Advertisement

ಅಂತೂ ಇಂತೂ ಸ್ವಲ್ಪ ಕರಗಿತು ಬಾಕಿ ಸೌಧ!

05:51 PM Feb 07, 2022 | Team Udayavani |

ಹುಬ್ಬಳ್ಳಿ: ಸರಕಾರಿ ಕಚೇರಿಗಳ ನಿರ್ವಹಣೆಗಾಗಿ ಪ್ರತ್ಯೇಕ ಅನುದಾನದ ವ್ಯವಸ್ಥೆಯಿದೆ. ಹೀಗಿದ್ದರೂ ಮಿನಿ ವಿಧಾನಸೌಧ ನಿರ್ವಹಣೆಗೆ ನಿಗದಿ ಪಡಿಸಿರುವ ಶುಲ್ಕವನ್ನು ಕೆಲ ಇಲಾಖೆಗಳು ಕಳೆದ ಐದಾರು ವರ್ಷಗಳಿಂದ ಪಾವತಿಸದ ಕಾರಣ ಮೂಲ ಸೌಲಭ್ಯಗಳ ಕೊರತೆ ಅನುಭವಿಸುವಂತಾಗಿತ್ತು. ಇದೀಗ ಎಸ್ಕಾಂ ಮಾದರಿಯಲ್ಲೇ ನಿರ್ವಹಣಾ ಸಮಿತಿ ಬಾಕಿ ವಸೂಲಾತಿಗೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಒಟ್ಟು 1.60 ಕೋಟಿ ರೂ. ಬಾಕಿಯಲ್ಲಿ 32 ಲಕ್ಷ ರೂ. ವಸೂಲಾತಿ ಮಾಡಲಾಗಿದೆ.

Advertisement

ಕಂದಾಯ ಇಲಾಖೆಗೆ ಹೊರೆ: ಮಿನಿ ವಿಧಾನಸೌಧ ನಿರ್ಮಾಣದಲ್ಲಿ ನಿಯಮ ಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿದ ಪರಿಣಾಮ ಪಾಲಿಕೆಯಿಂದ ಸಿಸಿ ದೊರೆತಿಲ್ಲ. ಇದರಿಂದಾಗಿ ಲೋಕೋಪಯೋಗಿ ಇಲಾಖೆ ತನ್ನ ಸುಪರ್ದಿಗೆ ಪಡೆಯಲಿಲ್ಲ. ಅನಿವಾರ್ಯವಾಗಿ ಕಂದಾಯ ಇಲಾಖೆಯ ಸುಪರ್ದಿಯಲ್ಲಿ ಉಳಿದು ನಿರ್ವಹಣೆ ಭಾರ ಕಂದಾಯ ಇಲಾಖೆ ಮೇಲೆ ಬಿದ್ದಿತು. ಇದಕ್ಕಾಗಿ ಉಪ ವಿಭಾಗಾಧಿಕಾರಿ ಅಧ್ಯಕ್ಷ, ತಹಶೀಲ್ದಾರ್‌ ಕಾರ್ಯದರ್ಶಿ ಹಾಗೂ ಇಲ್ಲಿರುವ ಇಲಾಖೆಗಳ ಮುಖ್ಯಸ್ಥರನ್ನು ಸದಸ್ಯರನ್ನಾಗಿಸಿ ಸಮಿತಿ ರಚಿಸಲಾಯಿತು.

ಹಂಚಿಕೆಯಾಗಿರುವ ಪ್ರತಿ ಚದರಡಿಗೆ ಶುಲ್ಕ ನಿಗದಿ ಮಾಡಲಾಯಿತು. ಆದರೆ ಕೆಲ ಇಲಾಖೆಗಳು ಪ್ರತಿ ತಿಂಗಳು ನಿರ್ವಹಣಾ ವೆಚ್ಚ ಪಾವತಿ ಮಾಡುತ್ತಿದ್ದಾರೆ. ಕೆಲ ಇಲಾಖೆಗಳು ಪಾವತಿ ಮಾಡದ ಪರಿಣಾಮ ನಿರ್ವಹಣೆ ಅಷ್ಟಕ್ಕಷ್ಟೆ ಎನ್ನುವಂತಾಗಿತ್ತು. ಸಮಿತಿ ಕಟ್ಟುನಿಟ್ಟಾಗಿ ಬಾಕಿ ವಸೂಲಾತಿಗೆ ಮುಂದಾಗಿದ್ದರ ಪರಿಣಾಮ ಇದೀಗ ಒಂದಿಷ್ಟು ಬಾಕಿ ವಸೂಲಿಯಾಗುತ್ತಿದೆ.

