Advertisement

ಭೂಮಿ ಸಂರಕ್ಷಿಸದಿದ್ರೆ ಆಪತ್ತು ಖಚಿತ

04:57 PM Apr 23, 2019 | pallavi |

ಚಿತ್ರದುರ್ಗ: ಮನುಕುಲ ಮತ್ತು ಭೂಮಿ ಉಳಿವಿಗೆ ಎಲ್ಲರೂ ಭೂಮಿಯನ್ನು ಕಾಪಾಡಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಸ್‌.ಬಿ. ವಸ್ತ್ರಮಠ ಕರೆ ನೀಡಿದರು.

Advertisement

ನಗರದ ತರಾಸು ರಂಗಮಂದಿರದಲ್ಲಿ ವಿಶ್ವ ಭೂ ದಿನದ ಅಂಗವಾಗಿ ‘ಇರುವುದೊಂದೇ ಭೂಮಿ, ರಕ್ಷಿಸಿಕೊಳ್ಳೋಣ’ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಗತ್ತಿನ ಭೂಮಿ ಒಂದೇ ಇರುವುದು. ಇದನ್ನು ನಾವು ಸಂರಕ್ಷಿಸದಿದ್ದರೆ ಜೀವ ಸಂಕುಲಗಳು ವಿನಾಶವಾಗಲಿವೆ ಎಂದು ಎಚ್ಚರಿಸಿದರು.

ಭೂಮಿ ಪ್ರಪಂಚದಲ್ಲಿ ಇರುವ ಅಪಾರ ಸಂಖ್ಯೆಯ ಜನರ ಭಾರ ಹೊತ್ತು ನಿಂತಿದೆ. ಭೂಮಿಯ ಮೇಲೆ ಹಲವು ಬಗೆಯ ಜೀವ ಕುಲ, ಭಾಷೆ ವಿಕಸನಗೊಂಡಿದ್ದು ಭೂಮಿ ತಾಯಿಯನ್ನು ರಕ್ಷಿಸುವ ಕಾರ್ಯ ಆಗಬೇಕು. ಭೂಮಿಯ ಮೇಲಿನ ಹಸಿರು ನಾಶವಾಗುತ್ತಿರುವುದರಿಂದ ವಿನಾಶದತ್ತ ಸಾಗುತ್ತಿದೆ. ಅಲ್ಲದೆ ಮನುಷ್ಯ ಸಂಕುಲ ನಾನಾ ಬಗೆಯ ಸಂಕಷ್ಟಕ್ಕೆ ಈಡಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮಾನವ ತನ್ನ ಸ್ವಾರ್ಥಕ್ಕಾಗಿ ಭೂಮಿಯ ಮೇಲಿರುವ ಮರ-ಗಿಡಗಳನ್ನು ಕಡಿದು ಪರಿಸರ ನಾಶ ಮಾಡುತ್ತಿರುವುದರಿಂದ ಅಂತರ್ಜಲ ಮಟ್ಟ ಕಡಿಮೆಯಾಗುತ್ತಿದೆ. ಕುಡಿಯುವ ನೀರಿಗಾಗಿ ಸಾವಿರ ಅಡಿ ಆಳದವರೆಗೆ ಕೊಳವೆಬಾವಿ ಕೊರೆಸಿದರೂ ನೀರು ದೊರಕುತ್ತಿಲ್ಲ. ಇದರಿಂದ ಪರಿಸರ ನಾಶವಾಗಿ ಕಾಡಿನಲ್ಲಿರುವ ಪ್ರಾಣಿಗಳು ನಾಡಿಗೆ ಮತ್ತು ಮನೆಗಳಿಗೆ ಬರುತ್ತಿವೆ ಎಂದರು.

ಭೂಮಿಯನ್ನು ನಾಶ ಮಾಡದೆ ಮುಂದಿನ ಪೀಳಿಗೆಗೆ ಅನು ಕೂಲವಾಗುವಂತೆ ಮರ-ಗಿಡಗಳನ್ನು ಬೆಳೆಸಬೇಕು. ಈ ಮೂಲಕ ಪರಿಸರವನ್ನು ಉಳಿಸಿ ಭೂಮಿಯನ್ನು ರಕ್ಷಿಸಬೇಕು ಎಂದು ತಿಳಿಸಿದರು.

