ಹುಬ್ಬಳ್ಳಿ: ಮನಸ್ಸು ಹಾಗೂ ದೇಹವನ್ನು ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಲಾಗದಿದ್ದರೆ ಜೀವನದಲ್ಲಿ ಸಾಧನೆ ಹಾಗೂ ಬದಲಾವಣೆ ಸಾಧ್ಯವಿಲ್ಲವೆಂದು ಬೆಂಗಳೂರಿನ ಬೌದ್ಧ ಧಮ್ಮ ಗುರು ಬಂತೇಜಿ ಮಾತ ಮೈತ್ರಿ ಅಭಿಪ್ರಾಯಪಟ್ಟರು. ಸ್ಥಳೀಯ ಬುದ್ಧ ಧಮ್ಮ ಪ್ರಚಾರ ಸಮಿತಿಯಿಂದ ಜೆ.ಸಿ.ನಗರದ ಅಕ್ಕನಬಳಗದಲ್ಲಿ ರವಿವಾರ ಹಮ್ಮಿಕೊಂಡಿದ್ದ ಧಮ್ಮ ಪ್ರವಚನ ಧ್ಯಾನ ಶಿಬಿರ ನಡೆಸಿಕೊಟ್ಟ ಅವರು, ಮನುಷ್ಯನಿಗೆ ಜೀವನದಲ್ಲಿ ಶಾಂತಿ, ನೆಮ್ಮದಿ, ತಾಳ್ಮೆ ಮುಖ್ಯ.
ಜಗತ್ತಿನಲ್ಲಿ ಎಲ್ಲ ಜೀವಿಗಳಿಗೂ ದುಃಖವಿರುವುದು ಸತ್ಯ. ದುಃಖವಿಲ್ಲದವರು ಯಾರೂ ಇಲ್ಲ. ಆದರೆ ಅದೇ ಭ್ರಮೆಯಲ್ಲಿ ಜೀವಿಸುತ್ತಿದ್ದೇವೆ. ದುಃಖವಿದೆ ಎಂದು ಕೈಕಟ್ಟಿ ಕುಳಿತರೆ, ಚಿಂತಿಸುತ್ತ ಕುಳಿತರೆ ಅದರಿಂದ ಹೊರಬರಲು, ನಾಶ ಮಾಡಲು ಸಾಧ್ಯವಿಲ್ಲ. ದುಃಖದ ಕಾರಣ ಕಂಡುಕೊಳ್ಳಬೇಕು. ಅದರ ನಿರ್ಮೂಲನೆ ಮಾಡಬೇಕು. ಅಷ್ಟಾಂಗ ಮಾರ್ಗ ಕಂಡುಕೊಳ್ಳಬೇಕು. ಅಂದಾಗ ಮಾತ್ರ ನಾವು ದುಃಖದಿಂದ ಹೊರಬರಲು ಸಾಧ್ಯವೆಂದರು.
ಸತ್ಯ ಏನೆಂಬುದು ಎಲ್ಲರಿಗೂ ಗೊತ್ತಿದೆ. ಅದಕ್ಕೆ ಯಾವುದೇ ರಾಜೀ ಇರಲ್ಲ. ಆದರೆ ಅದನ್ನು ಬಾಯಿ ಬಿಡಲ್ಲ. ಇದುವರೆಗೂ ಯಾರೂ ಅದನ್ನು ಹೇಳಿಕೊಡುವ ಕಾರ್ಯ ಮಾಡಲಿಲ್ಲ. ಬೆರಳೆಣಿಕೆಯ ಜ್ಞಾನವಂತರು, ವಿನಯವಂತರು ಸಮಾಜದ ದಿಕ್ಕು ತಪ್ಪಿಸುತ್ತಿದ್ದಾರೆ. ಸಮಾಜದಲ್ಲಿ ಸಮಾನತೆ ತರುವ ಕಾರ್ಯ ಆಗಬೇಕು. ನಿತ್ಯ ನಾವು ಕೆಟ್ಟ ವಿಚಾರಗಳನ್ನು ತಿಳಿದುಕೊಂಡರೆ ನಮ್ಮಿಂದಲೂ ಕೆಟ್ಟ, ದುರಾಲೋಚನೆಯ ವಿಚಾರಗಳೇ ಹೊರಹೊಮ್ಮುತ್ತವೆ.
