Advertisement

“ದುಬಾೖಯಿಂದ ಊರಿಗೆ ತಲುಪಿದ್ದೇ ನಮ್ಮ ಪುಣ್ಯ’

12:28 AM May 15, 2020 | Sriram |

ಕೋವಿಡ್ 19ದಿಂದ ವಿದೇಶದಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಭಾರತೀಯರನ್ನು ಏರ್‌ಲಿಫ್ಟ್‌ ಮಾಡುವ “ವಂದೇ ಭಾರತ್‌ ಮಿಷನ್‌’ನಡಿ ದುಬಾೖಯಿಂದ ವಿಶೇಷ ವಿಮಾನದಲ್ಲಿ ಬಂದ ಕೆಲವರ ಮನದಾಳದ ಮಾತು ಇಂತಿದೆ.

Advertisement

ಮಂಗಳೂರು: “ನಾನು ದುಬಾೖಯ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಹೊಟೇಲ್‌ ಮುಚ್ಚಿ 2 ತಿಂಗಳಾಯಿತು. ನಾವು ಹೊಟೇಲ್‌ ಒಳಗೇ ಇರುತ್ತಿದ್ದೆವು. ಎರಡು ತಿಂಗಳಿನಲ್ಲಿ 2 ಬಾರಿ ಮಾತ್ರ ಹೊರಗೆ ಹೋಗಿದ್ದೇನೆ. ಅಲ್ಲಿ ಇರುವವರ ಭಾರತೀಯರ ಪೈಕಿ ಹಲವರು ಭಾರೀ ಸಂಕಷ್ಟದಲ್ಲಿದ್ದಾರೆ. ನಾವು ಊರಿಗೆ ತಲುಪಿದ್ದು ನಮ್ಮ ಪುಣ್ಯ.’

ದುಬಾೖಯಿಂದ ವಿಶೇಷ ವಿಮಾನದಲ್ಲಿ ಮಂಗಳವಾರ ಮಂಗಳೂರಿಗೆ ಆಗಮಿಸಿದ ಯುವಕನೋರ್ವನ ನುಡಿಯಿದು.”ನನ್ನ ಆರೋಗ್ಯವೂ ಕೈಕೊಟ್ಟಿತ್ತು. ದುಬಾೖಯಲ್ಲಿ ಎರಡು ಬಾರಿ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದೆ. ಈಗ ನನ್ನ ಹೋದ ಜೀವ ಮರಳಿ ಬಂದಂತಾಗಿದೆ. ದುಬಾೖ ವಿಮಾನ ನಿಲ್ದಾಣಕ್ಕೆ ಬಂದ ಅನಂತರ ಕ್ವಾರಂಟೈನ್‌ ಕೋಣೆಗೆ ಬರುವವರೆಗೆ ಒಂದು ಹನಿ ನೀರು ಕೂಡ ಕುಡಿದಿಲ್ಲ. ಅಷ್ಟು ಜಾಗರೂಕತೆ ವಹಿಸಿದ್ದೆವು. ಇಲ್ಲಿ ನಿಲ್ದಾಣದಿಂದ ಕ್ವಾರಂಟೈನ್‌ ಸ್ಥಳಕ್ಕೆ ಹೋಗುವಾಗ ಕೆಲವರಿಗೆ ಸಮಸ್ಯೆಯಾಯಿತು. ಉಳಿದಂತೆ ತೊಂದರೆಯಾಗಿಲ್ಲ. ನಾನೀಗ ಹೊಟೇಲ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದೇನೆ. ದುಬಾೖಯಲ್ಲಿ ಇನ್ನೂ ಸಾವಿರಾರು ಮಂದಿ ನಮ್ಮ ದೇಶದ ವಿಮಾನ ಯಾವಾಗ ಬರುತ್ತದೆ ಎಂದು ಕಾದು ಕುಳಿತಿದ್ದಾರೆ. ಅವರೆಲ್ಲರನ್ನು ಭಾರತಕ್ಕೆ ಕರೆತರಬೇಕಾಗಿದೆ. ನನ್ನ ಪ್ರಕಾರ ಭಾರತದಲ್ಲಿ ಸಿಗುವ ಚಿಕಿತ್ಸೆ ದುಬಾೖಯಲ್ಲಿ ಈಗಿನ ಸ್ಥಿತಿಯಲ್ಲಿ ಸಿಗುವುದು ಕಷ್ಟ. ಹಾಗಂತ ಯಾರೂ ಭಯಪಡುವ ಅಗತ್ಯವಿಲ್ಲ. ಹೆಚ್ಚಿನ ಎಚ್ಚರಿಕೆ ಬೇಕಾಗಿದೆ. ನನಗಂತೂ ಹೋದ ಜೀವ ಮರಳಿ ಬಂದಂತಾಗಿದೆ. ಈಗ ಅಲ್ಲಿ ಅನೇಕ ಮಂದಿ ಭಾರತೀಯರು ಕೆಲಸವಿಲ್ಲದೆ, ಸಂಬಳವಿಲ್ಲದೆ ತೊಂದರೆಗೊಳಗಾಗಿದ್ದಾರೆ. ಕೆಲಸಕ್ಕಿಂತಲೂ ಜೀವ ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆ ಅವರನ್ನು ಕಾಡುತ್ತಿದೆ’ ಎಂದವರು ಹೇಳುತ್ತಾರೆ.

