ಕಡಬ: ಅಂಬೇಡ್ಕರ್ ಅವರ ಹೋರಾಟದ ಫಲದಿಂದಾಗಿ ಸವಲತ್ತು, ಆಸ್ತಿ, ಉದ್ಯೋಗಳನ್ನು ಪಡೆದು ಸಮಾಜದ ಮುಖ್ಯವಾಹಿನಿಯಲ್ಲಿರುವ ದಲಿತರೇ ಅಂಬೇಡ್ಕರ್ ಅವರನ್ನು ಮರೆತಿರುವುದು ವಿಷಾದದ ಸಂಗತಿ ಎಂದು ಪ್ರಬುದ್ಧ ಭಾರತ ಸಂಘದ ಅಣ್ಣು ಸಾಧನ್ ನುಡಿದರು. ಅವರು ಕಡಬ ತಾಲೂಕು ದಲಿತ ಸಂಘರ್ಷ ಸಮಿತಿಯ ವತಿಯಿಂದ ಕಡಬದ ಅಂಬೇಡ್ಕರ್ ಭವನದಲ್ಲಿ ಜರಗಿದ ಸಂವಿಧಾನ ಶಿಲ್ಪಿ ಡಾ| ಬಾಬಾಸಾಹೇಬ್ ಅಂಬೇಡ್ಕರ್ ಅವರ 128ನೇ ಜನ್ಮ ದಿನಾಚರಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕರ್ನಾಟಕದಲ್ಲಿ ಪ್ರೊ| ಬಿ. ಕೃಷ್ಣಪ್ಪ ಅವರ ಹೋರಾಟದ ಫಲದಿಂದ 6 ಲಕ್ಷ ಎಕರೆ ಭೂಮಿ ದಲಿತ ಸಮುದಾಯಕ್ಕೆ ಸಿಕ್ಕಿದೆ. ಕರ್ನಾಟಕದ ಇತಿಹಾಸದಲ್ಲಿ ಯಾವ ಮಂತ್ರಿಯಿಂದಲೂ ಇದು ಸಾಧ್ಯವಾಗಿಲ್ಲ. ಅಂಬೇಡ್ಕರ್ ಅವರ ವಿಚಾರವನ್ನು ಸರಿಯಾಗಿ ತಿಳಿದುಕೊಳ್ಳದ ನಾವು ಇಂದಿಗೂ ಶೋಷಿತರಾಗಿಯೇ ಇದ್ದೇವೆ. ನಾವೆಲ್ಲರೂ ಒಗ್ಗಟ್ಟಿನಿಂದ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿ ಕಡಬ ತಾಲೂಕು ದಲಿತ ಸಂಘರ್ಷ ಸಮಿತಿಯ ಸಂಚಾಲಕ ಉಮೇಶ್ ಕೋಡಿಂಬಾಳ ಮಾತನಾಡಿ, ಕಡಬ ತಾಲೂಕಿನಲ್ಲಿರುವ ಎಲ್ಲ ದಲಿತ ಸಂಘಟನೆಗಳು ಒಟ್ಟಾದರೆ ಮಾತ್ರ ಡಾ| ಅಂಬೇಡ್ಕರ್ ಅವರು ಕಂಡ ಕನಸನ್ನು ನನಸಾಗಿಸಿ, ಪ್ರಬುದ್ಧ ಭಾರತ ನಿರ್ಮಾಣ ಮಾಡಲು ಸಾಧ್ಯ. ಕಡಬದ ಹೃದಯ ಭಾಗದಲ್ಲಿ ಬೃಹತ್ ಅಂಬೇಡ್ಕರ್ ಭವನ ನಿರ್ಮಿಸುವುದಕ್ಕೆ ನಾವೆಲ್ಲರೂ ಪ್ರಯತ್ನಪಡಬೇಕು ಎಂದರು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ, ದಸಂಸ ಪುತ್ತೂರು ತಾಲೂಕು ಶಾಲೆಯ ಸಂಚಾಲಕ ಗಣೇಶ್ ಗುರಿಯಾನ, ದಲಿತ ಸೇವಾ ಸಮಿತಿಯ ಜಿಲ್ಲಾ ಮುಖಂಡ ಅಣ್ಣು ಎಳ್ತಿಮಾರು, ಅಂಬೇಡ್ಕರ್‌ವಾದ ಸಂಘಟನೆಯ ಜಿಲ್ಲಾ ಮುಖಂಡ ಗುರುವಪ್ಪ ಕಲ್ಲಗುಡ್ಡೆ ಮಾತನಾಡಿದರು. ದಲಿತ ಮುಖಂಡ ದಿ| ಎಂ. ಕೂಸಪ್ಪ ಅವರ ಧರ್ಮ ಪತ್ನಿ ಸುಶೀಲಾ ಕುರಿಯ, ದಲಿತ ಮುಖಂಡರಾದ ಬಾಬು ಸವಣೂರು, ವಿಶ್ವನಾಥ್ ಪುಣತ್ತಾರ್, ನಾಗೇಶ್ ಕುರಿಯಾ, ಹರ್ಷಿತ್ ಕುರಿಯಾ, ರವಿ ಮರ್ದಾಳ, ಪುಟ್ಟಣ್ಣ ತೋಟಂತಿಲ್ಲ, ಮೀನಾಕ್ಷಿ ಬಂಬಿಲ, ಚೆನ್ನು ಮಂತೂರು, ಚಂದ್ರಾವತಿ ಅರ್ಲಪದವು, ಸೀತಾರಾಮ್ ಅರ್ಲಪದವು, ಅಣ್ಣು ಪೇರುಮಜಲು, ಪ್ರವೀಣ್ ಪಾಪೆಮಜಲ್ ಉಪಸ್ಥಿತರಿದ್ದರು. ಹರೀಶ್ ಅಂಕಜಾಲ್ ಸ್ವಾಗತಿಸಿ, ವಂದಿಸಿದರು.
ಒಬಾಮಾಗೂ ಸ್ಫೂರ್ತಿ
ಮುಖಂಡ ಅನಂದ ಮಿತ್ತಬೈಲ್ ಮಾತನಾಡಿ, ಬಲಿಷ್ಠ ರಾಷ್ಟ್ರ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅಂಬೇಡ್ಕರ್ ಅವರೇ ನನಗೆ ಸ್ಫೂರ್ತಿ ಎಂದಿದ್ದಾರೆ. ಆದರೆ ಭಾರತೀಯರಾದ ನಾವು ಅಂಬೇಡ್ಕರ್ ಅವರ ಜಾತಿಯನ್ನು ಹುಡುಕುತ್ತಿರುವುದು ದುರಂತ. ನಮ್ಮ ಸಮುದಾಯಕ್ಕೆ ಅನ್ಯಾಯವಾದಾಗ ಧ್ವನಿ ಎತ್ತದವರು ಸಮುದಾಯದ ನಾಯಕರಾಗಲು ಸಾಧ್ಯವಿಲ್ಲ, ವಿವಿಧ ಸಂಘಟನೆಗಳಲ್ಲಿರುವ ನಾವು ಸಮುದಾಯಕ್ಕೆ, ಸಂವಿಧಾನಕ್ಕೆ ಅಪಚಾರವಾದಾಗ ಹೋರಾಡಬೇಕು. ಆಗಲೇ ನಿಜವಾದ ಅಂಬೇಡ್ಕರ್‌ವಾದಿ ಯಾಗಲು ಸಾಧ್ಯ ಎಂದರು.