Advertisement

ನಮ್ಮ ಕಣ್ಣಿಗೆ ಕಂಡ ನಮ್ಮ ಸತ್ಯ

12:38 AM Apr 28, 2021 | Team Udayavani |

ಸತ್ಯ ಮತ್ತು ಸುಳ್ಳಿಗೆ ಏನು ಅಂತರ – ಒಬ್ಬ ಸಂತನನ್ನು ಯಾರೋ ಕೇಳಿದರಂತೆ.
“ನಾಲ್ಕು ಇಂಚುಗಳು’ ಎಂದು ಉತ್ತರಿಸಿದ ಆತ. ಕೇಳಿದವನಿಗೆ ಗೊಂದಲವೂ ಆಶ್ಚರ್ಯವೂ ಆಯಿತು. “ಹಾಗೆಂದರೇನು’ ಎಂದು ಕೇಳಿದನಾತ.

Advertisement

“ಕಿವಿ ಮತ್ತು ಕಣ್ಣುಗಳ ನಡುವೆ ನಾಲ್ಕಿಂಚು ಅಂತರ ಇದೆಯಲ್ಲ! ಸತ್ಯ ಮತ್ತು ಸುಳ್ಳಿಗೂ ಅಷ್ಟೇ ದೂರ. ಕಿವಿಯಿಂದ ಕೇಳುವಂಥದ್ದು ಸುಳ್ಳು. ಕಣ್ಣಿ ನಿಂದ ಕಂಡದ್ದು ಮಾತ್ರ ಸತ್ಯ’ ಎಂದು ಸಂತ ವಿವರಿಸಿದ.

ನಮ್ಮ ಅನುಭವಕ್ಕೆ ಬಂದದ್ದು, ನಮ್ಮ ಕಣ್ಣಿಗೆ ಕಂಡದ್ದು ಮಾತ್ರ ನಿಜ. ನಾವು ನಿಜವನ್ನು ಕಂಡು ಅದನ್ನು ಇನ್ನೊಬ್ಬರಿಗೆ ಹೇಳಿದರೆ ಆಗ ಅದು ಕೂಡ ಸುಳ್ಳಾಗಬಲ್ಲುದು. ಯಾಕೆಂದರೆ ಅದು ಕಂಡದ್ದು ನಮಗೆ, ನಾವು ಯಾರಿಗೆ ಹೇಳಿದ್ದೇವೋ ಅವರಿಗಲ್ಲ. ಯಾಕೆಂದರೆ ಅವರಿಗೆ ಅದು ಕಿವಿಯ ಮೂಲಕ ತಿಳಿದದ್ದು. ತಪ್ಪಾದ ದಾರಿಯಲ್ಲಿ ಒಳಬರುವ ಸತ್ಯವೂ ಸುಳ್ಳಾಗಬಲ್ಲುದು. ಸತ್ಯ ಎದುರು ಬಾಗಿಲಿನಿಂದ, ಕಣ್ಣುಗಳ ಮೂಲಕ ಒಳಬರಬೇಕು. ಕಣ್ಣಿಗೆ ಕಾಣಿ ಸುವ ಕಾಣ್ಕೆಯಷ್ಟೇ ನಿಜ.
ಒಂದಾನೊಂದು ಕಾಲದಲ್ಲಿ ಒಂದು ಹಳ್ಳಿಯಲ್ಲಿ ಒಬ್ಬನಿದ್ದನಂತೆ. ಸರಳ, ಮುಗ್ಧ ಹಳ್ಳಿಗ ಅವನು. ಆತ ಎಂದೂ ಸುಳ್ಳು ಹೇಳುತ್ತಿರಲಿಲ್ಲ. ಈ ಸತ್ಯವಂತನ ಬಗ್ಗೆ ನಾಲ್ಕೂರಿನವರಿಗೆ ಗೊತ್ತಿತ್ತು – ಎಂದೂ ಸುಳ್ಳಾಡದವನು ಎಂದು.

ಆ ದೇಶದ ಅರಸನ ಕಿವಿಗೂ ಸತ್ಯವಂತನ ವಿಚಾರ ಬಿತ್ತು. ಆತ ತನ್ನ ಸೇವಕರನ್ನು ಕಳುಹಿಸಿ ಸತ್ಯವಂತನನ್ನು ಕರೆಯಿಸಿದ.
“ಹೇಳು, ನೀನು ಯಾವಾಗಲೂ ಸತ್ಯವನ್ನೇ ಆಡುವವನಂತೆ, ನಿಜವೇ?’ ಎಂದು ದೊರೆ ಪ್ರಶ್ನಿಸಿದ. “ಹೌದು’ ಎಂದು ಉತ್ತರಿಸಿದ ಹಳ್ಳಿಗ. “ಮುಂದೆಯೂ ಇದನ್ನೇ ಮುಂದು ವರಿಸುವವನೇ?’ -ದೊರೆಯ ಪ್ರಶ್ನೆ. ಹಳ್ಳಿಗ, “ನಿಜ’ ಎಂದ.