ಆದ್ದರಿಂದ ಸಮಾಜಕ್ಕೆ ಒಳ್ಳೆಯದಾಗುವ, ಇನ್ನೊಬ್ಬರಿಗೆ ಕೇಡು ಮಾಡದಂತಹ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು. ಅಂದಾಗಲೇ ಸಮಾಜದಲ್ಲಿ ಸಮಾನತೆ ಕಾಣಬಹುದು ಎಂದರು. ಮನುಷ್ಯ ಮೊದಲು ತನ್ನನ್ನು ತಾನು ನಂಬಬೇಕು. ದೇಹ, ಮನಸ್ಸನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಬೇಕು. ಇಂದಿನ ಒತ್ತಡದ ಜೀವನಕ್ಕೊಳಗಾಗಿ ದೈಹಿಕ, ಮಾನಸಿಕ ಖನ್ನತೆಗೆ ತುತ್ತಾಗುತ್ತಿದ್ದಾನೆ.
ಆತಂಕ, ಹಿಂಸೆ, ಅಶಾಂತಿ, ಮೌಡ್ಯಗಳಿಗೊಳಗಾಗಿ ಬದುಕುತ್ತಿದ್ದಾನೆ ಎಂದರು. ಬೆಳಿಗ್ಗೆ ಎದ್ದು ಟಿವಿ ಹಚ್ಚಿದರೆ ಸಾಕು ಮೌಡ್ಯತೆ ತುಂಬಿಕೊಂಡಿರುತ್ತದೆ. ರಾತ್ರಿಯಾದರೆ ಅಪರಾಧ ಸುದ್ದಿಗಳು ಪ್ರಸಾರವಾಗುತ್ತವೆ. ಇದರಿಂದ ಮನುಷ್ಯನ ಮೊಗದಲ್ಲಿ ನಗು ಮಾಯವಾಗಿದೆ. ನೆಮ್ಮದಿ ಕಳೆದುಕೊಂಡಿದ್ದಾನೆ. ಅನ್ಯ ವಿಷಯಗಳ ಬಗ್ಗೆ ವಿಚಾರ, ಯೋಚನೆ ಮಾಡದೆ ನಿಮ್ಮ ದೇಹ, ಮನಸ್ಸಿಗಾಗಿ ಜೀವನ ಮಾಡಿ.
ಅವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಬೇಕು ಎಂದರು. ಬುದ್ಧ ಎಂದರೆ ಜ್ಞಾನ, ಧಮ್ಮ ಎಂದರೆ ಸತ್ಯ ಹಾಗೂ ಜ್ಞಾನ ಮತ್ತು ಸತ್ಯವನ್ನು ಹೇಳಿಕೊಡುವುದೇ ಸಂಘ ಎಂದರು. ನಂತರ ಪ್ರವಚನ, ಪ್ರಯೋಗ, ಧ್ಯಾನ ಮತ್ತು ಸಂವಾದ ನಡೆಸಿದರು. ಇದಕ್ಕೂ ಮುನ್ನ ಸ್ವಾಮೀಜಿ ಹಾಗೂ ಶಿಬಿರಾರ್ಥಿಗಳು ಬುದ್ಧ ಮೂರ್ತಿ ಹಾಗೂ ಅಂಬೇಡ್ಕರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿದರು.
ಸಮಿತಿ ಮುಖಂಡ ಪಿತಾಂಬ್ರಪ್ಪ ಬೀಳಾರ, ತಮ್ಮಣ್ಣ ಮಾದರ, ಶಂಕರ ಅಜಮನಿ, ಗಂಗಾಧರ ಪೆರೂರ, ರಮೇಶ ವಡ್ಡಪಳ್ಳಿ, ಮಂಜುನಾಥ ಗುಡಿಮನಿ, ಓಬಳೇಶ ಯರಗುಂಟಿ, ಹನಮಂತ ಹುನ್ನೂರ, ಕೃಷ್ಣಾ ಕಾಂಬ್ಳೆ, ಹನಮಂತಪ್ಪ ಟಗರಗುಂಟಿ, ಭರಮಣ್ಣ ಮಂಕಣಿ, ಪ್ರೇಮನಾಥ ಚಿಕ್ಕತುಂಬಳ, ಬಸವರಾಜ ತೇರದಾಳ, ರೇವಣಸಿದಪ್ಪ ಹೊಸಮನಿ ಮೊದಲಾದವರಿದ್ದರು.