“ಹ್ಯಾಪಿ ನ್ಯೂ ಇಯರ್’ ಸಿನಿಮಾ ಬಗ್ಗೆ ನಿರ್ದೇಶಕ ಪನ್ನಗಭರಣ ಹೀಗೆ ಮಾತು ಶುರು ಮಾಡುತ್ತಾರೆ. ಅದಕ್ಕೆ ಕಾರಣ ಚಿತ್ರದಲ್ಲಿರುವ ಸ್ಟಾರ್ಕಾಸ್ಟ್. ಐದು ಜೋಡಿಗಳ ಸುತ್ತ ಸುತ್ತುವ ಒಂದು ಚಿತ್ರ. ಹಾಗಾಗಿ 10 ಪ್ರಮುಖ ಕಲಾವಿದರೇ ಅಲ್ಲಿದ್ದಾರೆ. ವಿಜಯ್ ರಾಘವೇಂದ್ರ, ಸಾಯಿಕುಮಾರ್, ಧನಂಜಯ್, ದಿಗಂತ್, ಶ್ರುತಿ ಹರಿಹರನ್, ಮಾರ್ಗರಿಟ, ರಾಶಿ ಪೊನ್ನಪ್ಪ, ಸೋನು ಗೌಡ ಮತ್ತು ಸೃಷ್ಟಿ ಪಾಟೀಲ್ ಅಭಿನಯಿಸುತ್ತಿದ್ದಾರೆ.
ಚಿತ್ರದ ನಿರ್ಮಾಪಕ ಬಿ.ಸಿ.ಪಾಟೀಲ್ ಕೂಡಾ ಇಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಮೊದಲ ನಿರ್ದೇಶನದಲ್ಲೇ ಇಷ್ಟೊಂದು ದೊಡ್ಡ ತಾರಾಬಳಗದ ಜೊತೆ ಕೆಲಸ ಮಾಡಿದ ಖುಷಿ ಕೂಡಾ ಪನ್ನಗಭರಣ ಅವರಿಗಿದೆ. “ಇದು ಐದು ಜೋಡಿಗಳ ಸುತ್ತ ಸುತ್ತುವ ಕಥೆ. ಒಂದೊಂದು ಟ್ರ್ಯಾಕ್ಗಳು ಕೂಡಾ ಅದರ ಪಾಡಿಗೆ ನಡೆಯುತ್ತಿರುತ್ತದೆ. ಒಂದು ಹಂತದಲ್ಲಿ ಎಲ್ಲವೂ ಕನೆಕ್ಟ್ ಆಗುತ್ತದೆ’ ಎನ್ನುವ ಪನ್ನಗಭರಣ ತಮ್ಮ ನಿರ್ದೇಶನ ಕನಸು, ಪಾತ್ರಗಳ ಆಯ್ಕೆಯ ಬಗ್ಗೆಯೂ ಮಾತನಾಡುತ್ತಾರೆ.
“ನನಗೆ ನಿರ್ದೇಶನ, ಬಹಳ ಇಷ್ಟವಾದ ವಿಷಯ. ಅದಕ್ಕಾಗಿ ಇಷ್ಟು ವರ್ಷ ಕಾದೆ ಮತ್ತು ಅದೀಗ ನಿಜವಾಗಿದೆ. ಒಂದೊಂದು ಪಾತ್ರ ಬರೆಯುವಾಗಲೂ, ಆ ಪಾತ್ರಕ್ಕೆ ಯಾರಿದ್ದರೆ ಚೆನ್ನ ಎಂದು ನಾನು ಆಸೆ ಪಟ್ಟಿದ್ದೆನೋ, ಅದು ನಿಜವಾಗಿದೆ. ಒಳ್ಳೆಯ ತಂಡವೊಂದು ಸಿಕ್ಕಿದೆ. ಇದು ಇಂಥಾ ಜಾನರ್ನ ಸಿನಿಮಾ ಎಂದು ಹೇಳುವುದು ಕಷ್ಟ. ಕಾಮಿಡಿ, ಥ್ರಿಲ್ಲರ್ ಎಲ್ಲಾ ಅಂಶಗಳೂ ಈ ಚಿತ್ರದಲ್ಲಿದೆ. ಐದು ಕಥೆಗಳ ಮಿಕ್ಸ್ಚರ್ ಈ ಚಿತ್ರ ಎಂದರೆ ತಪ್ಪಿಲ್ಲ.
ಈ ಕಥೆಯನ್ನು ಅಪ್ಪನಿಗೆ ಹೇಳಿ ಒಪ್ಪಿಸಿದೆ. ಅವರ ಅಭಿಪ್ರಾಯ ಪಡೆದು ಇಂಪ್ರೊವೈಸ್ ಮಾಡಿದ್ದೇನೆ’ ಎಂದು ತಮ್ಮ ಸಿನಿಮಾ ಜರ್ನಿ ಬಗ್ಗೆ ಹೇಳುತ್ತಾರೆ ಪನ್ನಗ. ಈ ಚಿತ್ರದಲ್ಲಿ ಇಷ್ಟೊಂದು ಮಂದಿ ಕಲಾವಿದರು ನಟಿಸಿದರೂ ಅಷ್ಟೂ ಜನ ಒಟ್ಟಿಗೆ ತೆರೆಮೇಲೆ ಸೇರಿರಲಿಲ್ಲ. ಪನ್ನಗ ಈಗ ಆಸೆಯನ್ನೂ ಈಡೇರಿಸಿಕೊಂಡಿದ್ದಾರೆ. “ಹ್ಯಾಪಿ ನ್ಯೂ ಇಯರ್’ ಎಂಬ ಟೈಟಲ್ಗೆ ತಕ್ಕಂತೆ ಚಿತ್ರದಲ್ಲೊಂದು ನ್ಯೂ ಇಯರ್ ಸಾಂಗ್ ಇಟ್ಟಿದ್ದಾರೆ.
ಚಿತ್ರದ ಎಲ್ಲಾ ಕಲಾವಿದರು ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಆ ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ಕೂಡಾ ವ್ಯಕ್ತವಾಗುತ್ತಿದೆ. ಸಿನಿಮಾದ ಕಥೆ ಯಾವ ಜಾನರ್ಗೆ ಸೇರುತ್ತದೆ ಎಂದರೆ ಆ ಬಗ್ಗೆ ಪನ್ನಗ ಏನೂ ಹೇಳುವುದಿಲ್ಲ. ಅವೆಲ್ಲವನ್ನು ತೆರೆಮೇಲೆಯೇ ನೋಡಿ ಆನಂದಿಸಬೇಕೆಂಬುದು ಅವರ ಮಾತು.