Advertisement
“ನಮ್ಮ ಸರ್ಕಾರಕ್ಕೆ ಆಪತ್ತು ತರಲೆಂದೇ ಈ ಪಿತೂರಿಯ ಭೇಟಿ ನಡೆದಿದೆ”ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರ ಸ್ವಾಮಿ ಅವರು ಯಡಿಯೂರಪ್ಪ ವಿರುದ್ಧ ನೇರ ಆರೋಪ ಮಾಡಿ ದರೆ,”ಇದೆಲ್ಲಾ ಸುಳ್ಳು.ಪುರಾವೆಗಳಿದ್ದರೆ ತನಿಖೆ ಮಾಡಲಿ’ ಎಂದು ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಈ ಸರ್ಕಾರಕ್ಕೆ ಅಪತ್ತು ತರಲು ಕೆಲವು ಪ್ರಯತ್ನ ನಡೆಯುತ್ತಿವೆ. ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಇತ್ತೀಚೆಗೆ ಐಟಿ ಇಲಾಖೆ ಮುಖ್ಯ ಆಯುಕ್ತರನ್ನು ಭೇಟಿ ಮಾಡಿದ್ದಾರೆ. ಯಾರ್ಯಾರು ಏನೆಲ್ಲಾ ನಡೆಸುತ್ತಿದ್ದಾರೆ ಎಲ್ಲ ಗೊತ್ತಿದೆ ಎಂದು ಹೇಳಿದ್ದರು.
Related Articles
Advertisement
ಕುಮಾರಸ್ವಾಮಿಯವರು ಅನಗತ್ಯ ಹೇಳಿಕೆ ಕೊಟ್ಟು ಯಾರನ್ನೋ ಬಲಿಪಶು ಮಾಡಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಸರಿಯಲ್ಲ. ನಮಗೆ ಸುಪ್ರೀಂಕೋರ್ಟ್, ಹೈಕೋರ್ಟ್‌ಗಳಲ್ಲಿ ಕೇಸ್‌ಗಳಿವೆ, ಅದಕ್ಕೆ ಓಡಾಡುತ್ತಿದ್ದೇವೆ. ನಾವ್ಯಾಕೆ ಬೇರೆಯವರ ಬಗ್ಗೆ ತಲೆಕೆಡಿಸಿಕೊಳ್ಳಬೇಕು ಎಂದರು.
ಯಡಿಯೂರಪ್ಪ ಪುತ್ರ ವಿಜಯೇಂದ್ರ ಪ್ರತಿಕ್ರಿಯಿಸಿ, ಮುಖ್ಯಮಂತ್ರಿಯವರು ಇಂತಹ ಹೇಳಿಕೆ ಕೊಡಬಾರದು. ನಾನು ಆದಾಯ ತೆರಿಗೆ ಅಧಿಕಾರಿಗಳನ್ನು ಭೇಟಿ ಮಾಡಿದ್ದೆ ಎಂಬುದು ಕಪೋಲಕಲ್ಪಿತ. ಅವರ ಅಸ್ಥಿರ ಮನಸ್ಸು ಇಂತಹ ಹೇಳಿಕೆ ಕೊಡಿಸುತ್ತಿದೆ. ಮುಖ್ಯಮಂತ್ರಿಯವರ ಬಳಿಯೇ ಗುಪ್ತಚರ ಇಲಾಖೆ ಇದೆ, ತನಿಖೆ ಮಾಡಿಸಲಿ. ಯಡಿಯೂರಪ್ಪ ಅವರ ಮಕ್ಕಳು ಎಲ್ಲಿಗೆ ಹೋಗ್ತಾರೆ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಪ್ರತಿಕ್ರಿಯಿಸಿದ್ದಾರೆ.
