ಚನ್ನರಾಯಪಟ್ಟಣ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ಮುಂಜಾನೆ ಆರು ಗಂಟೆಗೆ ಪಟ್ಟಣದ ಮೂವರು ಹಾಗೂ ಶ್ರವಣಬೆಳಗೊಳದ ಓರ್ವ ಪ್ರಥಮ ದರ್ಜೆ ಗುತ್ತಿಗೆದಾರರ ಮನೆಯ ಮೇಲೆ ದಾಳಿ ನಡೆಸಿದ್ದಾರೆ.
ಪಟ್ಟಣದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಸಮೀಪದಲ್ಲಿನ ಅಶ್ವತ್ಥನಾರಾಯಣಗೌಡ, ನಾಗಸಮುದ್ರ ರಸ್ತೆಯ ಎಡಿ ಕಾಲೋನಿ ಸಮೀಪದಲ್ಲಿನ ತಿಮ್ಮೇಗೌಡ ರಾಯಪ್ಪ, ಜ್ಞಾನ ಸಾಗರ ಶಿಕ್ಷಣ ಸಂಸ್ಥೆ ಸಮೀಪದ ನಾರಾಯಣರೆಡ್ಡಿ, ಶ್ರವಣಬೆಳಗೊಳ ಕಾರ್ಪೋರೇಷನ್ ಬ್ಯಾಂಕ್ ಸಮೀಪದಲ್ಲಿನ ಅಬ್ದುಲ್ ಹಫೀಜ್ ಈ ನಾಲ್ವರು ಪ್ರಥಮ ದರ್ಜೆ ಗುತ್ತಿಗೆದಾರರಾಗಿದ್ದು ಇವರ ಮನೆ ಮೇಲೆ ಏಕಕಾಲಕ್ಕೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಬೆಂಗಳೂರಿನ ವಾಹನಗಳು: ಬೆಂಗಳೂರು ಆರ್‌ಟಿಒನೋಂದಣಿ ಸಂಖ್ಯೆ ಹೊಂದಿರುವ 8 ಇನ್ನೋವಾ ಇನ್ನೋವಾ ಕಾರಿನಲ್ಲಿ ಬಂದಿದ್ದ ಅಧಿಕಾರಿಗಳು ಲೋಕೋಪಯೋಗಿ ಮಂತ್ರಿ ಎಚ್.ಡಿ.ರೇವಣ್ಣ ಅವರ ಆಪ್ತ ವಲಯ ನಾಲ್ವರು ಗುತ್ತಿಗೆದಾರರ ಮನೆ ಪ್ರವೇಶಿಸಿ ವಿವಿಧ ಬ್ಯಾಂಕ್‌ಗಳ ಪಾಸ್ ಪುಸ್ತಕ, ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಹಣ, ಆಸ್ತಿ ಹಾಗೂ ಗುತ್ತಿಗೆ ಕೆಲಸ ಮಾಡಿರುವ ಬಗ್ಗೆ ದಾಖಲಾಲೆ ಪಡೆದು ಪರಿಶೀಲಿಸಿದರು. ಮಧ್ಯಾಹ್ನ 1.30ರ ವರೆಗೆ ಮನೆಯಲ್ಲಿ ಶೋಧ ನಡೆಸಿದ್ದು ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿದ್ದಾರೆ.
ಮನೆಗೆ ಬಂದು ಊಟಿ ತಿಂಡಿ: ನಿರಂತರವಾಗಿ ಏಳು ತಾಸು ಮನೆಯಲ್ಲಿ ಶೋಧಕಾರ್ಯ ನಡೆಯುತ್ತಿದ್ದರಿಂದ ಕಾಫಿ, ತಿಂಡಿ ಮತ್ತು ಮಧ್ಯಾಹ್ನ ಊಟವನ್ನು ಐಟಿ ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದ ಮನೆಗಳಿಗೆ ತರಿಸಿಕೊಂಡಿದ್ದಾರೆ. ಬೆಳಗ್ಗೆಯಿಂದ ಮನೆಯವರ ಎಲ್ಲಾ ಮೊಬೈಲ್ ಗಳು ಸಿcಚ್ ಆಫ್ ಆಗಿದ್ದವು.
ಊರು ಬಿಟ್ಟ ಕೋಟಿ ಕುಳಗಳು: ಯಾವಾಗ ಬೆಳಗ್ಗೆ 6 ಗಂಟೆಗೆ ರೇವಣ್ಣ ಹಿಂಭಾಲಕರ ಮನೆ ಮೇಲೆ ಐಟಿ ದಾಳಿ ನಡೆಯಿತು ಈ ಸುದ್ದಿ ಕ್ಷಣಾರ್ಧದಲ್ಲಿ ತಾಲೂಕಿಗೆ ಹರಡಿದು ಕೂಡಲೆ ಪಟ್ಟಣದಲ್ಲಿ ನೆಲೆಸಿರುವ ಕೋಟಿ ಕುಳಗಳು, ಕೆಲ ಗುತ್ತಿಗೆದಾರರು ತಮ್ಮ ಮೊಬೈಲ್ ಆಫ್ ಮಾಡಿಕೊಂಡು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಊರು ಬಿಟ್ಟು ತೆರೆಳಿದ್ದಾರೆ.