ಬೀದರ: ರಾಜ್ಯದಲ್ಲಿನ ಮೈತ್ರಿ ಸರ್ಕಾರ ಜನರಿಗೆ ಇದ್ದೂ ಸತ್ತಂತೆ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ರವಿವಾರ ಸಂಜೆ ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತವಾಗಿವೆ. ರಾಜ್ಯದ ನೂರಕ್ಕೂ ಹೆಚ್ಚು ತಾಲೂಕುಗಳಲ್ಲಿ ಭೀಕರ ಬರ ಎದುರಾಗಿದೆ. ಸಾಲಮನ್ನಾ ಮಾಡುತ್ತೇನೆ ಎಂದು ಹೇಳಿಕೊಳ್ಳುವ ಸರ್ಕಾರ ಯಾವುದೇ ಕಾರ್ಯ ಮಾಡಿಲ್ಲ. ಅತ್ತ ರೈತರಿಗೆ ಸಾಲ ಮನ್ನಾ ಆಗಿಲ್ಲ, ಇತ್ತ ರಾಜ್ಯದ ಅಭಿವೃದ್ಧಿ ಕಾರ್ಯಗಳೂ ನಡೆಯುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಭೀಕರ ಬರ ಎದುರಾದ ಕಡೆಗಳಲ್ಲಿ ರಾಜ್ಯದ ಸಚಿವರು ಪ್ರವಾಸ ಮಾಡುತ್ತಿಲ್ಲ. ರಾಜ್ಯದ ಮುಖ್ಯಮಂತ್ರಿ ಎಲ್ಲಿ ಇದ್ದಾರೆ ಎಂಬುದು ರಾಜ್ಯದ ಜನತೆಗೆ ಗೊತ್ತಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ನಾವುಗಳು ವಿರೋಧ ಪಕ್ಷದ ಕೆಲಸ ನಿಭಾಯಿಸಬೇಕಾಗಿದೆ. ಇತ್ತೀಚಿಗೆ ನಡೆದ ಉಪ ಚುನಾವಣೆಯಲ್ಲಿ ನಮ್ಮ ತಪ್ಪಿನಿಂದ ನಮಗೆ ಹಿನ್ನಡೆಯಾಗಿದೆ. ಆ ತಪ್ಪು ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಡೆಯಬಾರದು. ಎಲ್ಲಾ ಸಮೀಕ್ಷೆಗಳ ಪ್ರಕಾರ ಮತ್ತೆ ಮೋದಿ ಪ್ರಧಾನಿ ಆಗುತ್ತಾರೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಪಕ್ಷ ಸಂಘಟನೆಯ ಕೆಲಸ ಮಾಡಬೇಕು ಎಂದರು.
ರಾಜ್ಯದ 17 ಸಂಸದರನ್ನು ಉಳಿಸಿಕೊಂಡು, ಇನ್ನೂ ಹೆಚ್ಚು ಕ್ಷೇತ್ರದಲ್ಲಿ ಗೆಲ್ಲಬೇಕಾಗಿದೆ. ಪಕ್ಷದಲ್ಲಿನ ಸಣ್ಣಪುಟ್ಟ ಗೊಂದಲಗಳು ಇದ್ದರೂ ಕೂಡ ಅವುಗಳನ್ನು ದೂರ ಇರಿಸಿ ಕೆಲಸ ಮಾಡಬೇಕಾಗಿದೆ. ಪಕ್ಷದವರೇ ವಿರೋಧ ಪಕ್ಷದವರ ಜೊತೆಗೆ ಕೈಜೋಡಿಸಿ ಪಕ್ಷಕ್ಕೆ ಹಾನಿ ಮಾಡುವ ಕೆಲಸ ನಡೆಯಬಾರದು. ಇದು ಪಕ್ಷಕ್ಕೆ ಮಾಡುವ ಅಪರಾಧ ಎಂದರು.
ಜಿಲ್ಲೆಯ ಸಂಸದ ಖೂಬಾ ಎಲ್ಲ ಪ್ರಮುಖರ ಜೊತೆ ಚುನಾವಣೆಯ ಚರ್ಚೆಗಳನ್ನು ನಡೆಸಿ, ಜಿಲ್ಲೆಯಲ್ಲಿ ಪ್ರವಾಸ ನಡೆಸಬೇಕು ಎಂದು ಸೂಚಿಸಿದ್ದೇನೆ. ಅಧಿವೇಶನ ನಂತರ ಎಲ್ಲಾ ರಾಜಕೀಯ ಪಕ್ಷಗಳು ಸಕ್ರಿಯವಾಗಿ ಚುನಾವಣಾ ಪ್ರಕಿಯೆಗಳನ್ನು ಶುರು ಮಾಡುತ್ತವೆ ಎಂದರು. ಬೀದರ ಕ್ಷೇತ್ರದಿಂದ ಜಯಗಳಿಸಿದ ಭಗವಂತ ಖೂಬಾ ಅವರನ್ನು ಇನ್ನೊಮ್ಮೆ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು ಎಂದು ತಿಳಿಸಿದರು.
ದೇಶದ ಭವಿಷ್ಯ ನೋಡಿ ಪಕ್ಷದ ಕೆಲಸ ಮಾಡಿ. ಬೀದರ ಜಿಲ್ಲೆಯ ಬಿಜೆಪಿಯಲ್ಲಿ ಎಲ್ಲ ಸರಿ ಇಲ್ಲ ಎಂಬುದು ಗೊತ್ತಾಗಿದೆ. ಗೊಂದಲಗಳು ಪಕ್ಷ ಸಂಘಟನೆಗೆ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಪಕ್ಷದ ಮುಖಂಡರಿಗೆ ಸಲಹೆ ನೀಡಿ ಹೇಳಿದರು. ಸಂಸದ ಭಗವಂತ ಖೂಬಾ, ಬಿಜೆಪಿ ಜಿಲ್ಲಾಧ್ಯಕ್ಷ ಡಾ| ಶೈಲೇಂದ್ರ ಬೇಲ್ದಾಳೆ, ಶಾಸಕ ಪ್ರಭು ಚವ್ಹಾಣ, ಮಾಜಿ ಶಾಸಕ ಸುಭಾಷ ಕಲ್ಲೂರ್, ಈಶ್ವರ ಸಿಂಗ್ ಠಾಕೂರ್, ಪದ್ಮಾಕಾರ ಪಾಟೀಲ, ಬಸವರಾಜ ಆರ್ಯ, ಬಸವರಾಜ ಜೆ. ಇದ್ದರು.