Advertisement
ಆಗ ಭಗವಂತ ನಸುನಗುತ್ತ ಹೇಳಿದನಂತೆ- ತನ್ನ ಮಗನ ಮೇಲೆ ಈತ ಕೈಮಾಡುವ ತನಕ ತುಸು ತಡೆಯಿರಿ ಎಂದು. ಮುಗ್ಧ ಪ್ರಜ್ಞೆಯು ಇಲ್ಲಿ ಹಿಂಸೆಗೆ ಒಳಗಾದಾಗ ಅಲ್ಲಿ ಅತೀತಪ್ರಜ್ಞೆ ಎಚ್ಚರಗೊಳ್ಳುವುದೇನೋ! ಮುಗ್ಧತೆಗೂ ಅತೀತ ಪ್ರಜ್ಞೆಗೂ ಒಂದು ಅಗೋಚರ ಸಂಬಂಧವಿದೆ ! ಸಾಧುಗಳನ್ನು ರಕ್ಷಿಸಲೆಂದು ನಾನು ಮತ್ತೆ ಮತ್ತೆ ಇಳಿದು ಬರುವೆನೆಂದು ಕೃಷ್ಣ ಹೇಳಿದ್ದ. ಸಾಧು ಮನಸ್ಸೆಂದರೆ ಮುಗ್ಧ ಮನಸ್ಸೇ ಇರಬೇಕು.ಎಲ್ಲವನ್ನೂ ಪಾಶ ಹಾಕಿ ಎಳಕೊಂಡು ಹೋಗುವಂತೆ ಚಿತ್ರಿಸಿರುವ ಸಾವಿನಂಥ ಸಾವಿಗೂ, ತಾನಾಗಿ ತನ್ನ ಬಳಿ ಹುಡುಕಿಕೊಂಡು ಬರುವ ಜೀವವನ್ನು ಎದುರಿಸುವುದು ಸುಲಭವಲ್ಲ ಎಂದು ಸೂಚಿಸುವುದು ಉಪನಿಷತ್ತಿಗೆ ಇಷ್ಟವಾದಂತಿದೆ. ಮಾಮೂಲು ನಡೆಗಿಂತ ಭಿನ್ನವಾದ ಹೊಸ ನಡೆಯನ್ನು ಅರ್ಥಮಾಡಿಕೊಳ್ಳುವಲ್ಲಿಯೇ ಪ್ರಜ್ಞೆಗೆ ಹೊಸದೊಂದು ಸಂಚಲನ ಉಂಟಾಗುವುದು. ಯಮನ ಭೇಟಿಗೆಂದು ವಟು ನಚಿಕೇತ ಮರ್ತ್ಯಲೋಕದ ಮಣ್ಣಿನ ವಾಸನೆಯ ವಲಯವನ್ನು ದಾಟಿಕೊಂಡು ಯಮಲೋಕಕ್ಕೆ ಕಾಲಿಟ್ಟನಂತೆ. ಕಾಲಿಟ್ಟರೆ ಯಮನೂರಿನಲ್ಲಿ ಯಮನಿಲ್ಲ ! ಯಮನ ಮನೆ ಇದೆ; ಅಲ್ಲಿ ಮನೆಯಾಕೆ ಇದ್ದಾಳೆ. ಆದರೆ ಯಜಮಾನನೇ ಇಲ್ಲ. ಮನೆಯೊಳಗೆ ಮನೆಯೊಡೆಯನಿಲ್ಲ. ಯಮನ ಮಡದಿಗೆ ಮರ್ತ್ಯಲೋಕದಿಂದ ಬಂದ ಈ ವಟುವನ್ನು ನೋಡಿ ತಾಯಿಯಂತೆ ಮನಸ್ಸು ಮುದ್ದುಗರೆಯಿತು. “ನೀನು ನಮ್ಮ ಅತಿಥಿ’ ಎಂದಳು. ಉಪಚರಿಸಿದಳು. ಆದರೆ ನಚಿಕೇತ ಕದಲಲಿಲ್ಲ. ಯಮಧರ್ಮನನ್ನು ನೋಡದೆ ಬೇರೆ ಮಾತೇ ಇಲ್ಲ. ತಾನು ಯಮನಿಗಾಗಿ ಕಾದುಕೂರುವೆನೆಂದ. ಹೀಗೆ ಯಮನ ಮನೆಯಲ್ಲಿ ಯಮನ ಭೇಟಿಗಾಗಿ ಎಳೆಜೀವವೊಂದು ಮೂರು ಹಗಲು- ಮೂರು ಇರುಳು ಕಾದು ಕೂತ ಕಥೆಯ ಸಾಂಕೇತಿಕತೆ ಬದುಕಿನ ಮಣ್ಣಿನ ವಾಸನೆಯ ಜತೆ ಬೆರೆತುಬಿಟ್ಟಿದೆ!