32 ಲಕ್ಷ ರೂ. ಬಾಕಿ ವಸೂಲಿ: ಪ್ರತಿಯೊಂದು ಇಲಾಖೆಯಲ್ಲಿ ಕಚೇರಿ ನಿರ್ವಹಣೆಗಾಗಿ ಇಂತಿಷ್ಟು ಅನುದಾನ ಮೀಸಲಿರುತ್ತದೆ. ಆದರೆ ಕೆಲ ಇಲಾಖೆಗಳು ಹಲವು ವರ್ಷಗಳಿಂದ ನಿರ್ವಹಣಾ ಶುಲ್ಕ ನೀಡಿಲ್ಲ. ಇದನ್ನು ನಿರ್ವಹಿಸಬೇಕಾದ ಹಿಂದಿನ ತಹಶೀಲ್ದಾರ್‌ ಗಳು ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದ ಪರಿಣಾಮ ಬಾಕಿ ಬೆಟ್ಟದಂತೆ ಬೆಳೆದು ಸಿಬ್ಬಂದಿಗೆ, ಇಲ್ಲಿಗೆ ಬರುವ ಸಾರ್ವಜನಿಕರಿಗೆ ಸಮರ್ಪಕ ಮೂಲ ಸೌಲಭ್ಯ ಕಲ್ಪಿಸಲು ಸಾಧ್ಯವಾಗಲಿಲ್ಲ. ಆದರೆ ಕೆಲ ಇಲಾಖೆಗಳು ಸಕಾಲಕ್ಕೆ ಪಾವತಿಸುತ್ತಿದ್ದ ಶುಲ್ಕದಿಂದಾಗಿ ಕೆಲ ಸೌಲಭ್ಯಗಳನ್ನು ನೀಡಲಾಗುತ್ತಿತ್ತು.

ಇದು ಹೀಗೆ ಮುಂದುವರಿದರೆ ಕನಿಷ್ಟ ಸೌಲಭ್ಯಗಳನ್ನೂ ನೀಡಲು ಸಾಧ್ಯವಿಲ್ಲ ಎಂದು ನಿರ್ಧರಿಸಿ ವಿದ್ಯುತ್‌ ಬಿಲ್‌ ಬಾಕಿಗೆ ಎಸ್ಕಾಂ ಕೈಗೊಂಡ ದಿಟ್ಟ ನಿರ್ಧಾರದಂತೆ ಬಾಕಿ ವಸೂಲಿಗೆ ಮುಂದಾಗಿದ್ದರ ಪರಿಣಾಮ ಬರೋಬ್ಬರಿ 32 ಲಕ್ಷ ರೂ. ವಸೂಲು ಮಾಡಲಾಗಿದೆ.

