ಅವನು ಕೃಷ್ಣ ಅಲಿಯಾಸ್ ಕೀಟ್ಲೆ ಕೃಷ್ಣ. ಹೆಸರಿಗೆ ತಕ್ಕಂತೆ ಕೀಟ್ಲೆ ಮಾಡೋದೇ ಅವನ ಕೆಲಸ. ಅದು ಶಾಲೆ ಇರಲಿ, ಬೀದಿ ಬದಿ ಇರಲಿ, ಗೆಳೆಯರಿರಲಿ, ವಯಸ್ಸಾದವರು, ಅಪ್ಪ, ಅಮ್ಮ ಹೀಗೆ ಎಲ್ಲರನ್ನೂ ಸತಾಯಿಸುವ ಜಾಯಮಾನದವನು. ಓದಿನಲ್ಲಿ ಅಷ್ಟೇನು ಮುಂದಿರದ ಕೃಷ್ಣ, ಕೀಟ್ಲೆ ಮಾಡೋದರಲ್ಲೇ ಫೇಮಸ್ಸು. ಅಂಥಾ ಹುಡುಗ ಘಟನೆಯೊಂದರಲ್ಲಿ ಸಂಕಷ್ಟಕ್ಕೆ ಸಿಲುಕುತ್ತಾನೆ, ಆಮೇಲೆ ಏನಾಗುತ್ತೆ ಅನ್ನುವ ಹೊತ್ತಿಗೆ ಸಿನಿಮಾನೇ ಮುಗಿದು ಹೋಗುತ್ತೆ. ಅದರ ನಡುವೆ ಏನೆಲ್ಲಾ ಆಗಿಹೋಗುತ್ತೆ ಎಂಬ ಕುತೂಹಲವಿದ್ದರೆ, ಕೃಷ್ಣ ಕೊಡುವ “ಕ್ವಾಟ್ಲೆ’ ಸಹಿಸಿಕೊಂಡು ಸಿನಿಮಾ ನೋಡಲ್ಲಡ್ಡಿಯಿಲ್ಲ.
ನಿರ್ದೇಶಕರು ಕಥೆಯನ್ನು ಇನ್ನಷ್ಟು ಗಟ್ಟಿಯಾಗಿಸಲು ಸಾಧ್ಯವಿತ್ತು. ನಿರೂಪಣೆಯಲ್ಲಿ ಬಿಗಿಹಿಡಿತ ಸಾಧಿಸಲು ಅವಕಾಶವಿತ್ತು. ಆದರೆ, ಆ ಪ್ರಯತ್ನ ಇಲ್ಲಿ ಪರಿಣಾಮಕಾರಿಯಾಗಿಲ್ಲ. ಅವರು ಏನು ಹೇಳಬೇಕು ಅಂತ ಹೊರಟಿದ್ದಾರೋ ಎಂಬ ಸ್ಪಷ್ಟತೆ ಅವರಿಗೇ ಇದ್ದಂತಿಲ್ಲ. ಹಾಗಾಗಿ, ಕೆಲವೆಡೆ ಗೊಂದಲ ಎನಿಸುತ್ತಾ ಹೋಗುತ್ತೆ. ಫ್ಲ್ಯಾಶ್‌ಬ್ಯಾಕ್‌ನಲ್ಲೊಂದು ಘಟನೆ ತೋರಿಸುವ ನಿರ್ದೇಶಕರು, ಟ್ವಿಸ್ಟ್ ಕೊಡುವ ಧಾವಂತದಲ್ಲಿ ಸ್ಪಷ್ಟತೆಯನ್ನೇ ಮರೆತಿದ್ದಾರೆ. ಕಥೆ ತುಂಬಾ ಸಿಂಪಲ್ ಆಗಿದೆ. ಅದನ್ನು ತೋರಿಸುವ ವಿಧಾನದಲ್ಲಿ ಸಾವಧಾನ ಇದ್ದಿದ್ದರೆ, “ಕೀಟ್ಲೆ ಕೃಷ್ಣ’ ಎಲ್ಲರಿಗೂ ಇಷ್ಟವಾಗುತ್ತಿದ್ದ.
