Advertisement

ಕಾನೂನು ರಕ್ಷಣೆಯಲ್ಲೇ ಮಹಿಳೆ ಬದುಕುತ್ತಿರೋದು ವಿಷಾದನೀಯ

01:43 PM Jun 08, 2019 | Team Udayavani |

ಹಾನಗಲ್ಲ: ಭಾರತ ಎಷ್ಟೇ ಬದಲಾದರೂ ಇನ್ನೂ ಮಹಿಳೆ ಕಾನೂನು ರಕ್ಷಣೆಯಲ್ಲಿಯೇ ಬದುಕುವಂತಾಗಿರುವುದು ಖೇದದ ಸಂಗತಿ ಎಂದು ಹಾನಗಲ್ಲ ಹಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶೆ ಸುಜಾತಾ ಪಾಟೀಲ ಕಳವಳ ವ್ಯಕ್ತಪಡಿಸಿದರು.

Advertisement

ಹಾನಗಲ್ಲಿನ ಅಂಬೇಡ್ಕರ್‌ ಭವನದಲ್ಲಿ ತಾಲೂಕು ಕಾನೂನು ಸಮಿತಿ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ, ನ್ಯಾಯವಾದಿಗಳ ಸಂಘ ಹಾಗೂ ವಿವಿಧ ಮಹಿಳಾ ಸಂಘಟನೆಗಳ ಆಶ್ರಯದಲ್ಲಿ ‘ಮಹಿಳೆ ಮತ್ತು ಮಕ್ಕಳ ಸಂರಕ್ಷಣೆ ಹಾಗೂ ಅಭಿವೃದ್ಧಿ’ ನಿಮಿತ್ತ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು. ಉತ್ಸಾಹದ ಜೀವನ ನಿಮ್ಮದಾಗಿರಲಿ. ಮಹಿಳಾ ಸಬಲೀಕರಣಕ್ಕೆ ಸರಕಾರ ಬದ್ಧವಿದೆ. ಆದರೆ, ಮಹಿಳೆ ಅದರ ಸದುಪಯೋಗ ಪಡೆಯಬೇಕು. ಮಹಿಳೆ ಅಬಲೆಯಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಪವಿತ್ರ ಸ್ಥಾನವಿದೆ. ಗೃಹಿಣಿಗೆ ಸಹನಶೀಲತೆ ಹೆಚ್ಚು ಬೇಕು. ಕಾನೂನುಗಳು ಸಾಮಾಜಿಕ ಉನ್ನತಿಗಿವೆ ಎಂದ ಅವರು, ಆಸ್ತಿ ಹಕ್ಕು ನಿಯಮ ಸದುದ್ದೇಶಕ್ಕೆ ಬಳಕೆಯಾಗಲಿ ಎಂದರು.

ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸೋಮಶೇಖರ ಕೋತಂಬರಿ ಮಾತನಾಡಿ, ಎಲ್ಲ ವೃತ್ತಿಗಳಲ್ಲಿ ಮಹಿಳೆ ಅತ್ಯಂತ ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಿದ್ದಾಳೆ. 21ನೇ ಶತಮಾನದಲ್ಲಿ ಮಹಿಳೆ ಗಣನೀಯ ಸ್ಥಾನಮಾನಗಳನ್ನು ಪಡೆದಿದ್ದು, ಮೀಸಲಾತಿ ಮೀರಿ ತನ್ನ ಹಕ್ಕನ್ನು ಸಾಧಿಸಿಕೊಂಡಿದ್ದಾಳೆ. ಆದಾಗ್ಯೂ ಇನ್ನೂ ಹತ್ತು ಹಲವು ಸೌಲಭ್ಯಗಳು ಮಹಿಳೆಯರಿಗೆ ಸಿಗಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಗಾಯತ್ರಿ ವಿಪ್ರ ಮಹಿಳಾ ವೇದಿಕೆ ಅಧ್ಯಕ್ಷ ಸುಧಾ ಕೃಷ್ಣರಾವ್‌ ದೇಶಪಂಡೆ ಮಾತನಾಡಿ, ಸಂಘಟಿತ ಹೋರಾಟದಿಂದ ಮಾತ್ರ ಮಹಿಳೆ ತನ್ನ ಸ್ಥಾನಮಾನಗಳನ್ನು ಪಡೆಯಬಲ್ಲಳು. ಇದೆಲ್ಲದರ ನಡುವೆ ತನ್ನ ಹಕ್ಕಿನ ಜೊತೆಗೆ ಮಹಿಳೆ ಕರ್ತವ್ಯವನ್ನೂ ಮರೆಯಬಾರದು. ದೇಶದ ಎಲ್ಲ ಬೆಳವಣಿಗೆಗಳಲ್ಲಿ ಮಹಿಳೆಯ ಪಾತ್ರ ಮುಖ್ಯವಾಗಿದೆ. ಹೀಗಾಗಿ ಮಹಿಳೆ ತನ್ನ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಹಿಂದೆ ಸರಿಯಬಾರದು ಎಂದರು.

ನ್ಯಾಯವಾದಿ ವೀಣಾ ಬ್ಯಾತನಾಳ ಮಹಿಳೆ ಮತ್ತು ಕಾನೂನು ಕುರಿತು ಹಾಗೂ ನಿಂಗಮ್ಮ ದೊಡ್ಡಮನಿ ಮಹಿಳಾ ಸಬಲೀಕರಣದ ಕುರಿತು ಉಪನ್ಯಾಸ ನೀಡಿದರು. ಆರ್‌.ಎಸ್‌.ತಳವಾರ, ಸಹಾಯಕ ಸರಕಾರಿ ಅಭಿಯೋಜಕರಾದ ಸೂರ್ಯನಾರಾಯಣ, ಇಂಧುಮತಿ ಪಾಟೀಲ, ವಿವಿಧ ಸಂಘಟನೆಯ ವಿಜಯಾ ದೇಸಾಯಿ, ಮಧುಮತಿ ಪೂಜಾರ, ಶಾರದಾ ಉದಾಸಿ ಮೊದಲಾದವರು ಅತಿಥಿಗಳಾಗಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next