Advertisement

ಜನಪ್ರತಿನಿಧಿಗಳು ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ

11:43 PM Dec 20, 2024 | Team Udayavani |

ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಭಾರತದ ಜನತಂತ್ರ ವ್ಯವಸ್ಥೆ ಇತ್ತೀಚಿನ ಕೆಲವು ದಶಕದಿಂದೀಚೆಗೆ ಒಂದಿಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ವಿಶ್ವದ ಹತ್ತು ಹಲವು ರಾಷ್ಟ್ರಗಳಲ್ಲಿನ ಪ್ರಜಾಪ್ರಭುತ್ವ ಆಡಳಿತ ನೆಲಕಚ್ಚಿ ಹೋಗಿದ್ದರೆ ಭಾರತದಲ್ಲಿ ಪ್ರಜಾಪ್ರಭುತ್ವ ಆಡಳಿತ ಅತ್ಯಂತ ಸುಭದ್ರವಾಗಿ ಮುನ್ನಡೆಯುತ್ತಿದೆ ಎಂಬ ಹೆಚ್ಚುಗಾರಿಕೆಯ ನಡುವೆ ಇತ್ತೀಚಿನ ವರ್ಷಗಳಲ್ಲಿ ನಮ್ಮ ಚುನಾಯಿತ ಪ್ರತಿನಿಧಿಗಳು, ನಾಯಕರು ಸಂಸತ್‌ ಮತ್ತು ವಿಧಾನ ಮಂಡಲದ ಒಳಗಡೆ ಹಾಗೂ ಹೊರಗಡೆ ತೋರುತ್ತಿರುವ ವರ್ತನೆ ಮಾತ್ರ ದೇಶದ ಜನತೆಯನ್ನು ತಲೆತಗ್ಗಿಸುವಂತೆ ಮಾಡಿದೆ. ಇದಕ್ಕೆ ತೀರಾ ಇತ್ತೀಚಿನ ನಿದರ್ಶನ ಎಂದರೆ ಸಂಸತ್‌ ಮತ್ತು ರಾಜ್ಯ ವಿಧಾನಮಂಡಲದಲ್ಲಿ ಶುಕ್ರವಾರ ನಡೆದ ಘಟನಾವಳಿಗಳು.

Advertisement

ಕೇಂದ್ರ ಮತ್ತು ರಾಜ್ಯದ ಪ್ರಜಾಪ್ರಭುತ್ವದ ದೇಗುಲಗಳಲ್ಲಿ ಜನಪ್ರತಿನಿಧಿಗಳು ತೋರಿದ ಅತಿರೇಕದ ವರ್ತನೆ, ಆಭಾಸಕಾರಿ ನಡವಳಿಕೆ, ಅಸಭ್ಯ, ಅವಾಚ್ಯ ಮಾತುಗಳ ವಿನಿಮಯ, ಪರಸ್ಪರ ತಳ್ಳಾಟ, ಸಂಘರ್ಷ, ವಾಕ್ಸಮರ, ಪ್ರತಿಭಟನೆ, ದೂಷಣೆ… ಈ ಎಲ್ಲ ಅವಾಂತರಗಳ ಸರಣಿ ನಿಜಕ್ಕೂ ದೇಶದ ಪ್ರಜಾಪ್ರಭುತ್ವದ ಘನತೆ, ಗೌರವಕ್ಕೆ ಕುಂದುಂಟು ಮಾಡಿರುವುದು ಸುಳ್ಳಲ್ಲ. ಆಡಳಿತ ಹಾಗೂ ವಿಪಕ್ಷಗಳ ಚುನಾಯಿತ ಜನಪ್ರತಿನಿಧಿಗಳ ಈ ರಾಜಕೀಯ ಮೇಲಾಟ ಇಡೀ ದೇಶದ ಮಾನವನ್ನು ಹರಾಜು ಹಾಕಿದೆ ಎಂದರೆ ಅದು ಖಂಡಿತ ಅತಿಶಯೋಕ್ತಿಯಾಗಲಾರದು.
ಕಳೆದ ಕೆಲವು ವರ್ಷಗಳಿಂದ ಜನಪ್ರತಿನಿಧಿಗಳು ಇಂತಹ ನಡವಳಿಕೆಗಳನ್ನೇ ಚಾಳಿಯನ್ನಾಗಿಸಿಕೊಂಡಿದ್ದು, ಇಡೀ ದೇಶದ ಪ್ರಜ್ಞಾವಂತ ಜನತೆ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗೆಗೆ ರೋಸಿ ಹೋಗುವಂತೆ ಮಾಡಿದೆ. ಸದನಗಳ ಘನತೆ, ಗಾಂಭೀರ್ಯ, ಗೌರವಕ್ಕೆ ಬೆಲೆ ನೀಡದ ಜನಪ್ರತಿನಿಧಿಗಳಿಂದ ಜನಸಾಮಾನ್ಯರು ಏನನ್ನು ನಿರೀಕ್ಷಿಸಲು ಸಾಧ್ಯ? ನಿಜಕ್ಕಾದರೆ ಸದ್ಯದ ಸ್ಥಿತಿಯಲ್ಲಿ ದೇಶದ ಸಂವಿಧಾನ, ಒಂದು ರಾಷ್ಟ್ರ-ಒಂದು ಚುನಾವಣೆಯಂತಹ ಮಹತ್ತರ ಮತ್ತು ಗಹನವಾದ ವಿಷಯಗಳ ಬಗೆಗೆ ಸದನಗಳಲ್ಲಿ ಚಿಂತನ-ಮಂಥನ ನಡೆಸುವ ಮೊದಲು ಎಲ್ಲ ಜನಪ್ರತಿನಿಧಿಗಳು ಪಕ್ಷಭೇದ ಮರೆತು ತಮ್ಮ ನಡವಳಿಕೆ, ವರ್ತನೆಯ ಬಗೆಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದುದು ಇಂದಿನ ತುರ್ತು.

