Advertisement

ಜನಸಂಖ್ಯಾ ನೀತಿ ಪರಿಷ್ಕರಣೆಗಿದು ಸಕಾಲ

11:54 PM Oct 18, 2022 | Team Udayavani |

ವಿಶ್ವದ ಒಟ್ಟು ಭೂಪ್ರದೇಶದ ಕೇವಲ ಶೇ.2.4 ಭಾಗ ನಮ್ಮ ದೇಶ ಹೊಂದಿದ್ದರೆ ಜನಸಂಖ್ಯೆಯ ವಿಷಯಕ್ಕೆ ಬಂದಾಗ ನಮ್ಮ ಪಾಲು ವಿಶ್ವದ ಜನಸಂಖ್ಯೆಯ ಶೇ. 17ರಷ್ಟು. ಅರ್ಥಾತ್‌ ಭೂ ಪ್ರದೇಶಕ್ಕೆ ಹೋಲಿಸಿದರೆ ಏಳು ಪಟ್ಟು ಅಧಿಕ ಗಾತ್ರದ ಜನಸಂಖ್ಯೆ ಯನ್ನು ಹೊಂದಿರುವ ಭಾರತ ಅನಿಯಂತ್ರಿತವಾಗಿ ಹೆಚ್ಚುತ್ತಿರುವ ತನ್ನ ಜನಸಂಖ್ಯಾ ವೃದ್ಧಿಯ ಕುರಿತು ಎಚ್ಚೆತ್ತುಕೊಳ್ಳಬೇಕಾಗಿದೆ. ಜನಸಂಖ್ಯೆಯ ಒತ್ತಡದಿಂದಾಗಿಯೇ ಸರಕಾರಿ ಮತ್ತು ಅರಣ್ಯ ಭೂಮಿ ಒತ್ತುವರಿ ಹೆಚ್ಚುತ್ತಿದೆ. ವಾಯು- ಜಲ-ಶಬ್ದ ಮಾಲಿನ್ಯ, ಅತಿವೃಷ್ಟಿ-ಅನಾವೃಷ್ಟಿ, ತಾಪಮಾನ ಏರಿಕೆಯೇ ಮೊದಲಾದ ಹತ್ತು ಹಲವು ಸಮ ಸ್ಯೆಗಳು ಒಂದಲ್ಲ ಒಂದು ರೀತಿಯಲ್ಲಿ ಏರು ಗತಿ ಯಲ್ಲಿರುವ ಜನಸಂಖ್ಯೆಯೊಂದಿಗೆ
ಬೆಸೆದುಕೊಂಡಿದೆ.

Advertisement

ಅರಾವಳಿ ಪರ್ವತ ಶ್ರೇಣಿಯ ಹರಿಯಾಣದ ಖೋರಿ ಹಳ್ಳಿಯಲ್ಲಿ ಕಾನೂನು ಬಾಹಿರವಾಗಿ ಒತ್ತುವರಿ ಮಾಡಿಕೊಂಡಿದ್ದ ಅರಣ್ಯ ಭೂಮಿಯನ್ನು ತೆರವು ಗೊಳಿಸುವಂತೆ ಸುಪ್ರಿಂ ಕೋರ್ಟ್‌ ಹರಿಯಾಣ ಸರಕಾರಕ್ಕೆ ಇತ್ತೀಚೆಗೆ ಆದೇಶ ನೀಡಿತ್ತು. ಅಧಿಕಾರಿಗಳು ಮತ್ತು ಭೂ ಮಾಫಿಯದ ನೆರವಿನಿಂದ ನೀರು, ವಿದ್ಯುತ್‌ ಮೊದಲಾದ ಸೌಕರ್ಯದೊಂದಿಗೆ ಹಲವಾರು ವರ್ಷಗಳಿಂದ ಅಲ್ಲಿ ನೆಲೆಸಿದ್ದ ನಿವಾಸಿಗಳು ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿಗಳು ಮತ್ತು ಪೊಲೀಸರ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ ಮಾಡಿದರು. ಇಂತಹ ಘಟನೆಗಳು ದೇಶಾದ್ಯಂತ ನಡೆಯುತ್ತಿರುತ್ತವೆ.

