ನನ್ನನ್ನು ಕಾಂಗ್ರೆಸ್‌ ಅಭ್ಯರ್ಥಿ ಸ್ಥಾನಕ್ಕೆ ಶಿಫಾರಸು ಮಾಡಿದರು.

ತಾಲೂಕು ಮತ್ತು ಜಿಲ್ಲಾ ಸಮಿತಿಯಿಂದಲೂ ನನ್ನ ಹೆಸರು ಅಂತಿಮಗೊಳಿಸಲಾಯಿತು. ಆದರೆ ಕಾಂಗ್ರೆಸ್‌ ಟಿಕೆಟ್‌ ಅನ್ನು ಎಚ್‌.ಡಿ.ದೊಡ್ಡೇಗೌಡರಿಗೆ ನೀಡಲಾಯಿತು. ಸ್ನೇಹಿತರ ಒತ್ತಾಸೆ ಮೇರೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬೈಸಿಕಲ್‌ ಚಿಹ್ನೆ ಪಡೆದು ಕಾಂಗ್ರೆಸ್‌ ಅಭ್ಯರ್ಥಿ ದೊಡ್ಡೇಗೌಡ ರನ್ನು ಸೋಲಿಸಿದೆ. ಚುನಾ ವಣೆ ಖರ್ಚಿಗೆ ನನ್ನ ಬಳಿ ಹಣ ಇರಲಿಲ್ಲ. ಇಲ್ಲೂ ಸ್ನೇಹಿತರೇ ಚಂದಾ ಎತ್ತಿ ಎರಡರಿಂದ ಮೂರು ಸಾವಿರ ರೂ. ಖರ್ಚು ಮಾಡಿ ದರು. ಅಷ್ಟೇ ನನ್ನ ಚುನಾವಣ ವೆಚ್ಚ. ಒಬ್ಬೊಬ್ಬರು 50 ರೂ, 100 ರೂ. ಖರ್ಚು ಮಾಡಿದ್ದರು. ಅನಂತರ ನಾನು ಸಾಲ ಮಾಡಿ ಆ ಮೊತ್ತ ತೀರಿಸಿದೆ. ಏಕೆಂದರೆ ನನಗೆ ಸಹಾಯ ಮಾಡಿದವರು ಅಷ್ಟೇನೂ ಸಿರಿವಂತರಾಗಿರಲಿಲ್ಲ.

ಹೊಳೇನರಸೀಪುರದಲ್ಲಿ ಮಾಸಿಕ 10 ರೂ.ಗೆ ಬಾಡಿಗೆ ಮನೆಯಲ್ಲಿದ್ದೆ. ಚುನಾವಣೆಯಲ್ಲಿ ಪ್ರಚಾರಕ್ಕಾಗಿ 2000 ರೂ.ಗೆ ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಸಿದ್ದೆ. ಅದರ ಸಾಲ ತೀರಿಸಲು ಜಮೀನು ಅಡಮಾನವಿಟ್ಟಿದ್ದೆ.

ಆಗಿನ ಚುನಾವಣೆಗೂ ಈಗಿನ ಚುನಾವಣೆಗೂ ಆಜಗಜಾಂತರವಿದೆ. ಈಗ ಹತ್ತು, ಇಪ್ಪತ್ತು, ಮೂವತ್ತು ಕೋಟಿ ರೂ.ವರೆಗೆ ಖರ್ಚು ಮಾಡಲಾಗುತ್ತದೆ. ಆಗ ಜನರು ಹಣ ಕೇಳುತ್ತಿರಲಿಲ್ಲ, ಅವರೇ ನಮ್ಮ ಪರವಾಗಿ ಚಂದಾ ಎತ್ತಿ ಖರ್ಚು ಮಾಡುತ್ತಿದ್ದರು. ಕಾಲ ಬದಲಾಗಿದೆ. ಶಾಸಕನಾದ ಅನಂತರ ಅಂತ್ಯಕ್ರಿಯೆ, ಮದುವೆ ಸಮಾರಂಭಗಳಿಗೆ ಯಾರೇ ಹೇಳಿದರೂ ತಪ್ಪಿಸುತ್ತಿರಲಿಲ್ಲ. ಆ ಸಂದರ್ಭದಲ್ಲಿ ಕೈಲಾದ ನೆರವು ನೀಡುತ್ತಿದ್ದೆ ಆದರೆ ಹಲವಾರು ಬಾರಿ ನನಗೆ ಆರ್ಥಿಕ ಮುಗ್ಗಟ್ಟು ಕಾಡಿದ್ದೂ ಇದೆ.

Advertisement

ನಾನು 1962ರ ಅನಂತರ ಅದೇ ರೀತಿ 1967ರಲ್ಲಿಯೂ ಸ್ಪತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಬಂದೆ. 1969ರಲ್ಲಿ ಕಾಂಗ್ರೆಸ್‌ ವಿಭಜನೆ ಅನಂತರ ನಿಜಲಿಂಗಪ್ಪ ಅವರ ಜತೆ ಗುರುತಿಸಿಕೊಂಡು ರಾಮಕೃಷ್ಣ ಹೆಗಡೆ ಮತ್ತು ವೀರೇಂದ್ರ ಪಾಟೀಲ್‌ ಅವರೊಂದಿಗೆ ಸಂಸ್ಥಾ ಕಾಂಗ್ರೆಸ್‌ನಲ್ಲಿದ್ದೆ. 1972ರಲ್ಲಿ ಸಂಸ್ಥಾ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸಿ ಗೆಲುವು ಸಾಧಿಸಿದೆ. ಯಾರೂ ವಿಪಕ್ಷದ ನಾಯಕ ಸ್ಥಾನ ವಹಿಸಿಕೊಳ್ಳಲು ಸಿದ್ಧರಿರಲಿಲ್ಲ, ಹೀಗಾಗಿ ನನಗೆ ಹೊಣೆ ಗಾರಿಕೆ ನೀಡಲಾಯಿತು. ಮತ್ತೂಂದು ವಿಚಾರ ಎಂದರೆ ಇತ್ತೀಚಿನ ದಿನಗಳಲ್ಲಿ ಅಭ್ಯರ್ಥಿಗಳ ವೆಚ್ಚ ಹಾಗೂ ಪಕ್ಷಾಂ ತರ ಚಾಳಿ ಇಡೀ ಚುನಾವಣೆ ವ್ಯವಸ್ಥೆಯನ್ನೇ ಅಣಕು ಮಾಡುವಂತಾಗಿದೆ.

-ಎಸ್‌.ಲಕ್ಷ್ಮೀ ನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next