Advertisement

ದೇವರ ಅನುಗ್ರಹದಿಂದ ಸಾಧನೆ ಮಾಡಲು ಸಾಧ್ಯ

01:09 PM Sep 17, 2019 | Team Udayavani |

ಮುಂಬಯಿ, ಸೆ. 16: ತಂದೆ- ತಾಯಿಯ ಆಶೀರ್ವಾದ, ದೈವ- ದೇವರುಗಳ ಅನುಗ್ರಹವಿದ್ದರೆ ಜೀವನ ದಲ್ಲಿ ಯಾವುದನ್ನೂ ಸಾಧಿಸಬಹುದು. ಭಕ್ತಿಯಿಂದ ನಾವು ಭಗವತಿಯನ್ನು ಪ್ರಾರ್ಥಿಸಿದರೆ ನಮ್ಮ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆಯು ನನಗಿದೆ. ತಾಯಿಯ ಆಶೀರ್ವಾ ದದ ಫಲವಾಗಿ ನಾನಿಂದು ಈ ಮಟ್ಟಕ್ಕೆ ಏರಲು ಸಾಧ್ಯವಾಗಿದೆ ಎಂದು ಮುಂಬಯಿ ಉದ್ಯಮಿ ವೇದ ಪ್ರಕಾಶ್‌ ಎಂ. ಶ್ರೀಯಾನ್‌ ಹೇಳಿದರು.

Advertisement

ಸೆ. 14 ರಂದು ಅಂಧೇರಿ ಪಶ್ಚಿಮದ ವೀರದೇಸಾಯಿ ರೋಡ್‌ನ‌ ಮೊಗವೀರ ವ್ಯವಸ್ಥಾಪಕ ಮಂಡಳಿಯ ಡಾ| ಶಾಲಿನಿ ಜಿ. ಶಂಕರ್‌ ಸಭಾಗೃಹದಲ್ಲಿ ದಿ| ಭವಾನಿ ಎಂ. ಮೆಂಡನ್‌ ತಿರ್ತೋಟ ಮನೆ ಸಸಿಹಿತ್ಲು ಇವರ ಸ್ಮರಣಾರ್ಥ ಶ್ರೀ ಭಗವತೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸಸಿಹಿತ್ಲು ಮೇಳದ ‘ಶ್ರೀ ಭಗವತೀ ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರದರ್ಶನದ ಮಧ್ಯೆ ಜರಗಿದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಿಗೆ ಚಿಕ್ಕವರಿರುವಾಗಲೇ ನಮ್ಮ ದೈವ ದೇವರು, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವುದರೊಂದಿಗೆ ನಮ್ಮ ನಂಬಿಕೆಯ ಬಗ್ಗೆ ತಿಳಿಸಬೇಕು. ಇಂದು ಭಗವತೀ ಕ್ಷೇತ್ರ ಮಹಾತ್ಮೆ ಎಂಬ ಪೌರಾಣಿಕ ಯಕ್ಷಗಾನವನ್ನು ಮಹಾನಗರದಲ್ಲಿ ಪ್ರದರ್ಶಿಸಲು ಅವಕಾಶ ಸಿಕ್ಕಿರುವುದಕ್ಕೆ ಸಂತೋಷ ಪಡುತ್ತೇವೆ ಎಂದು ನುಡಿದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಆಶೀರ್ವಚನ ನೀಡಿದ ಶ್ರೀ ಭಗವತೀ ಕ್ಷೇತ್ರದ ಕಾರ್ನವರಾದ ಅಪ್ಪು ಪೂಜಾರಿ ಅವರು, ಕ್ಷೇತ್ರದ ಹಾಗೂ ಯಕ್ಷಗಾನ ಮೇಳದ ಬಗ್ಗೆ ವಿವರಿಸಿ ವೇದಪ್ರಕಾಶ್‌ ಶ್ರೀಯಾನ್‌ ಅವರ ಸಮಾಜಪರ ಕಾರ್ಯಗಳನ್ನು ಕಂಡಾಗ ಸಂತೋಷವಾಗುತ್ತದೆ. ಅವರಿಂದ ಇನ್ನಷ್ಟು ಸಮಾಜಪರ ಕಾರ್ಯಕ್ರಮಗಳು ನಡೆಯಲು ಶ್ರೀ ಭಗವತೀ ಕ್ಷೇತ್ರದ ಅನುಗ್ರಹ ಅವರ ಮೇಲೆ ಸದಾಯಿರಲಿ ಎಂದರು. ಕ್ಷೇತ್ರದ ಕಾರ್ನವರಾದ ಶ್ರೀನಿವಾಸ ಯಾನೇ ಅಪ್ಪು ಪೂಜಾರಿ ಅವರನ್ನು ಹಾಗೂ ಗುರಿಕಾರರಾದ ಗಂಗಯ್ಯ ಗುರಿಕಾರರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಕವಿತಾ ವೇದ ಪ್ರಕಾಶ್‌ ಶ್ರೀಯಾನ್‌, ಮೊಗವೀರ ಬ್ಯಾಂಕಿನ ನಿರ್ದೇಶಕ ಸುರೇಶ್‌ ಕಾಂಚನ್‌, ಗೋಪಾಲ್ ಪುತ್ರನ್‌, ಪುರುಷೋತ್ತಮ ಶ್ರೀಯಾನ್‌, ರೀಟಾ ಪುರುಷೋತ್ತಮ ಶ್ರೀಯಾನ್‌, ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಕೆ. ಎಲ್. ಬಂಗೇರ, ಭಾಸ್ಕರ್‌ ಸಾಲ್ಯಾನ್‌, ಜಿ. ಕೆ. ರಮೇಶ್‌, ಶ್ರೀನಿವಾಸ್‌ ಕಾಂಚನ್‌, ಸತೀಶ್‌ ಕೋಟ್ಯಾನ್‌, ಚಂದ್ರಹಾಸ ಕೆ. ಪಾಲನ್‌, ರಾಜೇಶ್‌ ಗುಜರನ್‌, ಚಂದ್ರಶೇಖರ್‌ ಬೆಳ್ಚಡ, ದಯಾನಂದ ಗುಜರನ್‌, ಕರ್ನೂರು ಮೋಹನ್‌ ರೈ, ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅಜೆಕಾರು ಮೊದಲಾದವರು ಉಪಸ್ಥಿತರಿದ್ದರು.