2019ರ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದಿಲ್ಲಿಯ ಕೆಂಪುಕೋಟೆಯಿಂದ ಮಾಡಿದ ಭಾಷಣದಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ಕರೆ ನೀಡಿದ್ದರು. ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮ ಅವರು ರಾಜ್ಯದಲ್ಲಿ ಎರಡು ಮಕ್ಕಳ ನೀತಿಯನ್ನು ಹಂತ ಹಂತವಾಗಿ ಜಾರಿಗೆ ತರುವುದಾಗಿ ಘೋಷಿಸಿದ್ದಾರೆ. ಸರಕಾರದ ಯೋಜನೆಗಳು, ಸಾಲ ಮನ್ನಾದಂತಹ ಸರಕಾರಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಮಿತ ಸಂತಾನದ ನಿಯಮ ಪಾಲಿಸದವರು ಸೌಲಭ್ಯ ವಂಚಿತರಾಗ ಬೇಕಾ ಗಬಹುದು ಎನ್ನುವ ಸೂಚನೆ ನೀಡಿದ್ದಾರೆ.

1951ರಲ್ಲಿ ಜನಸಂಖ್ಯಾ ನೀತಿ ರೂಪಿಸಿದ ಮೊದಲ ವಿಕಾಸಶೀಲ ರಾಷ್ಟ್ರ ಎನ್ನುವ ಹೆಗ್ಗಳಿಕೆ ನಮ್ಮದಾದರೂ ಈ ದಿಸೆಯಲ್ಲಿ ನಾವು ಸಾಧಿಸಿದ ಪ್ರಗತಿ ಆಶಾದಾಯಕವಲ್ಲ ಎನ್ನಬೇಕಾಗುತ್ತದೆ. ತುರ್ತು ಸ್ಥಿತಿಯಲ್ಲಿ ಅನುಸರಿಸಿದಂತೆ ಬಲ ಪೂರ್ವಕ ವಾಗಿ ಸಂತಾನ ನಿಯಂತ್ರಣದಂತಹ ಕಾರ್ಯ ಕ್ರಮ ಹಮ್ಮಿಕೊಳ್ಳುವುದು ಸರಿಯಲ್ಲ ವಾ ದರೂ ಈ ವಿಷಯದಲ್ಲಿ ಒಂದಷ್ಟು ಕಠಿನ ನಿಯಮ ಅಗತ್ಯ. ಸಮುದ್ರದ ದಡದಲ್ಲಿ ಕುಳಿತು ಮರಳಿನ ಮೇಲೆ ಬರೆಯುತ್ತಿದ್ದರೆ ದಡಕ್ಕೆ ಅಪ್ಪಳಿಸುವ ತೆರೆಗಳು ಬರೆಹಗಳನ್ನು ಅಳಿಸಿ ಹಾಕುತ್ತವೆ. ಮತ್ತೆ ಮತ್ತೆ ಅದೇ ಯತ್ನವನ್ನು ಮುಂದುವರಿಸಿದರೂ ನಿರಂತರ ಬರುವ ತೆರೆಗಳು ಪ್ರತೀ ಪ್ರಯತ್ನವನ್ನು ನಿರರ್ಥಕವಾಗಿಸುವಂತೆ ಅನಿಯಂತ್ರಿತವಾಗಿ ಹೆಚ್ಚುತ್ತಿರುವ ಜನಸಂಖ್ಯೆ ದೇಶ ಸಾಧಿಸುತ್ತಿರುವ ಪ್ರಗತಿಯನ್ನು ತಿಂದು ಹಾಕಿ ಬಿಡುತ್ತವೆ ಎನ್ನುವುದು ವಾಸ್ತವ. ಕ್ರಿ.ಶ. 1798ರಷ್ಟು ಹಿಂದೆಯೇ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸದಿದ್ದರೆ ಪ್ರಕೃತಿಯೇ ನಿಯಂತ್ರಿಸಲು ಮುಂದಾಗುತ್ತದೆ ಎಂದು ಬ್ರಿಟಿಷ್‌ ಅರ್ಥಶಾಸ್ತ್ರಜ್ಞ ಥೋಮಸ್‌ ರೋಬರ್ಟ್‌ ಮಾಲ್ತಸ್‌ ಎಚ್ಚರಿಸಿದ್ದ.

