Advertisement

ಕಮಲ್‌ ಆಪ್ತರಿಗೆ ಐಟಿ ಶಾಕ್‌ : 50ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ

01:23 AM Apr 08, 2019 | Team Udayavani |

ಹೊಸದಿಲ್ಲಿ: ಮೊದಲ ಹಂತದ ಮತದಾನ ಎ.11ರಂದು ನಡೆಯಲಿರುವಂತೆಯೇ ಐಟಿ ದಾಳಿಯ ಸುಳಿಗೆ ಸಿಲುಕುತ್ತಿರುವ ರಾಜಕೀಯ ಪಕ್ಷಗಳ ನಾಯಕರ ಸಾಲಿಗೆ ಹೊಸ ಸೇರ್ಪಡೆಯಾಗಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್‌ ಬೆಂಬಲಿಗರ‌ ಮನೆ ಮತ್ತು ಕಚೇರಿಗಳ ಮೇಲೆ ರವಿವಾರ ಬೆಳಗ್ಗಿನ ಜಾವದಿಂದಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, 50ಕ್ಕೂ ಹೆಚ್ಚು ಕಚೇರಿ ಮತ್ತು ಮನೆಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ.

Advertisement

200ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ಇಂದೋರ್‌, ಭೋಪಾಲ್‌ ಮತ್ತು ದಿಲ್ಲಿಯಲ್ಲಿ ಈ ದಾಳಿ ನಡೆಸಿದೆ. ಕೆಲವೇ ದಿನಗಳ ಹಿಂದೆ ಕರ್ನಾಟಕದಲ್ಲಿ ಕುಮಾರಸ್ವಾಮಿ ಆಪ್ತರು ಮತ್ತು ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಸಮೀಪವರ್ತಿಗಳ ಮೇಲೆ ನಡೆಸಿದ ದಾಳಿಯ ಬೆನ್ನಲ್ಲೇ ಈ ದಾಳಿಯೂ ನಡೆದಿದೆ.

ಕಮಲ್‌ನಾಥ್‌ರ ಮಾಜಿ ವಿಶೇಷ ಅಧಿಕಾರಿ ಪ್ರವೀಣ್‌ ಕಕ್ಕಡ್‌, ಮಾಜಿ ಸಲಹೆಗಾರ ರಾಜೇಂದ್ರ ಮಿಗಲಾನಿ ಮತ್ತು ಕಮಲ್‌ನಾಥ್‌ ಅಳಿಯನ ಮೋಸರ್‌ ಬಿಯರ್‌ ಕಂಪೆನಿಗೆ ಸಂಬಂಧಿಸಿದ ವ್ಯಕ್ತಿಗಳು ಮತ್ತು ಸಂಬಂಧಿ ರತುಲ್‌ ಪುರಿಯ ಕಂಪೆನಿಯ ಮೇಲೆ ದಾಳಿ ನಡೆಸಲಾಗಿದೆ.

ಕಕ್ಕಡ್‌ ಮತ್ತು ಮಿಗಲಾನಿ ಚುನಾವಣೆಗೂ ಮುನ್ನ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಮಾಜಿ ಪೊಲೀಸ್‌ ಅಧಿಕಾರಿಯೂ ಆಗಿರುವ ಕಕ್ಕಡ್‌ ಮನೆ ಮೇಲೂ ದಾಳಿ ನಡೆಸಲಾಗಿದೆ. ಇನ್ನು ರತುಲ್‌ ಪುರಿಯನ್ನು ಅಗಸ್ಟಾ ವೆಸ್ಟ್‌ಲ್ಯಾಂಡ್‌ ಕಾಪ್ಟರ್‌ ಖರೀದಿ ಹಗರಣದಲ್ಲಿ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿತ್ತು. ಮೂಲಗಳ ಪ್ರಕಾರ ಕೋಲ್ಕತಾ ಮೂಲದ ಉದ್ಯಮಿ ಪಾರಸ್‌ ಮಲ್‌ ಲೋಧಾ ಮನೆ ಮತ್ತು ಕಚೇರಿಯ ಮೇಲೂ ದಾಳಿ ನಡೆಸಲಾಗಿದೆ.

