Advertisement

ರಾಜ್ಯದಲ್ಲಿ ಜನ ಮನೆಯಿಂದ ಹೊರಗೆ ಬರುವುದೂ ಕಷ್ಟವಾಗಬಹುದು: ಸಿದ್ದರಾಮಯ್ಯ ಎಚ್ಚರಿಕೆ

08:55 AM Jul 29, 2022 | Team Udayavani |

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಸರಣಿ ಕೊಲೆಗಳ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲಾಗದ ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Advertisement

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸುಳ್ಯದಲ್ಲಿ ಮಸೂದ್ ಮತ್ತು ಪ್ರವೀಣ್ ನೆಟ್ಟಾರ್ ಹತ್ಯೆ ನಡೆದಿರುವ ಬೆನ್ನಲ್ಲಿಯೇ ಇಂದು ಸುರತ್ಕಲ್ ನಲ್ಲಿ ಫಾಝೀಲ್ ಎಂಬ ಯುವಕನ ಕೊಲೆ ನಡೆದಿರುವುದು ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿರುವುದಕ್ಕೆ ಸಾಕ್ಷಿ. ದಕ್ಷಿಣ ಕನ್ನಡದ ಸರಣಿ ಹತ್ಯೆಗಳನ್ನು ಖಂಡಿಸದೆ, ದುಷ್ಕರ್ಮಿಗಳನ್ನು ಬಂಧಿಸಿ ಜೈಲಿಗೆ ಅಟ್ಟದೆ, ಅವರ ದುಷ್ಕೃತ್ಯವನ್ನು ಕ್ರಿಯೆಗೆ-ಪ್ರತಿಕ್ರಿಯೆ ಎಂಬ ಸಮರ್ಥನೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಇದಕ್ಕೆ ಹೊಣೆಗಾರರು. ಅವರು ಜಿಲ್ಲೆಯಲ್ಲಿರುವಾಗಲೇ ನಡೆದಿರುವ ಹತ್ಯೆ ಅವರ ಮುಖಕ್ಕೆ ಮಂಗಳಾರತಿ ಮಾಡಿದಂತಿದೆ ಎಂದು ಕಿಡಿಕಾರಿದರು.

ಅಸಮರ್ಥ ಗೃಹಸಚಿವರಿಗೆ ಪೊಲೀಸ್ ಇಲಾಖೆಯ ಮೇಲೆ ಯಾವುದೇ ನಿಯಂತ್ರಣ ಇಲ್ಲದಂತಾಗಿದೆ. ಇದರಿಂದಾಗಿ ದುಷ್ಕರ್ಮಿಗಳು ರಾಜಾರೋಷವಾಗಿ ಹತ್ಯಾಕಾಂಡವನ್ನು ಮುಂದುವರಿಸಿದ್ದಾರೆ.  ಮುಖ್ಯಮಂತ್ರಿಗಳು ತಕ್ಷಣ ಗೃಹ ಸಚಿವ ಆರಗ ಜ್ಞಾನೇಂದ್ರರನ್ನು ಕಿತ್ತುಹಾಕದೆ ಇದ್ದರೆ ರಾಜ್ಯದಲ್ಲಿ ಜನ ಮನೆಯಿಂದ ಹೊರಗೆ ಬರುವುದೂ ಕಷ್ಟವಾಗಬಹುದು ಎಂದಿದ್ದಾರೆ.

ಇದನ್ನೂ ಓದಿ:ಪ್ರವೀಣ್‌ ನೆಟ್ಟಾರು ಹತ್ಯೆ ಖಂಡಿಸಿ ಬಾಳೆಹೊನ್ನೂರು ಸ್ವಯಂ ಪ್ರೇರಿತ ಬಂದ್‌

ಕೊಲೆಗಡುಕರು ಯಾವುದೇ ಪಕ್ಷ, ಪಂಥ, ಜಾತಿ, ಧರ್ಮದವರಾಗಿದ್ದರೂ ಅವರನ್ನು ಪತ್ತೆ ಹಚ್ಚಿ ಜೈಲಿಗೆ ಅಟ್ಟಬೇಕಾಗಿರುವ ರಾಜ್ಯ ಬಿಜೆಪಿ ಸರ್ಕಾರ, ಹೆಣಗಳನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರ ಹಾಕುತ್ತಿರುವುದು ಅತ್ಯಂತ ದುರದೃಷ್ಟಕರ. ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ಹೆಡೆಮುರಿ ಕಟ್ಟಿ ಜೈಲಿಗೆ ಅಟ್ಟಬೇಕು. ಆದರೆ ರಾಜ್ಯ ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಹಾಕಲು ಮತ್ತು ಜನಾಕ್ರೋಶವನ್ನು ಶಾಂತಗೊಳಿಸಲು ತನಿಖೆಯ ನೆಪದಲ್ಲಿ ಆರೋಪಿಗಳ ಹೊರತಾಗಿ ಅಮಾಯಕರಿಗೂ ಕಿರುಕುಳ ನೀಡುವುದು ಸಲ್ಲದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next