ಹೊಸಕೋಟೆ: ರಾಷ್ಟ್ರದ ಪ್ರಜೆಗಳ ಸಮಾನತೆಗಾಗಿ ರೂಪಿಸಿರುವ ಸಂವಿಧಾನವನ್ನು ಗೌರವಿಸಬೇಕಾದ್ದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ವಿನಾಯಕ ಎನ್. ಮಾಯಣಣನವರ್ ಹೇಳಿದರು. ಅವರು ನಗರದ ಕೈಟ್ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಹಾಗೂ ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನವು ರಾಷ್ಟ್ರದ ಕಾನೂನಿಗೆ ಅಡಿಪಾಯವಾಗಿದ್ದು ಸೌಹಾರ್ಧತೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಜೀವನದ ಪ್ರತಿ ಹಂತದಲ್ಲೂ ಕಾನೂನು ಅನ್ವಯಿಸುತ್ತಿದ್ದು ತಿಳಿವಳಿಕೆ ಮೂಡಿಸುವ ಸಲುವಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಪ್ರಜೆಗಳಿಗೆ ಸಂವಿಧಾನದಡಿ ನೀಡಿರುವ ಹಕ್ಕುಗಳನ್ನು ಪಡೆಯಲು ತೋರುವಷ್ಟೇ ಆಸಕ್ತಿಯನ್ನು ಕರ್ತವ್ಯಗಳ ನಿರ್ವಹಣೆಗೂ ನೀಡಬೇಕು.
ಸಂವಿಧಾನದಲ್ಲಿನ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ಪಡೆದು ಆಚರಣೆಯಲ್ಲಿ ಅಳವಡಿಸಿಕೊಳ್ಳುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸಬೇಕು. ಜಾತಿ, ಮತ, ಧರ್ಮ ಬೇಧಭಾವವಿಲ್ಲದೆ ಎಲ್ಲಾ ವರ್ಗದವರಿಗೂ ಸಮಾನ ಹಕ್ಕುಗಳನ್ನು ನೀಡಿ ವಿಶ್ವಕ್ಕೆ ಮಾದರಿಯಾಗಿರುವ ಹೆಗ್ಗಳಿಕೆಯನ್ನು ಹೊಂದಿದೆ ಎಂದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಆರ್.ಬಿ. ಗಿರೀಶ್ ಮಾತನಾಡಿ ಕಾನೂನಿನ ಬಗ್ಗೆ ಮಾಹಿತಿಯ ಕೊರತೆಯಿಂದಾಗಿ ಜನರು ಸಂಕಷ್ಟಕ್ಕೆ ಒಳಗಾಗುತ್ತಿದ್ದು ಸೂಕ್ತ ತಿಳಿವಳಿಕೆ ನೀಡುವ ದಿಶೆಯಲ್ಲಿ ಸೇವಾ ಸಮಿತಿ ಉಪಯುಕ್ತ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದೆ. ವಿದ್ಯಾರ್ಥಿಗಳು ಸಂವಿಧಾನದಲ್ಲಿ ನೀಡಿರುವ ಹಕ್ಕುಗಳನ್ನು ಪಡೆದು, ಕರ್ತವ್ಯಗಳನ್ನು ಸಹ ಪರಿಣಾಮಕಾರಿಯಾಗಿ ನಿರ್ವಹಿಸಿ ಸತøಜೆಗಳಾಗಿ ರೂಪುಗೊಳ್ಳಬೇಕು.
ಗ್ರಾಮಗಳಲ್ಲಿ ಜನರಿಗೂ ಸಹ ಸಂವಿಧಾನ, ಕಾನೂನಿನ ಬಗ್ಗೆ ಜಾಗೃತಿ ಮೂಡಿಸಬೇಕಾದ್ದು ಸಹ ಅತ್ಯವಶ್ಯವಾಗಿದೆ. ಸಂವಿಧಾನವನ್ನು ಪರಿಸ್ಥಿತಿ ಹಾಗೂ ಅಗತ್ಯತೆಗೆ ಅನುಗುಣವಾಗಿ ತಿದ್ದುಪಡಿ ಸಹ ಮಾಡಲಾಗುತ್ತಿದೆ ಎಂದರು. ಕಾಲೇಜಿನ ಅಧ್ಯಕ್ಷ ಡಾ. ಚನ್ನಕೇಶವರೆಡ್ಡಿ ಮಾತನಾಡಿ ಕಾನೂನಿನ ಬಗ್ಗೆ ಪ್ರಮುಖ ಅಂಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಭಾರತೀಯ ಸಂವಿಧಾನದ ಮಹತ್ವ ಹಾಗೂ ಮೂಲಭೂತಹಕ್ಕು ಮತ್ತು ಕರ್ತವ್ಯದ ಬಗ್ಗೆ ವಕೀಲ ಎಚ್.ಎಂ. ಆನಂದಕುಮಾರ್, ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳ ಹಕ್ಕುಗಳ ಬಗ್ಗೆ ವಕೀಲ ಬಿ.ಎಂ. ಅನಂತ ಪ್ರಭಾಕರ್ ವಿವರಿಸಿದರು. ಕೈಟ್ ಕಾಲೇಜಿನ ಪ್ರಾಂಶುಪಾಲ ಡಾ: ಎಸ್.ಆರ್. ಮನೋಹರ್ ಸಹ ಮಾತನಾಡಿದರು.
ಸಹಾಯಕ ಸರಕಾರಿ ಅಭಿಯೋಜಕ ಚಂದ್ರಾರೆಡ್ಡಿ ವಿದ್ಯಾರ್ಥಿಗಳಿಗೆ ಸಂವಿಧಾನ ರಕ್ಷಣೆ, ಪಾಲನೆ ಬಗ್ಗೆ ಪ್ರತಿಜ್ಞಾ ವಿಧಿ ಬೋದಿಸಿದರು. ವಕೀಲರ ಸಂಘದ ಅಧ್ಯಕ್ಷ ಕೆ.ವಿ. ಸುಬ್ರಮಣಿ, ಉಪಾಧ್ಯಕ್ಷ ಎಸ್.ಎಂ. ಹನುಮಂತರಾವ್, ಪ್ರಧಾನ ಕಾರ್ಯದರ್ಶಿ ಕೆ.ರಮೇಶ್, ಖಜಾಂಚಿ ಎಸ್. ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.