ಇನ್ನು, ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸಹ ಇದೇ ರೀತಿ ಆಕ್ರೋಶ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿಯವರಿಗೆ ಆದಾಯ ತೆರಿಗೆ ಇಲಾಖೆ ಬಗ್ಗೆ ಯಾಕೆ ಭಯ? ಏನಾದರೂ ಇದ್ದರೆ ತನಿಖೆ ನಡೆಯಲಿ ಬಿಡಿ. ಈ ರೀತಿಯ ಆರೋಪಗಳು “ಕಳ್ಳನ ಮನಸ್ಸು ಹುಳ್ಳೊಳಗೆ’ ಎನ್ನುವಂತಾಗಿದೆ ಎಂದು ತಿಳಿಸಿದ್ದಾರೆ.
ಇದಕ್ಕೆ ವಿಧಾನಸೌಧದಲ್ಲಿ ಪ್ರಕ್ರಿಯಿಸಿರುವ ಕುಮಾರಸ್ವಾಮಿ, ನಾನು ಎಲ್ಲ ತಿಳಿದುಕೊಂಡೇ ಮಾತನಾಡಿದ್ದೇನೆ. ಮಾಧ್ಯಮಗಳಲ್ಲೂ ಇದು ಬಂದಿದೆ. ಪುರಾವೆ ಕೊಡಲು ಇವರು ಹೋದಾಗ ಕ್ಯಾಮರಾ ಹಿಡಿದುಕೊಂಡು ಹೋಗಲ್ಲಾ ಎಂದು ಪ್ರಶ್ನಿಸಿದ್ದಾರೆ. ಯಡಿಯೂರಪ್ಪ ಅವರೇ ಹೇಳಿದ್ದಾರೆ, ಸುಪ್ರೀಂಕೋರ್ಟ್, ಹೈಕೋರ್ಟ್‌ನಲ್ಲಿ ನಮ್ಮ ವಿರುದ್ಧ ಪ್ರಕರಣಗಳು ಅಂತ. ಅಲ್ಲಿಗೆ ಭೇಟಿಯಾಗಿರುವುದು ಸ್ಪಷ್ಟವಾಗಿದೆ. ನಾನು ಏನೂ ಗೊತ್ತಿಲ್ಲದೇ ಹೇಳುವುದಿಲ್ಲ, ಎಲ್ಲವೂ ನನಗೂ ಅರ್ಥವಾಗುತ್ತದೆ ಎಂದು ಖಾರವಾಗಿಯೇ ತಿಳಿಸಿದ್ದಾರೆ.
ಐಟಿ ಇಲಾಖೆ ಹೇಳಿಕೆಯಾವುದೇ ರಾಜಕೀಯ ನಾಯಕರ ಕುಟುಂಬ ಸದಸ್ಯರು ನಮ್ಮ ಇಲಾಖೆಯ ಮುಖ್ಯ ಆಯುಕ್ತರನ್ನು ಭೇಟಿಯಾಗಿಲ್ಲ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಜಂಟಿ ಆಯುಕ್ತ ತಮಿಳ್ ಸೆಲ್ವನ್, ರಾಜಕೀಯ ನಾಯಕರೊಬ್ಬರ ಕುಟುಂಬ ಸದಸ್ಯರು ಮುಖ್ಯ ಆಯುಕ್ತರನ್ನು ಭೇಟಿ ಮಾಡಿದ್ದರು ಎಂಬುದು ಆಧಾರ ರಹಿತ. ಇಲಾಖೆ ಕಳೆದ ಎರಡು ವರ್ಷಗಳಿಂದ ಹಲವಾರು ಪ್ರಕರಣಗಳಲ್ಲಿ ಪಾರದರ್ಶಕ ತನಿಖೆ ನಡೆಸಿ ತಾರ್ಕಿಕ ಅಂತ್ಯ ತಲುಪುವುಂತೆ ನೋಡಿಕೊಂಡಿದೆ. ಆದರೆ, ಯಾವುದೇ ಪ್ರಕರಣದಲ್ಲೂ ರಾಜಕೀಯ ಪ್ರೇರಿತವಾಗಿ ನಡೆದುಕೊಂಡಿಲ್ಲ ಎಂದು ಹೇಳಿದ್ದಾರೆ.