Advertisement

ಸಿವಿಲ್ ನ್ಯಾಯಾಧಿಧೀಶ ಎಸ್‌.ಆರ್‌. ದಿಂಡಲಕೊಪ್ಪ ಮಾತನಾಡಿ, ಮನುಷ್ಯನ ಐಷಾರಾಮಿ ಜೀವನ ಶೈಲಿಯಿಂದ ಪರಿಸರ ನಾಶವಾಗುತ್ತಿದೆ. ಮಾನವ ಕಾಡಿನಲ್ಲಿರುವ ಮರಗಳನ್ನು ಕಡಿದು ತನ್ನ ಮನೆಗಳಿಗೆ ಮುಟ್ಟುಗಳನ್ನಾಗಿ ಬಳಸುತ್ತಿದ್ದಾನೆ. ಅಲ್ಲದೆ ಮನೆ, ಕಟ್ಟಡಗಳ ನಿರ್ಮಾಣಕ್ಕೆ ಕೃಷಿ ಭೂಮಿಯನ್ನು ನಾಶ ಪಡಿಸುತ್ತಿದ್ದಾನೆ. ಪರಿಸರ ನಾಶದಿಂದ ಕುಡಿಯುವ ನೀರು ಸಿಗುತ್ತಿಲ್ಲ. ಲಭ್ಯವಿರುವ ನೀರು ಕಲುಷಿತಗೊಂಡು ಮಾನವನಿಗೆ ಹಲವಾರು ರೋಗಗಳು ಬಂದು ಕಾಯಿಲೆಗೆ ಬಲಿಯಾಗುತ್ತಿದ್ದಾನೆ. ಇದರಿಂದಾಗಿ ಪ್ರಸ್ತುತ ಔಷಧದ ಮೇಲೆ ಹೆಚ್ಚು ಅವಲಂಬಿತನಾಗಿದ್ದಾನೆ ಎಂದರು.

ದೈನಂದಿನ ಬಳಕೆಗಾಗಿ ಅಗತ್ಯ ವಸ್ತುಗಳನ್ನು ಬಳಸಿ ರಸ್ತೆ ಬದಿಗಳಲ್ಲಿ ಎಸೆಯುತ್ತಾರೆ. ಅದರಿಂದ ಪರಿಸರ ಹದಗೆಡುತ್ತಿದೆ. ಇನ್ನಾದರೂ ಸಾರ್ವಜನಿಕರು ಎಚ್ಚೆತ್ತುಕೊಂಡು ಗಿಡಗಳನ್ನು ಬೆಳೆಸಿ ಪರಿಸರವನ್ನು ಸಂರಕ್ಷಿಸಬೇಕು. ಅಂತರ್ಜಲ ಉಳಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ಡಾ| ಎಚ್.ಕೆ.ಎಸ್‌. ಸ್ವಾಮಿ, ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಶಿವರಶ್ಮಿ ಅಕ್ಕ, ರೋಟರಿ ಇನ್ನರ್‌ವ್ಹೀಲ್ ಕ್ಲಬ್‌ ಪೋರ್ಟ್‌ ಅಧ್ಯಕ್ಷೆ ಕೆ.ಬಿ. ಶೈಲಾ ವಿಶ್ವನಾಥ್‌, ಸರ್ಕಾರಿ ವಿಜ್ಞಾನ ಕಾಲೇಜು ಪ್ರಾಧ್ಯಾಪಕ ಪ್ರೊ| ಕೆ.ಕೆ. ಕಾಮಾನಿ ಹಾಗೂ ಎಸ್‌.ಆರ್‌.ಎಸ್‌ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.

ಸಮಾರಂಭಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿಯಿಂದ ತರಾಸು ರಂಗಮಂದಿರದವರೆಗೆ ಜಾಗೃತಿ ಜಾಥಾ ನಡೆಸಲಾಯಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ವಕೀಲರ ಸಂಘ, ಸರ್ಕಾರಿ ವಿಜ್ಞಾನ ಕಾಲೇಜು, ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯ, ಬಾಪೂಜಿ ವಿದ್ಯಾ ಸಂಸ್ಥೆ, ವೆಂಕಟೇಶ್ವರ ಶಿಕ್ಷಣ ಕಾಲೇಜು, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಚಿತ್ರದುರ್ಗ ವಿಜ್ಞಾನ ಕೇಂದ್ರ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ರೋಟರಿ ಇನ್ನರವ್ಹೀಲ್ ಕ್ಲಬ್‌, ಲಯನ್ಸ ಕ್ಲಬ್‌, ವಾಸವಿ ಮಹಿಳಾ ಸಂಘ ಹಾಗೂ ಸೃಷ್ಟಿ ಸಾಗರ ಪ್ರಕಾಶನ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಹೆತ್ತ ತಾಯಿಯನ್ನು ಗೌರವಿಸಬೇಕು. ಅದೇ ರೀತಿ ನಮ್ಮ ಭಾರ ಹೊರುವ ತಾಯಿಯನ್ನೂ ರಕ್ಷಿಸಬೇಕು. ಮನುಷ್ಯರಾದ ನಾವು ಉಸಿರು ಇರುವಾಗಲೂ ಭೂಮಿಯ ಮೇಲಿದ್ದು, ಸತ್ತ ಮೇಲೂ ಭೂಮಿ ತಾಯಿಯ ಮಡಿಲನ್ನೇ ಸೇರುತ್ತೇವೆ. ಹಾಗಾಗಿ ಭೂತಾಯಿಯ ಬಗ್ಗೆ ತಾತ್ಸಾರ ಮಾಡಬಾರದು.
•ಎನ್‌.ಬಿ. ವಿಶ್ವನಾಥ್‌, ವಕೀಲರ ಸಂಘದ ಅಧ್ಯಕ್ಷರು.
Advertisement

Udayavani is now on Telegram. Click here to join our channel and stay updated with the latest news.

Next