ಶಿರಸಿ: ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆ ಮತ್ತು ಸ್ಫಂದನೆಗಾಗಿ ಬೆಳಗಾವಿಯಲ್ಲಿ ಜರುಗಿದ ಚಳಿಗಾಲದ ವಿಧಾನ ಮಂಡಲದ ಅಧಿವೇಶನದಲ್ಲಿ ಅರಣ್ಯವಾಸಿಗಳ ಸಮಸ್ಯೆಗಳನ್ನು ಚರ್ಚೆಗೆ ಸರಕಾರ ಪ್ರಾಮುಖ್ಯತೆ ನೀಡದೆ ಇರುವುದು ವಿಷಾದಕರ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್‍ನಲ್ಲಿ ಇತ್ತೀಚಿನ ದಿನಗಳಲ್ಲಿ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಸಂದರ್ಭದಲ್ಲಿ ಅನಧೀಕೃತ ಅರಣ್ಯವಾಸಿಗಳಿಗೆ ತಕ್ಷಣ ಒಕ್ಕಲೆಬ್ಬಿಸಬೇಕು, ಸರಕಾರದ ಯಾವುದೇ ಸೌಲಭ್ಯ, ಸವಲತ್ತುಗಳನ್ನು ನಿರ್ಬಂಧಿಸಬೇಕು, ಅರಣ್ಯಹಕ್ಕು ಕಾಯಿದೆ ಜಾರಿಗೆ ಬಂದು ಒಂದುವರೆ ದಶಕ ಕಳೆದರೂ ರಾಜ್ಯದಲ್ಲಿ ಅರ್ಜಿಗಳ ವಿಲೇವಾರಿ ಹಿನ್ನೆಡೆಯಾಗಿದ್ದು, ಮಂಜೂರಿಗೆ ಕಾನೂನಾತ್ಮಕ ತೊಡಕು, ಇಚ್ಛಾಶಕ್ತಿಯ ಕೊರತೆ ಮತ್ತು ಅರಣ್ಯ ಅಧಿಕಾರಿಗಳಿಂದ ನಿರಂತರ ಅರಣ್ಯವಾಸಿಗಳ ಮೇಲೆ ದೌರ್ಜನ್ಯ ನಿಯಂತ್ರಿಸುವ ದಿಸೆಯಲ್ಲಿ ಪ್ರಾಮುಖ್ಯತೆಯ ಆಧಾರದ ಮೇಲೆ ಈ ಅಧಿವೇಶನದಲ್ಲಿ ಚರ್ಚಿಸುವ ಅವಶ್ಯವಿದ್ದಾಗಲೂ ಚರ್ಚಿಸದೇ ಇರುವುದು ಖೇದಕರ ಎಂದರು.
ಚಳಿಗಾಲದ ಅಧಿವೇಶನದಲ್ಲಿ ಸರಕಾರವು ಗಂಭೀರವಾಗಿ ಚರ್ಚಿಸಿ, ಮುಂದಿನ ದಿನಗಳಲ್ಲಿ ಅನಧೀಕೃತ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ದಿಸೆಯಲ್ಲಿ ಪರಿಸರವಾದಿಗಳು ಸುಪ್ರೀಂ ಕೋರ್ಟ್‍ನಲ್ಲಿ ದಾಖಲಿಸಿದ ರಿಟ್ ಪಿಟಿಷನ್ ಅಂತಿಮ ವಿಚಾರಣೆ ಇರುವಂತಹ ಸಂದರ್ಭದಲ್ಲಿ ರಾಜ್ಯ ಸರಕಾರ ಅರಣ್ಯವಾಸಿಗಳ ಪರವಾಗಿ ಪ್ರಮಾಣ ಪತ್ರ ಸಲ್ಲಿಸಬೇಕಿತ್ತು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಬಂದ್‌ಗೆ ಚಿತ್ರೋದ್ಯಮ ನೈತಿಕ ಬೆಂಬಲ: ಸಿನಿಮಾ ರಿಲೀಸ್, ಶೂಟಿಂಗ್ ಯಥಾಸ್ಥಿತಿ
ಕರ್ನಾಟಕದಲ್ಲಿ ಹತ್ತು ಲಕ್ಷಕ್ಕೂ ಮಿಕ್ಕಿ ಅರಣ್ಯ ಕುಟುಂಬಗಳಿದ್ದಾಗಲೂ ಪ್ರಚಾರದ ಕೊರತೆಯಿಂದ ಕೇವಲ 2,92,537 ಅರ್ಜಿಗಳು ಬಂದಿದ್ದು, ಅವುಗಳಲ್ಲಿ 1,84,358 ಅರ್ಜಿಗಳು ತೀರಸ್ಕಾರವಾಗಿ ಬಂದಿರುವಂಥ ಅರ್ಜಿಗಳಲ್ಲಿ ಶೇ. 63.02 ಅರ್ಜಿಗಳು ತೀರಸ್ಕಾರವಾದರೇ, ರಾಜ್ಯದಲ್ಲಿ ಇಂದಿನವರೆಗೆ ಕೇವಲ 15,798 ಅರ್ಜಿಗಳಿಗೆ ಮಾತ್ರ ಹಕ್ಕು ಮಾನ್ಯತೆ ದೊರಕಿದೆ. ಶೇ. 5.40 ರಷ್ಟು ಅರ್ಜಿಗಳಿಗೆ ಮಾನ್ಯತೆ ದೊರಕಿದೆ ಎಂದು ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.