ಪ್ರಜಾಪ್ರಭುತ್ವದಲ್ಲಿ ಬಹುಮತ ಎನ್ನುವುದು ಕೇವಲ ಸರಕಾರ ನಡೆಸುವುದಕ್ಕಷ್ಟೇ ಸೀಮಿತವೇ ಹೊರತು ಸರ್ವಾಧಿಕಾರ, ನಿರಂಕುಶತೆಗಲ್ಲ ಎಂಬುದನ್ನು ಆಡಳಿತ ಪಕ್ಷ ಹಾಗೂ ಕೇವಲ ಅಧಿಕಾರದ ಹಪಾಹಪಿಯಲ್ಲಿ ಸರಕಾರದ ವಿರುದ್ಧ ದಂಗೇಳುವುದನ್ನೇ ಚಾಳಿಯಾಗಿಸಿಕೊಳ್ಳದೆ ಸರಕಾರ ಹಾದಿ ತಪ್ಪಿದಾಗ ಎಚ್ಚರಿಸುವುದೇ ವಿಪಕ್ಷಗಳ ಹೊಣೆಗಾರಿಕೆ ಎಂಬುದನ್ನು ಮೊದಲಾಗಿ ಇತ್ತಂಡಗಳು ಅರ್ಥೈಸಿಕೊಳ್ಳಬೇಕು. ಈ ಬಗ್ಗೆ ಸ್ವತಃ ಎಲ್ಲ ಜನಪ್ರತಿನಿಧಿಗಳು ಮತ್ತು ರಾಜಕೀಯ ಪಕ್ಷಗಳು ಮೊದಲು ಆತ್ಮವಿಮರ್ಶೆ ಮಾಡಿಕೊಳ್ಳಬೇಕು.

ಇನ್ನು ದೇಶದ ಜನತೆ, ಮತದಾನ ಮಾಡುವಲ್ಲಿಗೆ ತನ್ನ ಕರ್ತವ್ಯ ಮುಗಿಯಿತು ಎಂದುಕೊಳ್ಳದೆ ಆಗಿಂದಾಗ್ಗೆ ತಾವು ಆರಿಸಿ ಕಳುಹಿಸಿದ ಜನಪ್ರತಿನಿಧಿಯ ಕಾರ್ಯವೈಖರಿ, ವರ್ತನೆಯ ಮೇಲೂ ನಿಗಾ ಇಡಬೇಕು. ಜನಪ್ರತಿನಿಧಿಯಾದವ ಯಾವ ಪಕ್ಷಕ್ಕೇ ಸೇರಿದವನಾಗಿರಲಿ ಆತನ ವರ್ತನೆ, ನಡವಳಿಕೆಗಳು ದೇಶದ ಪ್ರಜಾಪ್ರಭುತ್ವ, ಕಾನೂನು ವ್ಯವಸ್ಥೆಗೆ ಅತೀತವಾದಲ್ಲಿ ಆತನನ್ನು ನೇರವಾಗಿ ಪ್ರಶ್ನಿಸುವ ಮನೋಭಾವವನ್ನು ಕ್ಷೇತ್ರದ ಜನತೆ ಪ್ರದರ್ಶಿಸಬೇಕು. ಇದನ್ನು ಬಿಟ್ಟು ಈತ ನಮ್ಮ ಪಕ್ಷದ ನಾಯಕ, ಆತ ವಿಪಕ್ಷಕ್ಕೆ ಸೇರಿದವ ಎಂದು ಹುಂಬತನ ಪ್ರದರ್ಶಿಸಿದರೆ ಅದು ತಮಗೆ ತಾವೇ ಮಾಡಿಕೊಳ್ಳುವ ದ್ರೋಹವಾದೀತು ಮತ್ತು ಜನಪ್ರತಿನಿಧಿಗಳ ಇಂತಹ ವರ್ತನೆ, ನಡವಳಿಕೆಗೆ ಇನ್ನಷ್ಟು ಉತ್ತೇಜನ ನೀಡಿದಂತಾಗಲಿದೆ ಎಂಬುದನ್ನು ಮರೆಯಬಾರದು. ಮುಖ್ಯವಾಗಿ ಜನಪ್ರತಿನಿಧಿಗಳನ್ನು ತಿದ್ದುವ ಕಾರ್ಯವನ್ನು ಆಯಾಯ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಮಾಡಬೇಕು. ಹೀಗಾದಾಗ ಮಾತ್ರ ಜನಪ್ರತಿನಿಧಿಗಳ ಈ ಎಲ್ಲ ಕೃತ್ಯಗಳಿಗೆ ಕಡಿವಾಣ ಹಾಕಲು ಮತ್ತು ಪ್ರಜಾಸತ್ತೆಯ ಘನತೆ, ಗೌರವ ಕಾಪಾಡಲು ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next