ಆಹಾರೋತ್ಪಾದನೆ ಅಂಕಗಣಿತೀಯ ಅನುಪಾತದಲ್ಲಿ (2,4,6,8,10…) ಹೆಚ್ಚಿದರೆ ಜನಸಂಖ್ಯೆ ರೇಖಾಗಣಿತೀಯ ಅನುಪಾತದಲ್ಲಿ (2,4,8,16,32..) ತೀವ್ರ ಗತಿಯಲ್ಲಿ ಹೆಚ್ಚುತ್ತದೆ ಎನ್ನುವ ಮಾಲ್ತಸನ ಪ್ರತಿಪಾದನೆ ಕುರಿತು ಕೊರೊನಾದಿಂದ ಕಂಗೆಟ್ಟ ಆರ್ಥಿಕತೆಯ ಹಿನ್ನೆಲೆಯಲ್ಲಿ ಇನ್ನಷ್ಟು ಗಂಭೀರವಾಗಿ ಚಿಂತಿಸಬೇಕಾಗಿದೆ.

Advertisement

ದೇಶ ಸ್ವತಂತ್ರವಾದಾಗ 30 ಕೋಟಿ ಇದ್ದ ಜನಸಂಖ್ಯೆ ಈಗ 130 ಕೋಟಿ ದಾಟಿದೆ. ಆಹಾರ ಧಾನ್ಯಗಳ ಪೂರೈಕೆಗಾಗಿ ವಿದೇಶಗಳನ್ನು ಅವಲಂಬಿಸಿದ್ದ ನಾವು ಹಸುರು ಕ್ರಾಂತಿಯ ಮೂಲಕ ಅಭೂತಪೂರ್ವ ಸಾಧನೆ ಮಾಡಿದ್ದೇವೆ. ಅಂದು 50 ಮಿಲಿಯನ್‌ ಟನ್‌ ಇದ್ದ ಆಹಾರ ಧಾನ್ಯ ಉತ್ಪಾದನೆ 250 ಮಿಲಿಯನ್‌ ಟನ್‌ಗೆ ಏರಿದೆ. ನಾಗಾಲೋಟದಿಂದ ಏರುತ್ತಿರುವ ಜನಸಂಖ್ಯೆ ನಾವು ಸಾಧಿಸಿದ ಸಾಧನೆಯನ್ನೆಲ್ಲ ನುಂಗಿ ಹಾಕಿದೆ. ಶಿಕ್ಷಣ, ಸ್ವಾಸ್ಥ್ಯ, ಉದ್ಯೋಗ ಕ್ಷೇತ್ರಗಳಲ್ಲಿ ನಮ್ಮ ಪ್ರಗತಿ ಗಣನೀಯವಾಗಿದ್ದರೂ “ಆನೆಯ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ’ ಎನ್ನುವಂತಾಗಿದೆ.

ಎಲ್ಲವನ್ನೂ ರಾಜಕೀಯ ಲಾಭ-ನಷ್ಟ ದೃಷ್ಟಿಯಿಂದ ನೋಡುವ ನಮ್ಮ ರಾಜಕೀಯ ಪಕ್ಷಗಳ ನಿಲುವಿನಿಂದಾಗಿಯೇ ಅಧಿಕಾರದಲ್ಲಿರುವ ಯಾವುದೇ ರಾಜಕೀಯ ಪಕ್ಷ ಜನಸಂಖ್ಯಾ ನಿಯಂತ್ರಣದಂತಹ ಸಂವೇದನಾಶೀಲ ವಿಷಯವನ್ನು ಕೈಗೆತ್ತಿಕೊಳ್ಳದೇ ಜನರ ತೀರ್ಮಾನಕ್ಕೆ ಬಿಟ್ಟಿವೆ. ಸರಕಾರಗಳ ಇಂತಹ ಅಸ್ಪಷ್ಟ ನಿಲುವಿನಿಂದಾಗಿಯೇ ಜನಸಂಖ್ಯೆ ನಾಗಾಲೋಟದಿಂದ ಮುಂದೆ ಸಾಗುತ್ತಿದೆ.

