Advertisement

ಡಿಕೆಶಿ ಆಪ್ತರ ಮನೆ ಮೇಲೆ ಮತ್ತೆ ಐಟಿ ದಾಳಿ

07:50 AM Aug 31, 2017 | |

ಬೆಂಗಳೂರು: ರಾಜ್ಯದ ಪವರ್‌ ಮಿನಿಸ್ಟರ್‌ ಡಿ.ಕೆ.ಶಿವಕುಮಾರ್‌ ಅವರ ಆಪ್ತರ ಮೇಲೆ ಮತ್ತೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಶಿವಕುಮಾರ್‌ ಆಪ್ತರ ಬೆಂಗಳೂರು, ಚೆನ್ನೈ ಮತ್ತು ದೆಹಲಿ ಸೇರಿದಂತೆ ಒಟ್ಟು 10 ಕಡೆಗಳಲ್ಲಿ ಐಟಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೆಲವು ಪ್ರಮುಖ ದಾಖಲಾತಿ ವಿವರಗಳನ್ನು ಸಂಗ್ರಹಿಸಿದ್ದಾರೆಂದು ಹೇಳಲಾಗಿದೆ. 

Advertisement

ರಾಜಾಜಿನಗರದಲ್ಲಿರುವ ಶಿವಕುಮಾರ್‌ ಆಪ್ತ, ಕೆಪಿಸಿಸಿ ಕಾರ್ಯದರ್ಶಿ ವಿಜಯ್‌ ಮುಳಗುಂದ ಮತ್ತು ಜಯನಗರದಲ್ಲಿರುವ ಆಪ್ತ ಕಾರ್ಯದರ್ಶಿ ಬಿ.ಎಸ್‌.ಶ್ರೀಧರ್‌ ನಿವಾಸಗಳ ಮೇಲೆ ಸುಮಾರು 20 ಮಂದಿ ಅಧಿಕಾರಿಗಳು ಬೆಳಗ್ಗೆ 6 ಗಂಟೆಗೆ ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳ
ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೇ, ಸುಬ್ರಹ್ಮಣ್ಯನಗರ ಹಾಗೂ ಮಿಲ್ಕ್ ಕಾಲೋನಿಯಲ್ಲಿನ ಮನೆಗಳು ಹಾಗೂ ಚೆನ್ನೈನ ನುಂಗಬಾಕಂ, ಅಡ್ಯಾì ಸೇರಿದಂತೆ ಇತರ ಸ್ಥಳಗಳ ಮೇಲೂ ದಾಳಿ ನಡೆಸಲಾಗಿದೆ ಎಂದು ಐಟಿ ಮೂಲಗಳು ತಿಳಿಸಿವೆ. 

ಈ ತಿಂಗಳ 2ರಂದು ಡಿ.ಕೆ.ಶಿವಕುಮಾರ್‌ ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ವಿಜಯ್‌ ಮತ್ತು ಶ್ರೀಧರ್‌ ಹೆಸರಿನಲ್ಲಿ ಶಿವಕುಮಾರ್‌ ಆಸ್ತಿ ಹೊಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ 6 ಗಂಟೆಯಿಂದ ಕಾರ್ಯಾಚರಣೆ ಆರಂಭಿಸಿರುವ ಅಧಿಕಾರಿಗಳು,
ಇಬ್ಬರ ಮನೆಯಲ್ಲಿ ತಡರಾತ್ರಿವರೆಗೆ ದಾಖಲೆಗಳ ಪರಿಶೀಲನೆ ನಡೆಸಿದರು. ಈ ವೇಳೆ, ಶಿವಕುಮಾರ್‌ ಅವರಿಗೆ ಸಂಬಂಧಿಸಿದ ಕೆಲ ದಾಖಲೆಗಳ ಪತ್ತೆ ಕಾರ್ಯ ನಡೆಯುತ್ತಿದೆ. ಆದರೆ, ಸದ್ಯದ ಮಾಹಿತಿ ಪ್ರಕಾರ ಅಂತಹ ಯಾವುದೇ ಮಹತ್ವದ ದಾಖಲೆಗಳು ಪತ್ತೆಯಾಗಿಲ್ಲ. ಇಬ್ಬರ ಮನೆಗಳಲ್ಲಿ ಕೆಲವು ಅಕ್ರಮ ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಮಾತ್ರ ಪತ್ತೆಯಾಗಿವೆ ಎನ್ನಲಾಗಿದೆ.