Advertisement

ಒಂದಿಷ್ಟು ಸೌಲಭ್ಯ: ಪ್ರತಿ ತಿಂಗಳು ಮಿನಿವಿಧಾನಸೌಧ ನಿರ್ವಹಣೆಗೆ 3-3.50 ಲಕ್ಷ ರೂ. ಅಗತ್ಯವಿದೆ. ಇದೀಗ ಕಟ್ಟುನಿಟ್ಟಿನ ಕ್ರಮದಿಂದಾಗಿ ಒಂದಿಷ್ಟು ಬಾಕಿ ವಸೂಲಾಗುತ್ತಿದ್ದಂತೆ ಹಲವು ವರ್ಷಗಳಿಂದ ಕೆಟ್ಟು ನಿಂತಿದ್ದ ಲಿಫ್ಟ್‌ ಸುಸ್ಥಿತಿಗೆ ತರಲಾಗಿದೆ. ಇನ್ನು ಹಗಲು-ರಾತ್ರಿ ವೇಳೆಯಲ್ಲಿ ಭದ್ರತಾ ಸಿಬ್ಬಂದಿ, ಸ್ವಚ್ಛತೆ, ಕಾರಿಡಾರ್‌ಗಳಲ್ಲಿ ವಿದ್ಯುತ್‌ ದೀಪ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗಿದೆ. ವಿದ್ಯುತ್‌ ಲೋಡ್‌ ಹೆಚ್ಚಾದ ಪರಿಣಾಮ ಇಡೀ ಕಟ್ಟಡದ ವೈರಿಂಗ್‌
ಸುಟ್ಟಿತ್ತು. ಇಂತಹ ಅಗತ್ಯ ಕಾರ್ಯಗಳನ್ನು ಸಕಾಲಕ್ಕೆ ನಿರ್ವಹಿಸಲು ಸಾಧ್ಯವಾಗಿದೆ.

ಬಾಕಿ ನೀಡಿದರಷ್ಟೇ ವಿದ್ಯುತ್‌ ಎನ್ನುವ ಫರ್ಮಾನು ಹೊರಡಿಸುತ್ತಿದ್ದಂತೆ ಒಂದಿಷ್ಟು ಬಾಕಿ ಪಾವತಿಸಿ ಕಚೇರಿಗಳಿಗೆ ವಿದ್ಯುತ್‌ ಪಡೆದರು. ಇನ್ನೂ ಸುಲಭ ಶೌಚಾಲಯದೊಂದಿಗೆ ಒಪ್ಪಂದ ಮಾಡಿಕೊಂಡು ಸಮರ್ಪಕ ನಿರ್ವಹಣೆಗೆ ಚಿಂತಿಸಲಾಗಿತ್ತಾದಾರೂ ನಿರ್ವಹಣಾ ಶುಲ್ಕ ಸಕಾಲಕ್ಕೆ ಪಾವತಿಯಾಗದ ಕಾರಣ ಕೈಬಿಡಲಾಗಿದೆ.

ಶುಲ್ಕ ಮರೆತ ವಾರ್ತಾ ಇಲಾಖೆ
ವಾರ್ತಾ ಇಲಾಖೆ ಮಾತ್ರ ನಯಾಪೈಸೆ ಬಾಕಿ ಪಾವತಿ ಮಾಡದ ಸ್ಥಿತಿಗೆ ತಲುಪಿದೆ. ಚದರಡಿಗೆ 2 ರೂ. ನಿರ್ವಹಣಾ ಶುಲ್ಕವಿದ್ದಾಗ ಪ್ರತಿ ತಿಂಗಳು ತಪ್ಪದೆ ಮಾಡಲಾಗುತ್ತಿತ್ತು. ಆದರೆ ಚದರಡಿಗೆ 10 ರೂ. ಮಾಡಿದ ನಂತರ ಶುಲ್ಕ ಪಾವತಿ ದೊಡ್ಡ ಹೊರೆಯಾಗಿದೆ. ಪ್ರತಿ ತಿಂಗಳು ನಿರ್ವಹಣಾ ಶುಲ್ಕದ ಕುರಿತು ಇಲಾಖೆ ಆಯುಕ್ತರಿಗೆ ಪತ್ರ ಬರೆದರೂ ಕಳೆದ ಐದು ವರ್ಷಗಳಿಂದ ಕ್ಯಾರೇ ಎನ್ನುತ್ತಿಲ್ಲ. 35,000 ರೂ. ವಿದ್ಯುತ್‌ ಬಾಕಿ ಉಳಿಸಿಕೊಂಡ ಬರಿಣಾಮ ಸಂಪರ್ಕ
ಕಡಿತಗೊಳಿಸಲಾಗಿತ್ತು. ಪ್ರತಿ ತಿಂಗಳು 16,000 ರೂ. ನಿರ್ವಹಣಾ ಶುಲ್ಕ ಪಾವತಿ ಮಾಡದ ಪರಿಸ್ಥಿತಿಯಿದ್ದು, 9,48,480 ರೂ. ಬಾಕಿಯನ್ನು ವಾರ್ತಾ ಇಲಾಖೆ ಪಾವತಿಸಬೇಕಾಗಿದೆ.