ಹುಟ್ಟಿಸಿದವ ಹುಲ್ಲು ಮೇಯಿಸುವುದಿಲ್ಲ, ಬಚ್ಚೇ ಊಪರ್‌ ವಾಲೇ ಕಾ ದೇನ್‌ ಹೈ ಎಂದು ವಾದಿಸುವ ಧಾರ್ಮಿಕ-ರಾಜಕೀಯ ನಾಯಕರ ವಿರೋಧ ಜನಸಂಖ್ಯಾ ನಿಯಂತ್ರಣ ಕ್ರಮ ಕೈಗೊಳ್ಳಲು ಬಲು ದೊಡ್ಡ ಅವರೋಧಕವಾಗಿದೆ. ದೇಶದ ಪ್ರಗತಿಗೆ ದೊಡ್ಡ ಬಾಧಕವಾಗಿರುವ ಮತ್ತು ಜನರ ಜೀವನ ಮಟ್ಟಕ್ಕೆ ನೇರವಾಗಿ ಸಂಬಂಧಿಸಿರುವ ಈ ವಿಷಯದಲ್ಲಿ ಚಿಂತಕರೂ ಮೌನವಾಗಿರುವುದು ಖೇದಕರ. ಜನಸಂಖ್ಯಾ ನೀತಿಯನ್ನು ತಮ್ಮ ಧಾರ್ಮಿಕ ವಿಷಯದಲ್ಲಿ ಹಸ್ತಕ್ಷೇಪ ಎಂದು ವಿರೋಧಿಸುವುದು ಸರಿಯಲ್ಲ. ಜನಸಂಖ್ಯೆ ನಿಯಂತ್ರಣ ಕ್ರಮಗಳು ದೇಶದ ಹಿತದೃಷ್ಟಿ ಯಿಂದಲೂ ಮತ್ತು ಎಲ್ಲ ನಾಗರಿಕರಿಗೂ ಉತ್ತಮ ಬದುಕನ್ನು ಕೊಡುವ ಸಂವಿಧಾನದ ಆಶಯದ ದೃಷ್ಟಿಯಿಂದಲೂ ಮಹತ್ವಪೂರ್ಣ ವಿಷಯ ಎಂದು ಎಲ್ಲರೂ ತಿಳಿಯಬೇಕಾಗಿದೆ.

ರಾಜಕೀಯ ಇಚ್ಛಾಶಕ್ತಿ ಅಗತ್ಯ
ಎಲ್ಲವನ್ನೂ ರಾಜಕೀಯ ಲಾಭ-ನಷ್ಟ ದೃಷ್ಟಿಯಿಂದ ನೋಡುವ ನಮ್ಮ ರಾಜಕೀಯ ಪಕ್ಷಗಳ ನಿಲುವಿನಿಂದಾಗಿಯೇ ಅಧಿಕಾರದಲ್ಲಿರುವ ಯಾವುದೇ ರಾಜಕೀಯ ಪಕ್ಷ ಜನಸಂಖ್ಯಾ ನಿಯಂತ್ರಣದಂತಹ ಸಂವೇದನಾಶೀಲ ವಿಷಯವನ್ನು ಕೈಗೆತ್ತಿಕೊಳ್ಳದೇ ಜನರ ತೀರ್ಮಾನಕ್ಕೆ ಬಿಟ್ಟಿವೆ. ಸರಕಾರಗಳ ಇಂತಹ ಅಸ್ಪಷ್ಟ ನಿಲುವಿನಿಂದಾಗಿಯೇ ಜನಸಂಖ್ಯೆ ನಾಗಾಲೋಟದಿಂದ ಮುಂದೆ ಸಾಗುತ್ತಿದೆ

-ಬೈಂದೂರು ಚಂದ್ರಶೇಖರ ನಾವಡ

Advertisement

Udayavani is now on Telegram. Click here to join our channel and stay updated with the latest news.

Next