ಬದಿಯಡ್ಕ: ಇಲ್ಲಿನ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ವತಿಯಿಂದ ನಡೆಯುತ್ತಿರುವ ಅಭಿಯಾನ “ರಂಗಸಿರಿ ದಸರಾ ಯಕ್ಷಪಯಣ’ ಕಾರ್ಯಕ್ರಮಕ್ಕೆ ತಲಪಾಡಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು.
ಪ್ರಧಾನ ಅರ್ಚಕ ಗಣೇಶ ಭಟ್‌ದೀಪೋಜ್ವಲನೆ ನಡೆಸಿ ಮಾತನಾಡಿದರು.
ವಿಜಯದಶಮಿ ಸಹಿತ ನವರಾತ್ರಿಯ ಹತ್ತು ದಿನಗಳ ಕಾಲ ವಿದ್ಯಾರ್ಥಿಗಳಿಂದ ನಡೆಯಲಿರುವ ಈ ಪಯಣವು ಹೊಸ ದಾಖಲೆಯಾಗಲಿದೆ. ಭಾಷೆ, ಸಂಸ್ಕೃತಿಯನ್ನು ಉಳಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಕ ಈ ನಿಟ್ಟಿನಲ್ಲಿ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಹೆಜ್ಜೆಗಳಿಗೆ ಎಲ್ಲಾ ರೀತಿಯ ಯಶಸ್ಸು ದೊರಕಲೆಂದು ಹರಸಿದರು.
ಯಕ್ಷಗಾನ ಗುರು ಸೂರ್ಯನಾರಾಯಣ ಪದಕಣ್ಣಾಯ ಬಾಯಾರು, ರಂಗಸಿರಿಯ ಸದಸ್ಯ ದಿನೇಶ ಬೊಳುಂಬು ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ಯಕ್ಷಗಾನ ನಡೆಯಿತು. ಸ್ವಯಂಪ್ರಭೆ ಪ್ರಸಂಗದಲ್ಲಿ ನಾಗೇಂದ್ರನಾಗಿ ಶ್ರೀಶ ಕುಮಾರ ಪಂಜಿತ್ತಡ್ಕ, ಪದ್ಮಚೂಡನಾಗಿ ಗಿರೀಶ್, ಸ್ವಯಂಪ್ರಭೆ ಪಾತ್ರದಲ್ಲಿ ಆಕಾಶ್ ಬದಿಯಡ್ಕ, ದೇವೇಂದ್ರನಾಗಿ ಸೌಜನ್ಯ ಮಂಜನಾಡಿ, ಅಗ್ನಿಯಾಗಿ ನಂದ ಕಿಶೋರ್ ಮವ್ವಾರು, ವಾಯುವಾಗಿ ಅಬಿಜ್ಞಾ ಬಿ.ಭಟ್, ಕೃಷ್ಣ¡ನಾಗಿ ವಿದ್ಯಾ ಕುಂಟಿಕಾನಮಠ, ರಾಣಿಯರ ಪಾತ್ರದಲ್ಲಿ ಸುಜಾತಾ ಮತ್ತು ವರ್ಷಾ ಲಕ್ಷ¾ಣ್, ಬ್ರಹ್ಮನಾಗಿ ಅನ್ವಿತಾ, ಶಿವನಾಗಿ ಶ್ರೀಹರಿ ಪಿ.ಮವ್ವಾರು ಪಾತ್ರನಿರ್ವಹಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಪ್ರದೀಪ ಗಟ್ಟಿ ಕಂಬಳಪದವು, ಚೆಂಡೆಯಲ್ಲಿ ಶಿವಶಂಕರ ಭಟ್ ಅಂಬೆಮೂಲೆ, ಮದ್ದಳೆಯಲ್ಲಿ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಸಹಕರಿಸಿದರು. ಕೇಶವ ಆಚಾರ್ಯ ಕಿನ್ಯ, ಮೋಹನ ಕೊಕ್ಕರ್ಣೆ, ಗಿರೀಶ ಕುಂಪಲ ನೇಪಥ್ಯದಲ್ಲಿ ಸಹಕರಿಸಿದರು.