ವಿಜಯ್‌ ಮುಳಗುಂದ ಪ್ರಸ್ತುತ ಕೆಪಿಸಿಸಿ ಕಾರ್ಯದರ್ಶಿಯಾಗಿದ್ದು, ಮಾಜಿ ಸಿಎಂ ಎಸ್‌.ಎಂ.ಕೃಷ್ಣ ಅವರ ಆಡಳಿತಾವಧಿಯಲ್ಲಿ ಕಾವೇರಿ ಹ್ಯಾಂಡ್‌ಲ್ಯೂಮ್‌ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೇ ಮಹಾರಾಷ್ಟ್ರದ ಮಾಜಿ ಸಿಎಂ ದಿ.ವಿಲಾಸ್‌ ರಾವ್‌ ದೇಶ್‌ಮುಖ್‌ ಕುಟುಂಬಕ್ಕೆ ಆಪ್ತರಾಗಿದ್ದಾರೆ. ವಿಲಾಸ್‌ ರಾವ್‌ ಸರ್ಕಾರ ಅಸ್ಥಿರವಾಗಿದ್ದಾಗ ಕರ್ನಾಟಕಕ್ಕೆ ಶಾಸಕರನ್ನು ರೆಸಾರ್ಟ್‌ ವಾಸ್ತವ್ಯಕ್ಕೆ ಕಳುಹಿಸಿಕೊಡಲಾಗಿತ್ತು. ಆಗ ಶಿವಕುಮಾರ್‌ ಅವರನ್ನು ಮುಳಗುಂದ ಸಂಪರ್ಕಿಸಿದ್ದರು. ಬಳಿಕ ಸಚಿವ ಶಿವಕುಮಾರ್‌ ಅವರಿಗೆ ಅತ್ಯಾಪ್ತರಾದರು. 

ಜತೆಗೆ, ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆ ವೇಳೆ ಗುಜರಾತ್‌ನ ಕಾಂಗ್ರೆಸ್‌ ಶಾಸಕರು ಬೆಂಗಳೂರಿಗೆ ರೆಸಾರ್ಟ್‌ ವಾಸ್ತವ್ಯಕ್ಕೆ ಬಂದಿದ್ದ ವೇಳೆ ಅವರ ಆತಿಥ್ಯ ವಹಿಸಿದ್ದಾಗ ಶಿವಕುಮಾರ್‌ ಜತೆ ವಿಜಯ್‌ ಮುಳಗುಂದ ಕೈಜೋಡಿಸಿದ್ದರು. ಇನ್ನು, ಬಿ.ಎಸ್‌. ಶ್ರೀಧರ್‌ ಅವರು ಸಚಿವ ಶಿವಕುಮಾರ್‌ ಅವರ ಆಪ್ತ ಕಾರ್ಯದರ್ಶಿಯಾಗಿದ್ದಾರೆ.

Advertisement

ಚೆನ್ನೈನಲ್ಲಿದೆ ಶಿವಕುಮಾರ್‌ ಆಸ್ತಿ: ತಮಿಳುನಾಡಿನ ಚೆನ್ನೈನ ನುಂಗಬಾಕಂ, ಅಡ್ಯಾì ಸೇರಿದಂತೆ 6 ಕಡೆ ಶಿವಕುಮಾರ್‌ ಅವರಿಗೆ ಸೇರಿದ ಆಸ್ತಿಗಳ ಮೇಲೆ ಐಟಿ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಈ ವೇಳೆ ನುಂಗಬಾಕಂನಲ್ಲಿನ ಉದ್ಯಮಿ ಅನಿಲ್‌ ಜೈನ್‌ ಮನೆ ಮೇಲೂ ದಾಳಿ ನಡೆಸಲಾಗಿದೆ. ಶಿವಕುಮಾರ್‌ ಅವರ ಕೆಲ ಉದ್ಯಮಗಳಲ್ಲಿ ಅನಿಲ್‌ ಜೈನ್‌ ಪಾಲುದಾರರು ಎಂದು ಐಟಿ ಮೂಲಗಳು ತಿಳಿಸಿವೆ.

ಚಿನ್ನಾಭರಣಗಳ ಪರಿಶೀಲನೆ
ವಿಜಯ್‌ ಮುಳಗುಂದ ಮನೆ ಮೇಲೆ ದಾಳಿ ನಡೆಸಿದಾಗ ಅವರ ಮನೆಯಲ್ಲಿ ಸಿಕ್ಕ ಕೆಲ ಚಿನ್ನಾಭರಣ ಪರಿಶೀಲನೆಗೆ ನಾಲ್ಕು ಮಂದಿ ಸ್ಥಳೀಯ ಮಾರ್ವಾಡಿಗಳನ್ನು ಐಟಿ ಅಧಿಕಾರಿಗಳು ಕರೆಸಿಕೊಂಡರು. ಈ ಮಧ್ಯೆ ನಕಲಿ ಕೀ ತಯಾರಿಸುವ ವ್ಯಕ್ತಿಯನ್ನು ಕರೆಸಿಕೊಂಡು ಕೆಲ ಲಾಕರ್‌ಗಳ ಕೀ ತೆಗೆಸಿ, ಪರಿಶೀಲನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 

Advertisement

Udayavani is now on Telegram. Click here to join our channel and stay updated with the latest news.

Next