ಮೊಗವೀರ ಮಾಸಿಕ ಸಂಪಾದಕ ಅಶೋಕ್‌ ಸುವರ್ಣ ಅವರು ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಭಗವತೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸಸಿಹಿತ್ಲು ಮೇಳದ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಶ್ರೀ ಭಗವತೀ ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರದರ್ಶನಗೊಂಡಿತು. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಚಿತ್ರ-ವರದಿ : ಸುಭಾಷ್‌ ಶಿರಿಯಾ

Advertisement

ಯಕ್ಷಗಾನಕ್ಕೆ ಎಂದೂ ಅಳಿವಿಲ್ಲ. ಇದರಲ್ಲಿ ಅತೀ ಉತ್ಸಾಹದಿಂದ ಭಾಗವಹಿಸಿದ ಯುವ ಕಲಾವಿದರನ್ನು ನೋಡುವಾಗ ಇದು ನಿರಂತರ ಬೆಳೆಯುತ್ತಿರುವ ಕಲೆಯಾಗಿದೆ ಎಂದು ಸಂತೋಷವಾಗುತ್ತಿದೆ. ವೇದಪ್ರಕಾಶ್‌ ಶ್ರೀಯಾನ್‌ ತಮ್ಮ ತಾಯಿಯ ಸ್ಮರಣಾರ್ಥ ಶ್ರೀ ಭಗವತೀ ಕ್ಷೇತ್ರ ಮಹಾತ್ಮೆ ಎಂಬ ಪೌರಾಣಿಕ ಯಕ್ಷಗಾನವನ್ನು ಪ್ರದರ್ಶಿಸುವುದರ ಮೂಲಕ ನಮ್ಮೂರಿನ ದೈವ-ದೇವರುಗಳ ಮಹಾತ್ಮೆಯನ್ನು ಮುಂದಿನ ಪೀಳಿಗೆಗೆ ತಿಳಿಯಪಡಿಸುವಂತಹ ಕೆಲಸವನ್ನು ಮಾಡಿದ್ದಾರೆ. ನಾವು ಊರಿನಿಂದ ಬರುವಾಗ ಭಕ್ತಿಯಿಂದ ದೈವ-ದೇವರುಗಳನ್ನು ಪ್ರಾರ್ಥಿಸಿ ಸಿರಿಗಂಧವನ್ನು ಮಾತ್ರ ತರುತ್ತೇವೆ. ಆ ದೇವರುಗಳ ಶಕ್ತಿಯಿಂದ ಇಲ್ಲಿ ಸಾಧನೆಯನ್ನು ಮಾಡಿ ಅದರ ಮುಖಾಂತರ ಹುಟ್ಟೂರಿಗೆ ಸಹಕರಿಸುವುದರೊಂದಿಗೆ ಅಲ್ಲಿಯ ಕಲೆ, ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿದ್ದೇವೆ. ವೇದಪ್ರಕಾಶ್‌ ಶ್ರೀಯಾನ್‌ ಅವರ ಸಮಾಜಪರ ಕಾರ್ಯಕ್ರಮಗಳು ಅಭಿನಂದನೀಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next