ಆಕ್ಲೆಂಡ್: ಮೊದಲ ಹಾಗೂ ಎರಡನೇ ಟಿ20 ಪಂದ್ಯದಲ್ಲಿ ತಾನು ಒಂದೇ ರೀತಿಯಲ್ಲಿ ಬ್ಯಾಟಿಂಗ್ ಮೂಲಕ ಅಬ್ಬರಿಸಿದರೂ ಇದು ವಿಭಿನ್ನ ಟ್ರ್ಯಾಕ್ ಆಗಿತ್ತು ಎಂದು ಪಂದ್ಯಶ್ರೇಷ್ಠ ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.
“ಇಂದು ಬೇರೆಯದೇ ಆದ ಪರಿಸ್ಥಿತಿ ಇತ್ತು. ಟಾರ್ಗೆಟ್ ಕೂಡ ಕಡಿಮೆ ಇತ್ತು. ಹಾಗೆಯೇ ಪಿಚ್ ಕೂಡ ಬೇರೆ ರೀತಿ ವರ್ತಿಸುತ್ತಿತ್ತು. ಹೀಗಾಗಿ ನನ್ನ ಮೇಲಿನ ಜವಾಬ್ದಾರಿ ಕೂಡ ಬೇರೆ ಮಟ್ಟದ್ದಾಗಿತ್ತು…’ ಎಂದು ರಾಹುಲ್ ಹೇಳಿದರು.
“ನಾವು ರೋಹಿತ್ ಮತ್ತು ಕೊಹ್ಲಿ ಅವರನ್ನು ಬೇಗನೇ ಕಳೆದುಕೊಂಡೆವು.
ಹೀಗಾಗಿ ನಾನು ಕ್ರೀಸ್ ಆಕ್ರಮಿಸಿಕೊಳ್ಳಬೇಕಿತ್ತು. ಮೊನ್ನೆಯ ಪಿಚ್ ಸಂಪೂರ್ಣ ವಾಗಿ ಬ್ಯಾಟಿಂಗಿಗೆ ಸಹಕರಿಸುತ್ತಿತ್ತು. ಇಂದು ಬೇರೆ ಟ್ರ್ಯಾಕ್‌ನಲ್ಲಿ ಆಡಲಾಯಿತು. ಇದು ಬೌಲರ್‌ಗಳಿಗೂ ನೆರವು ನೀಡುತ್ತಿತ್ತು. ಆದರೆ ನಾನು ಸಹಜ ಆಟಕ್ಕೆ ಹೆಚ್ಚಿನ ಒತ್ತು ನೀಡಿದೆ’ ಎಂಬುದಾಗಿ ರಾಹುಲ್ ಹೇಳಿದರು.
ಯಾವ ಕ್ರಮಾಂಕದಲ್ಲಿ ಆಡಿದರೂ ಸ್ಥಿರವಾದ ಬ್ಯಾಟಿಂಗ್ ಪ್ರದರ್ಶನ ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಹುಲ್, “ಇದಕ್ಕೆ ಏನೆಂದು ಹೇಳಲಿ… ನನ್ನ ಆಟವನ್ನು ಚೆನ್ನಾಗಿ ಅರ್ಥೈಸಿಕೊಂಡ ಕಾರಣ ಇದು ಸಾಧ್ಯವಾಗಿರಬಹುದು. ರೈಟ್ ಶಾಟ್ ಸೆಲೆಕ್ಷನ್ ಪಾಲು ಕೂಡ ಇದರಲ್ಲಿದೆ. ಆದರೆ ನನಗೆ ಮೊದಲು ತಂಡ ಮುಖ್ಯ, ಅನಂತರ ಏನಿದ್ದರೂ ವೈಯಕ್ತಿಕ ನಿರ್ವಹಣೆ…’ ಎಂದರು.
ಭಾರತದ ಬೌಲರ್‌ಗಳು ಈ ಪಂದ್ಯವನ್ನು ಕಸಿದರು’ ಎಂಬುದು ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ ಪ್ರತಿಕ್ರಿಯೆ.
ಅನುಮಾನವೇ ಇಲ್ಲ. ಭಾರತದ ಬೌಲಿಂಗ್ ಅಮೋಘವಾಗಿತ್ತು. ಹೆಚ್ಚು ಶಿಸ್ತಿನಿಂದ ಕೂಡಿತ್ತು. ನಾವು ಪೇರಿಸಿದ ಮೊತ್ತ ಏನೂ ಸಾಲದು. ಇಂದಿನ ಪಿಚ್ ಮೊನ್ನೆಯಂತಿರಲಿಲ್ಲ. ಆದರೂ ನಾವು ಇನ್ನಷ್ಟು ರನ್ ಪೇರಿಸಬೇಕಿತ್ತು. ಈ ಲೆಕ್ಕಾಚಾರದಿಂದಲೇ ಬ್ಯಾಟಿಂಗ್ ಆಯ್ದುಕೊಂಡೆವು. ಆದರೆ ನಮ್ಮ ಲೆಕ್ಕಾಚಾರ ತಲೆಕೆಳಗಾಯಿತು.
-ಕೇನ್ ವಿಲಿಯಮ್ಸನ್