“ಜಾಗ್ರತೆಯಾಗಿರು. ಸುಳ್ಳು ಬಹಳ ಕುಶಾಗ್ರಮತಿ. ನಾಲಗೆಯ ಎಡೆಯಿಂದ ಹೇಗಾದರೂ ನುಸುಳೀತು’ ಎಂದು ಹೇಳಿ ಅರಸ ಅವನನ್ನು ಬೀಳ್ಕೊಟ್ಟ.

Advertisement

ಸ್ವಲ್ಪ ಸಮಯದ ಬಳಿಕ ದೊರೆ ಮತ್ತೆ ಹಳ್ಳಿಗನನ್ನು ರಾಜಧಾನಿಗೆ ಕರೆಯಿಸಿದ. ಸತ್ಯವಂತ ಅಲ್ಲಿಗೆ ತಲುಪುವಷ್ಟರಲ್ಲಿ ದೊರೆ ಬೇಟೆಗೆ ತೆರಳಲು ಸಿದ್ಧನಾಗಿ ನಿಂತಿದ್ದ. ಅವನ ಒಂದು ಕಾಲು ಕುದುರೆಯ ರಿಕಾಪಿನ ಮೇಲಿತ್ತು, ಕೈಗಳಲ್ಲಿ ಕಡಿವಾಣ ಇತ್ತು.
ದೊರೆ ಸತ್ಯವಂತನಿಗೆ ಆದೇಶಿಸಿದ, “ರಾಣೀ ವಾಸಕ್ಕೆ ಹೋಗಿ ದೊರೆ ಬೇಟೆಗೆ ಹೋಗಿದ್ದಾರೆ, ಮಧ್ಯಾಹ್ನದ ಭೋಜನಕ್ಕೆ ಅಲ್ಲಿರುತ್ತಾರೆ, ಉತ್ತಮ ವಾದ ಭೋಜನವನ್ನು ಸಿದ್ಧಪಡಿಸ ಬೇಕಂತೆ ಎಂದು ಹೇಳು’.

ಸತ್ಯವಂತ ನಮಸ್ಕರಿಸಿ ಹೊರಟು ಹೋದ. ಆತ ಹೋದ ಬಳಿಕ ದೊರೆ ನಗುತ್ತ ತನ್ನ ಸಂಗಡಿಗರಿಗೆ ಹೇಳಿದ, “ನಾನೀ ಬೇಟೆಗೆ ಹೋಗುವುದಿಲ್ಲ. ಸತ್ಯವಂತ ರಾಣಿಗೆ ಹೇಳಿದ್ದು ಸುಳ್ಳಾಗುತ್ತದೆ’.

ಸತ್ಯವಂತ ರಾಣೀವಾಸಕ್ಕೆ ಹೋಗಿ ಬಿನ್ನವಿಸಿಕೊಂಡ, “ದೊರೆ ಮಧ್ಯಾಹ್ನದ ಭೋಜನಕ್ಕೆ ಬರಬಹುದು, ಬಾರದಿ ರಲೂ ಬಹುದು; ನೀವು ಉತ್ತಮವಾದ ಭೋಜನವನ್ನು ಸಿದ್ಧಪಡಿಸಬಹುದು, ಸಿದ್ಧಪಡಿಸದೆಯೂ ಇರಬಹುದು’.

ರಾಣಿಗೆ ಗೊಂದಲವಾಯಿತು, ಆಕೆ, “ದೊರೆ ಬರುತ್ತಾರೆಯೇ ಇಲ್ಲವೇ ಎಂಬುದನ್ನು ಹೇಳು’ ಎಂದಳು.

“ನಾನು ಅಲ್ಲಿಂದ ಇತ್ತ ಹೊರಟ ಬಳಿಕ ದೊರೆ ಕುದುರೆಯ ರಿಕಾಪಿನ ಮೇಲಿ ರಿಸಿದ ಬಲಗಾಲನ್ನು ನೆಲಕ್ಕಿಳಿಸುತ್ತಾರೆಯೇ ಅಥವಾ ನೆಲದಲ್ಲಿದ್ದ ಎಡಗಾಲನ್ನು ಇನ್ನೊಂದು ರಿಕಾಪಿನ ಮೇಲಿರಿಸು ತ್ತಾರೆಯೇ ಎಂಬುದು ನನಗೆ ಗೊತ್ತಿಲ್ಲ’ ಎಂಬ ಜಾಣ ಉತ್ತರ ಕೊಟ್ಟ ಸತ್ಯವಂತ.

ಮರುದಿನ ಮಧ್ಯಾಹ್ನ ದೊರೆ ರಾಣೀವಾಸವನ್ನು ಪ್ರವೇಶಿಸಿದ, “ಸತ್ಯ ವಂತ ಸುಳ್ಳಾಡಿದ ಹಾಗಾಯಿತಲ್ಲ’ ಎಂದು ಕುಚೋದ್ಯದ ನಗು ನಕ್ಕ. ರಾಣಿ ಸತ್ಯವಂತ ಏನು ಹೇಳಿದ್ದ ಎಂಬುದನ್ನು ದೊರೆಗೆ ತಿಳಿಸಿದಳು.
(ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next