Advertisement
ಕಲ್ಬುರ್ಗಿಯ ತಮ್ಮ ಮನೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂತಹ ಕಳ್ಳಾಟಗಳಿಗೆ, ಸಣ್ಣಾಟಗಳಿಗೆ, ಕುತಂತ್ರಗಳಿಗೆ ಜಗ್ಗುವ ಮತ್ತು ಕುಗ್ಗುವ ಮನುಷ್ಯ ನಾನಲ್ಲ.”ನಿಜ, ನಾನು ಕಳೆದ 50 ದಿನದಿಂದ ಕ್ಷೇತ್ರಕ್ಕೆ ಬಂದಿಲ್ಲ. ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆಯಲ್ಲಿ ಭಾಗವಹಿಸಿ 511 ಕಿ.ಮಿ. ನಡೆದಿದ್ದೇನೆ. ಆ ನಂತರ ಖರ್ಗೆ ಸಾಹೇಬರ ಎಐಸಿಸಿ ಅಧ್ಯಕ್ಷ ಚುನಾವಣೆಯಲ್ಲಿದ್ದೆ. ಅದಾದ ನಂತರ ಕೋಲಿ ಕಬ್ಬಲಿಗ ಹಾಗೂ ಕುರುಬ ಜನಾಂಗದವರನ್ನು ಎಸ್ ಟಿ ಸೇರಿಸುವಂತೆ ಒತ್ತಾಯಿಸಲು ಕೇಂದ್ರ ಸಚಿವರನ್ನು ಭೇಟಿ ಮಾಡಲು ಮೂರು ದಿನ ದಿಲ್ಲಿಯಲ್ಲಿದ್ದೆ. ಇದು ಕ್ಷೇತ್ರದ ಜನರಿಗೆ ಗೊತ್ತಿದೆ. ನಾನು ಎಲ್ಲಿದ್ದೆ ಎಂದು ಬಿಜೆಪಿಗೆ ಉತ್ತರಿಸುವ ಅಗತ್ಯವಿಲ್ಲ” ಎಂದ ಪ್ರಿಯಾಂಕ್ ಖರ್ಗೆ ಅವರು, ತಮ್ಮ ವಿರುದ್ಧ ಚಿತ್ತಾಪುರದಲ್ಲಿ ಬಿಜೆಪಿ ನಡೆಸಿದ ಪೋಸ್ಟರ್ ಅಭಿಯಾನಕ್ಕೆ ತಿರುಗೇಟು ನೀಡಿದರು.
Related Articles
Advertisement
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೋಳಿ ಅವರ ‘ ಹಿಂದೂ’ ಪದದ ವಿವಾದದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಖರ್ಗೆ ಅವರು, ಬಿಡಿ.. ಈಗದು ಮುಗಿದ ಅಧ್ಯಾಯ. ಹಿಂದೂ ಎಂಬ ಪದ ಪರ್ಶಿಯನ್ ಭಾಷೆಯಿಂದ ಬಂದಿರುವುದಾಗಿ ಅದನ್ನು ತಾವು ಅಧ್ಯಯನ ಮಾಡಿದ್ದಾಗಿ ಮಾನವ ಬಂಧುತ್ವ ವೇದಿಕೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೇಳಿರುವುದಾಗಿ ಅವರೇ ಹೇಳಿದ್ದಾರೆ. ಆ ಬಗ್ಗೆ ಚರ್ಚೆಗೆ ಬರುವಂತೆ ಬಿಜೆಪಿಗರಿಗೆ ಆಹ್ವಾನವನ್ನೂ ನೀಡಿದ್ದಾರೆ. ನಿಮ್ಮ ನಿಲುವು ಸ್ಪಷ್ಟವಾಗಿ ಇದ್ದರೆ ಚರ್ಚೆಗೇಕೆ ಬಿಜೆಪಿಗರು ಹೋಗಿಲ್ಲ? ಈ ಬಗ್ಗೆ ಜಾರಕಿಹೊಳಿ ಅವರು ಎಲ್ಲ ಟಿವಿ ಮಾಧ್ಯಮದವರೊಂದಿಗೆ ಲೈವ್ ಬಂದು ಸ್ಪಷ್ಟನೆ ನೀಡಿದ್ದಾರೆ ಎಂದರು.
ಪ್ರಧಾನಿ ಮೋದಿ ಅವರು ನಮ್ಮ ಕಾಲದಲ್ಲಿ ಅನುಮೋದನೆಗೊಂಡ ಯೋಜನೆಗಳ ಉದ್ಘಾಟನೆ ಮಾಡುತ್ತಿದ್ದಾರೆ ಅಷ್ಟೇ. ಅವರಿಗೆ ಅಭಿವೃದ್ದಿ ಬೇಕಿಲ್ಲ ಆದರೆ ಚುನಾವಣೆ ಬೇಕು. ಗುಜರಾತ್ ಜೊತೆಗೆ ಹಿಮಾಚಲ ಚುನಾವಣೆ ನಡೆಸಬೇಕಿತ್ತು. ಆದರೆ ಕೇವಲ ಹಿಮಾಚಲದಲ್ಲಿ ಮಾತ್ರ ಚುನಾವಣೆ ನಡೆಸುವುದಾಗಿ ಹೇಳಿ ಈಗ ಗುಜರಾತ್ ನಲ್ಲೂ ಚುನಾವಣೆ ನಡೆಸುತ್ತಿದ್ದಾರೆ. ಈಗ ರಾಜ್ಯದಲ್ಲಿಯೂ ಚುನಾವಣೆ ಸಮೀಪಿಸುತ್ತಿದೆ. ಹಾಗಾಗಿ ಪದೇ ಪದೇ ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ಟೀಕಿಸಿದರು.
ಈ ವೇಳೆಯಲ್ಲಿ ಮಾಜಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಸೇರಿದಂತೆ ಕ್ಷೇತ್ರದ ಅನೇಕ ಮುಖಂಡರು ಹಾಜರಿದ್ದರು.