ಸಿಆರ್‌ಪಿಎಫ್ ಬಳಕೆ
ಐಟಿ ದಾಳಿಯ ವೇಳೆ ಅಧಿಕಾರಿಗಳು ಸಾಮಾನ್ಯವಾಗಿ ಸ್ಥಳೀಯ ಪೊಲೀಸರನ್ನು ಬಳಸುತ್ತಾರೆ. ಆದರೆ ರವಿವಾರ ದಾಳಿ ವೇಳೆ ಸಿಆರ್‌ಪಿಎಫ್ ಯೋಧರನ್ನು ನಿಯೋಜಿಸಲಾಗಿತ್ತು ಎಂದು ತಿಳಿದುಬಂದಿದೆ. ಕಕ್ಕಡ್‌ ನಿವಾಸದ ಹೊರಗೆ ಈ ಯೋಧರೇ ನಿಯೋಜಿಸಲ್ಪಟ್ಟಿದ್ದರು. 200 ಮೀಟರ್‌ ದೂರದಲ್ಲಿ ಸ್ಥಳೀಯ ಪೊಲೀಸರು ಭದ್ರತೆ ಒದಗಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Advertisement

ದಾಳಿ ರಾಜಕೀಯ ಪ್ರೇರಿತ
ರಾಜಕೀಯ ದ್ವೇಷದಿಂದಲೇ ಈ ದಾಳಿ ನಡೆಸಲಾಗಿದೆ ಎಂದು ಮಧ್ಯಪ್ರದೇಶ ಕಾಂಗ್ರೆಸ್‌ ಆರೋಪಿಸಿದೆ. ಅಲ್ಲದೆ ಇದೇ ರೀತಿ ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಮೇಲೂ ದಾಳಿ ನಡೆಸಲಾಗಿತ್ತು ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ, ಆದಾಯ ತೆರಿಗೆ ಅಧಿಕಾರಿಗಳು ಕೋಟ್ಯಂತರ ರೂ. ಕಪ್ಪುಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದೆ.

ರಾಜಕೀಯ ದ್ವೇಷಕ್ಕಾಗಿ ಬಿಜೆಪಿ ಸರಕಾರ ದೇಶಾದ್ಯಂತ ವಿಪಕ್ಷಗಳ ನಾಯಕರನ್ನು ಟಾರ್ಗೆಟ್‌ ಮಾಡುತ್ತಿದೆ. ಇಂಥ ರಾಜಕೀಯ ಸೇಡಿನ ಕ್ರಮದಿಂದಾಗಿಯೇ ಚಂದ್ರಬಾಬು ನಾಯ್ಡು, ಎಂ.ಕೆ.ಸ್ಟಾಲಿನ್‌ನಂಥ ನಾಯಕರು ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಬೇಕಾಗಿ ಬಂದದ್ದು.
– ಭೂಪೇಂದ್ರ ಗುಪ್ತಾ, ಮ.ಪ್ರ. ಕಾಂಗ್ರೆಸ್‌ ಮಾಧ್ಯಮ ವಿಭಾಗದ ಉಪಾಧ್ಯಕ್ಷ

ಕಮಲ್‌ನಾಥ್‌ ಆಪ್ತರ ಮನೆ ಮೇಲಿನ ದಾಳಿ ವೇಳೆ ಕೋಟಿಗಟ್ಟಲೆ ಕಪ್ಪುಹಣ ಸಿಕ್ಕಿದೆ. ಕಳ್ಳರು ಯಾರಿದ್ದಾರೋ ಅವರಿಗೆ ಮಾತ್ರ ವಾಚ್‌ಮನ್‌ ಅನ್ನು ಕಂಡರೆ ಭಯ ಎಂಬುದು ಇದರಿಂದ ಸ್ಪಷ್ಟವಾಗಿದೆ.
– ಕೈಲಾಶ್‌ ವಿಜಯವರ್ಗೀಯ, ಬಿಜೆಪಿ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next