ಬೆಳೆಯುತ್ತಲೇ ಇದೆ ಬಾಕಿ ಬೆಟ್ಟ
ಮಿನಿವಿಧಾನಸೌಧ ನಿರ್ಮಾಣವಾಗಿರುವುದು ತಾಪಂಗೆ ಸೇರಿದ ಸ್ಥಳ ಎನ್ನುವ ಕಾರಣಕ್ಕೆ ಶುಲ್ಕ ಪಾವತಿ ಮಾಡುವುದಿಲ್ಲ ಎಂಬುದು ತಾಪಂ ವಾದ. ಒಣ ಪ್ರತಿಷ್ಠೆಯಿಂದಾಗಿ ತಾಪಂ ಬರೋಬ್ಬರಿ 95 ಲಕ್ಷ ರೂ. ಅಪರ ಜಿಲ್ಲಾ ಖಜಾನೆ-28 ಲಕ್ಷ, ನಗರ ಸಿಟಿ ಸರ್ವೇ-16.49 ಲಕ್ಷ, ವಾರ್ತಾ ಇಲಾಖೆ-9.48 ಲಕ್ಷ, ಭೂ ದಾಖಲೆ-8.5 ಲಕ್ಷ ರೂ. ಬಾಕಿ ಉಳಿಸಿಕೊಂಡಿವೆ. ನಿಯಮದ ಪ್ರಕಾರ ಕಟ್ಟಡ ಜಪ್ತಿ ಮಾಡಲಾಗುವುದು ಎಂದು ಎಚ್ಚರಿಕೆ ನೋಟಿಸ್‌ಗಳಿಗೆ ಕ್ಯಾರೇ ಎನ್ನುತ್ತಿಲ್ಲ. ಬರೋಬ್ಬರಿ 1.60 ಕೋಟಿ ರೂ. ಎಲ್ಲಾ ಇಲಾಖೆಗಳಿಂದ ಬಾಕಿ ಉಳಿದಿದೆ. ಇಲಾಖೆಗಳ ನಡುವಿನ ಒಣಪ್ರತಿಷ್ಠೆಯಿಂದಾಗಿ ಸಾರ್ವಜನಿಕರು ಮೂಲಸೌಲಭ್ಯವಿಲ್ಲದೆ ಸಂಕಷ್ಟ ಅನುಭವಿಸುವಂತಾಗಿದೆ.

ಎಲ್ಲಾ ಕಚೇರಿಗೆ ನಿರ್ವಹಣಾ ವೆಚ್ಚ ಲಭ್ಯವಿರುತ್ತದೆ. ಸಕಾಲಕ್ಕೆ ಪಾವತಿಸಿದರೆ ಈ ಸಮಸ್ಯೆಯಿರುವುದಿಲ್ಲ. ನಿರ್ವಹಣಾ ಶುಲ್ಕ ನಿರೀಕ್ಷಿಸಿದಷ್ಟು ಸಂಗ್ರಹವಾದರೆ ಜನರಿಗೆ ಹಾಗೂ ಇಲ್ಲಿನ ಸಿಬ್ಬಂದಿಗೆ ಸೌಲಭ್ಯ ಕಲ್ಪಿಸಬಹುದಾಗಿದೆ. ಕಠಿಣ ಕ್ರಮ ಕೈಗೊಂಡಿದ್ದರ ಪರಿಣಾಮ ಒಂದಿಷ್ಟು ಬಾಕಿ ವಸೂಲಾಗಿದೆ. ಇದರಿಂದ ಅಗತ್ಯ ಕಾರ್ಯಗಳನ್ನು ಕೈಗೊಳ್ಳಲಾಗಿದೆ.
ಶಶಿಧರ ಮಾಡ್ಯಾಳ, ತಹಶೀಲ್ದಾರ್‌

*ಹೇಮರೆಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next