ಹುಣಸೂರು: ಕುರಿಗಾಹಿಯೊಬ್ಬರನ್ನು ಹುಲಿ ಹೊತ್ತೊಯ್ದಿರುವ ಭೀತಿಯ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ನೆರರಳಕುಪ್ಪೆ ಬಿ ಹಾಡಿ ಬಳಿಯಲ್ಲಿ ನಡೆದಿದೆ.
ಜೇನುಕುರುಬ ಸಮುದಾಯದ ಜಗದೀಶ್ (65) ಎಂಬವರೇ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿರುವ ವ್ಯಕ್ತಿಯಾಗಿದ್ದಾರೆ.
ಜಗದೀಶ್ ಅವರು ಮಾಮೂಲಿನಂತೆ ಸೋಮವಾರ ಬೆಳಗ್ಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನಲ್ಲಿ ಕುರಿಗಳನ್ನು ಮೇಯಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿರಬಹುದೆಂಬ ಸಂಶಯ ಇದೀಗ ವ್ಯಕ್ತವಾಗಿದೆ.
ಸಾಯಂಕಾಲದ ಸಮಯದಲ್ಲಿ ಕುರಿಗಳೊಂದಿಗೆ ಜಗದೀಶ್ ಮನೆಗೆ ಬಾರದಿದ್ದಾಗ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಟ ನಡೆಸಿದ ಸಂದರ್ಭ ಅರಣ್ಯದ ಹಂದಿ ಹಳ್ಳದಲ್ಲಿ ಜಗದೀಶ್ ಅವರಿಗೆ ಸೇರಿದ್ದೆನ್ನಲಾದ ಟವಲ್, ಛತ್ರಿ ಹಾಗೂ ಚಪ್ಪಲಿ ದೊರಕಿದೆ ಮಾತ್ರವಲ್ಲದೇ ಆ ಸ್ಥಳದಲ್ಲಿ ರಕ್ತದ ಕಲೆಗಳೂ ಸಹ ಪತ್ತೆಯಾಗಿದೆ. ಹಾಗಾಗಿ ಜಗದೀಶ್ ಅವರನ್ನು ಹುಲಿ ಅಥವಾ ಇನ್ಯಾವುದೇ ಕಾಡುಪ್ರಾಣಿ ಹೊತ್ತೊಯ್ದಿರಬಹುದು ಎಂಬ ಶಂಕೆ ಇದೀಗ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಎ.ಸಿ.ಎಫ್. ಪ್ರಸನ್ನಕುಮಾರ್. ಎಸ್.ಐ. ಶಿವಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ನಡುವೆ ಸಾಕಾನೆಗಳಾದ ಗಣೇಶ, ಬಲರಾಮ ಸಹಾಯದಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಪತ್ತೆ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಅಲಿಕಲ್ಲು ಮಳೆಯಿಂದಾಗಿ ಸದ್ಯಕ್ಕೆ ಪತ್ತೆ ಕಾರ್ಯಾಚರಣೆ ಸ್ಥಗಿತಗೊಂಡಿದೆ.