ಅಲ್ಲಿನವರ ನೆರವಿನಿಂದ ಊರಿಗೆ ಬಂದೆವು
“ನಾನು ಮಾರ್ಚ್‌ ಮೊದಲ ವಾರದಲ್ಲಿ ದುಬಾೖಗೆ ಹೋದೆ. ಉದ್ಯೋಗಕ್ಕಾಗಿ ಅಲೆದು ಇದ್ದ ಹಣವೂ ಖಾಲಿಯಾಯಿತು. ಅಸಹಾಯಕನಾಗಿದ್ದಾಗ ದುಬಾೖಯ ಕೆಲವು ಮಂದಿ ಸಹಾಯ ಮಾಡಿ ಉಳಿದುಕೊಳ್ಳಲು ಅವಕಾಶ ನೀಡಿದರು. ಆದರೆ ಕೋವಿಡ್ 19ದಿಂದಾಗಿ ಭಾರೀ ತೊಂದರೆಯಾಯಿತು. ಪ್ರವೀಣ್‌ ಶೆಟ್ಟಿ, ಹರೀಶ್‌ ಕೋಡಿ ಮೊದಲಾದವರ ನೆರವಿನಿಂದಾಗಿ ನನ್ನಂತಹ ನೂರಾರು ಮಂದಿ ಊರಿಗೆ ಬರುವಂತಾಯಿತು. ಆದರೆ ಊರಿಗೆ ಬಂದಾಗ ಎದುರಾದ ಕೆಲವೊಂದು ಸಮಸ್ಯೆ ನೋಡಿ ಬೇಸರವಾಗಿದೆ. ಈಗ ಕ್ವಾರಂಟೈನ್‌ ಇರುವಲ್ಲಿ ಸದ್ಯಕ್ಕೆ ತೊಂದರೆ ಇಲ್ಲ. ಊಟ, ವಸತಿಗೆ ನಮ್ಮಿಂದ ಹಣ ಕೇಳಿದರೆ ನಮ್ಮ ಬಳಿ ಇಲ್ಲ. ನಮ್ಮಂತಹ ಸ್ಥಿತಿ ಯಾರಿಗೂ ಬರಬಾರದು. ದುಬಾೖಯಲ್ಲಿ ಇನ್ನೂ ಸಾವಿರಾರು ಮಂದಿ ಊರಿಗೆ ಬರಲು ಕಾಯುತ್ತಿದ್ದಾರೆ. ಅವರಿಗೆ ಸರಕಾರ ನೆರವಾಗಬೇಕು’ ಎಂದು ದುಬಾೖಯಿಂದ ಆಗಮಿಸಿ ಕ್ವಾರಂಟೈನ್‌ನಲ್ಲಿರುವ ಮತ್ತೋರ್ವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next