ಇಲ್ಲಿ ಕೃಷ್ಣನ ತುಂಟಾಟ ಕೆಲವೊಮ್ಮೆ ಅತಿಯಾಯ್ತು ಎನಿಸುತ್ತೆ. ಆದರೂ, ಕೆಲವು ಕಡೆ ತೂರಿ ಬರುವ ಅಪ್ಪ, ಅಮ್ಮನ ಪ್ರೀತಿ ವಾತ್ಸಲ್ಯ ಹಾಗೂ ಸೆಂಟಿಮೆಂಟ್ಟು ಕೊಂಚಮಟ್ಟಿಗೆ ಸಿನಿಮಾದ ವೇಗವನ್ನು ಹೆಚ್ಚಿಸುತ್ತದೆ. ಒಂದೊಳ್ಳೆಯ ಸಂದೇಶ ಚಿತ್ರದಲ್ಲಿದೆ. ಆದರೆ, ನಿರ್ದೇಶಕರು ಅದನ್ನು ತೋರಿಸುವಲ್ಲಿ ಎಡವಿದ್ದಾರೆ. ಈಗಿನ ಕಾಲದ ಮಕ್ಕಳ ಮನಸ್ಥಿತಿಯ ಜಾಡು ಹಿಡಿದು ಹೊರಟಿರುವ ನಿರ್ದೇಶಕರು, ಗೊಂದಲಗಳಿಲ್ಲದೆ ನಿರೂಪಣೆಯನ್ನು ಕಟ್ಟಿಕೊಟ್ಟಿದ್ದರೆ, ಕೃಷ್ಣ “ಕೀಟ್ಲೆ’ ಕೊಟ್ಟಿದ್ದಕ್ಕೂ ಸಾರ್ಥಕ ಎನಿಸುತ್ತಿತ್ತು. ಆದರೆ, ಇಲ್ಲಿ ಅಂತಹ ಯಾವುದೇ “ಪವಾಡ’ ನಡೆದಿಲ್ಲ ಎನ್ನುವುದೇ ಬೇಸರದ ಸಂಗತಿ.
ಕೃಷ್ಣನ ಅಪ್ಪ (ನೀನಾಸಂ ಅಶ್ವತ್ಥ್) ಊರೊಂದರ ಸ್ಥಿತಿವಂತ ಕುಟುಂಬದವನು. ಅನಾಥಾಶ್ರಮದಲ್ಲಿ ಬೆಳೆದ ವಿಶಾಲಾಕ್ಷಿ (ಸ್ಪಂದನಾ) ಎಂಬ ಹುಡುಗಿಯನ್ನು ಪ್ರೀತಿಸಿ, ಮನೆಯವರನ್ನು ಒಪ್ಪಿಸಿ ಮದುವೆಯಾಗುತ್ತಾನೆ. ಆ ನಂತರದ ದಿನದಲ್ಲೇ ಆ ಕುಟುಂಬದವರೆಲ್ಲರೂ ಘಟನೆಯೊಂದರಲ್ಲಿ ಸಾವನ್ನಪ್ಪುತ್ತಾರೆ. ಅನಾಥೆಯನ್ನು ಬಾಳಸಂಗಾತಿಯನ್ನಾಗಿ ಪಡೆದ ಅವನು ಅಕ್ಷರಶಃ ಅನಾಥನಾಗುತ್ತಾನೆ. ಅದಾಗಲೇ, ಆ ದಂಪತಿ ಒಂದು ಮಗುವನ್ನು ಸಾಕತೊಡಗಿರುತ್ತೆ. ಆದರೆ, ಅವರಿಬ್ಬರಿಗೆ ಹುಟ್ಟಿದ ಮಗು ಅದಲ್ಲ. ಅವನೇ ಕೀಟ್ಲೆ ಕೃಷ್ಣ.
