ಡೆಹರಾಡೂನ್ : ಹಿರಿಯ ಬಿಜೆಪಿ ನಾಯಕ ಅನಿಲ್ ಗೋಯಲ್ ಮತ್ತು ಅವರ ಕುಟುಂಬದವರು ಉತ್ತರಾಖಂಡ ಮತ್ತು ಹರಿಯಾಣದಲ್ಲಿ ಹೊಂದಿರುವ ಸುಮಾರು 13 ಉದ್ಯಮ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಗೋಯಲ್ ಅವರ ಕ್ವಾಲಿಟಿ ಹಾರ್ಡ್ ವೇರ್, ಉಮಂಗ್ ಸ್ಯಾರೀಸ್ ಮತ್ತು ಅಲೆಕ್ಸಿಯಾ ಪ್ಯಾನೆಲ್ಸ್ (ಡೆಹರಾಡೂನ್‌ನಲ್ಲಿನ ಸಂಸ್ಥೆಗಳು) ಮತ್ತು ರೂರ್ಕಿಯಲ್ಲಿನ ಕ್ವಾಂಟಮ್ ಯುನಿವರ್ಸಿಟಿ, ಹರಿಯಾಣದ ಯಮುನಾ ನಗರದಲ್ಲಿರುವ ಪಂಜಾಬ್ ಪ್ಲೆ„ ವುಡ್ ಇಂಡಸ್ಟ್ರೀಸ್ ಸೇರಿದಂತೆ ಒಟ್ಟು 13 ಉದ್ಯಮ ಸಂಸ್ಥೆಗಳು ಹಾಗೂ ಅವುಗಳ ಆಸ್ತಿಪಾಸ್ತಿಗಳ ಮೇಲೆ ಐಟಿ ದಾಳಿ ನಡೆದಿದೆ ಎಂದು ಐಟಿ ತನಿಖಾ ಆಯುಕ್ತ ಅಮರೇಂದ್ರ ಕುಮಾರ್ ತಿಳಿಸಿದ್ದಾರೆ.
ಐಟಿ ದಾಳಿಯಲ್ಲಿ ಗೋಯಲ್ ಅವರ ಉದ್ಯಮ ಸಂಸ್ಥೆಗಳು ನಡೆಸಿವೆ ಎನ್ನಲಾದ ಅನೇಕ ಹಣಕಾಸು ಅಕ್ರಮಗಳ ದಾಖಲೆ ಪತ್ರಗಳು ಪತ್ತೆಯಾಗಿದ್ದು ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದವರು ಹೇಳಿದ್ದಾರೆ.
ಗೋಯಲ್ ಅವರು 2016ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರಾಜ್ಯಸಭೆಗೆ ಸ್ಪರ್ಧಿಸಿದ್ದರು. ಬಿಜೆಪಿಯ ಹಿರಿಯ ಉನ್ನತ ನಾಯಕರಿಗೆ ನಿಕಟರಾಗಿರುವ ಗೋಯಲ್ ಅವರು ಈಚೆಗೆ ನಡೆದಿದ್ದ ಡೆಹರಾಡೂನ್ ಮೇಯರ್ ಪದಕ್ಕೆ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಹಾಗಿದ್ದರೂ ಪ್ರದೇಶ್ ಬಿಜೆಪಿ ಮಾಧ್ಯಮ ಪ್ರಭಾರಿ ದೇವೇಂದ್ರ ಭಾಸಿನ್ ಅವರು “ಗೋಯಲ್ ಅವರು ಪ್ರಕೃತ ಪಕ್ಷದಲ್ಲಿ ಯಾವುದೇ ಪದಭಾರ ಹೊಂದಿಲ್ಲ’ ಎಂದು ಹೇಳಿದ್ದಾರೆ.