ಕುಟುಂಬ ಕಳೆದುಕೊಂಡ ಕೃಷ್ಣನ ಅಪ್ಪ, ಊರು ಬಿಟ್ಟು ಬೇರೊಂದು ಊರಿಗೆ ಬಂದು ನೆಲೆಸಿರುತ್ತಾನೆ. ತಾನೊಬ್ಬ ಅನಾಥ ಅನ್ನುವ ವಿಷಯ ಕೃಷ್ಣನ ಕಿವಿಗೆ ಬೀಳುವುದೇ ತಡ, ಅಲ್ಲಿಂದ ಕೃಷ್ಣನ ತುಂಟಾಟಕ್ಕೆ ಬ್ರೇಕ್ ಬೀಳುತ್ತೆ. ಶಾಲೆ ಗೆಳೆಯರ ಜತೆ ಪ್ರವಾಸ ಹೋಗುವ ಕೃಷ್ಣ, ಅಲ್ಲೊಂದು ಕಿಡ್ನಿ ಮಾಫಿಯಾವನ್ನೇ ಬಯಲಿಗೆಳೆಯುತ್ತಾನೆ. ಅದು ಹೇಗೆ ಅನ್ನೋದೇ ರೋಚಕ! ಒಬ್ಬ ಹುಡುಗ ಸಮಯಪ್ರಜ್ಞೆ ಮೆರೆದರೆ, ದೊಡ್ಡ ಅನಾಹುತ ತಪ್ಪಿಸಬಹುದು ಎಂಬುದೇ ಕಥಾ ಸಾರಾಂಶ. ಅದನ್ನು ತೋರಿಸುವ ಹೊತ್ತಿಗೆ ನಿರ್ದೇಶಕರು ಪಟ್ಟ “ಹರಸಾಹಸ’ ಎಷ್ಟೆಂಬುದು ಗೊತ್ತಾಗುತ್ತೆ.
ಮಾಸ್ಟರ್ ಹೇಮಂತ್ ನಿರ್ದೇಶಕರು ಹೇಳಿಕೊಟ್ಟಿದ್ದನ್ನು ಚಾಚೂ ತಪ್ಪದೆ ಮಾಡಿದ್ದಾನೆ. ಕುಳ್ಳ ಮಧುಸೂದನ್‌ಗೂ ಇದೇ ಮಾತು ಅನ್ವಯ, ಅಪ್ಪ, ಅಮ್ಮನಾಗಿ ಅಶ್ವತ್ಥ್ ಮತ್ತು ಸ್ಪಂದನಾ ಇಷ್ಟವಾಗುತ್ತಾರೆ. ಉಳಿದಂತೆ ಪೊಲೀಸ್ ಅಧಿಕಾರಿಯಾಗಿ ಹರೀಶ್‌ರಾಜ್‌ಗೆ ಇನ್ನಷ್ಟು ಖದರ್ ಬೇಕಿತ್ತು. ಸಿಕ್ಕ ಪಾತ್ರಕ್ಕೆ ತೃಪ್ತಿಪಟ್ಟಿದ್ದಾರೆ. ರೌಡಿಯಾಗಿ ಪೆಟ್ರೋಲ್‌ಪ್ರಸನ್ನ ಚೌಕಟ್ಟಿನಲ್ಲೇ ಆರ್ಭಟಿಸಿದ್ದಾರೆ. ಪ್ರಶಾಂತ್ ಸಿದ್ಧಿ ಇದ್ದರೂ, ಇಲ್ಲದಂತಿದ್ದಾರೆ. ರವಿಬಸೂÅರು ಸಂಗೀತದಲ್ಲಿ ಹೇಳಿಕೊಳ್ಳುವಂತಹ ಸ್ವಾದವಿಲ್ಲ. ರಾಮ್‌ರೆಡ್ಡಿ ಕ್ಯಾಮೆರಾ ಕೈಚಳಕ ಪರವಾಗಿಲ್ಲ.
ಚಿತ್ರ: ಕೀಟ್ಲೆ ಕೃಷ್ಣ
ನಿರ್ಮಾಣ: ರಾಜೀವ್ ಕೊಠಾರಿ
ನಿರ್ದೇಶನ: ನಾಗರಾಜ್ ಅರೆಹೊಳೆ
ತಾರಾಗಣ: ಮಾ.ಹೇಮಂತ್, ಮಾ. ಮಧುಸೂದನ್, ಸ್ಪಂದನಾ, ನೀನಾಸಂ ಅಶ್ವತ್ಥ್, ಹರೀಶ್‌ರಾಜ್, ಶಂಕರ್‌ಭಟ್, ಪೆಟ್ರೋಲ್ ಪ್ರಸನ್ನ ಇತರರು.
* ವಿಜಯ್ ಭರಮಸಾಗರ