ಕಾಯಬೇಕು. ಇದೊಂದು ರೀತಿಯ ಪರೀಕ್ಷೆಯೇ ನಿಜ. ಬದುಕೆಂದರೆ ಸಾವನ್ನು ಕಾಯುವುದೇ ಆಗಿದೆ- ಆದರೆ ಆ ಅರಿವಿಲ್ಲದೆ. ಅರಿವಿಲ್ಲದಿರುವುದರಿಂದಲೇ ಆ ಕುರಿತಾದ ಆತಂಕವಿಲ್ಲ. ಅರಿವಾದರೆ ಆತಂಕ. ಇದೇ ಆಶ್ಚರ್ಯ! ಅರಿವಿನಲ್ಲಿ ಆತಂಕವೇಕಾಗಬೇಕು? ಅರಿವಿಲ್ಲದೇ ಇದ್ದುದಕ್ಕೆ ಆತಂಕವಾಗಬೇಕಲ್ಲವೆ? ಸಾವೆಂಬುದು ಬದುಕಿಗೆ ವಿರೋಧಿಯಾಗಿದೆ ಎಂಬ ಗ್ರಹಿಕೆಯ ಕಾರಣದಿಂದಲೇ ಆತಂಕವುಂಟಾಗುವುದು. ಈ ಗ್ರಹಿಕೆಯೇ ದೊಡ್ಡ ತಪ್ಪುಗ್ರಹಿಕೆಯಲ್ಲವೆ? ಸಾವೆಂದರೆ ಕಾಲ. ಖಜಿಞಛಿ fಚcಠಿಟ್ಟ. ಕಾಲವು ನಮ್ಮ ಮೈಮನಸ್ಸುಗಳಲ್ಲಿ ನೆಲಸಿ ಕ್ರಿಯಾಪರವಾಗಿರುವ ನಮ್ಮ ಒಡನಾಡಿ. ಒಡನಾಡಿಯನ್ನು ವಿರೋಧಿಯೆಂದು ಬಗೆಯುವುದೇ? ನಮ್ಮ ನುಡಿಗಟ್ಟುಗಳಲ್ಲಿಯೂ ಈ ಮಾನಸಿಕತೆ ಕಾಣಿಸುತ್ತದೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಯ ಬಗ್ಗೆ ಹೇಳುತ್ತ, ಸಾವಿನೊಡನೆ ಹೋರಾಡುತ್ತಿದ್ದಾರೆ ಎನ್ನುತ್ತೇವೆ. ಬದುಕಿ ಉಳಿದರೆ ಸಾವನ್ನು ಗೆದ್ದರು ಎನ್ನುತ್ತೇವೆ. ಉಳಿಯದಿದ್ದರೆ ಕೊನೆಗೂ ಸಾವು ಗೆದ್ದಿತು ಎನ್ನುತ್ತೇವೆ. ಈ ಸೋಲು ಗೆಲುವುಗಳ ನುಡಿಕಟ್ಟುಗಳು ಇಲ್ಲಿನ ಮನಸ್ಸನ್ನು ಸೂಚಿಸುತ್ತವೆ ಅಷ್ಟೇ. ಉಳಿದರೂ ಉಳಿಯದಿದ್ದರೂ ಸಾವು ಕರುಣಾಳು ಎಂದೇಕೆ ಹೇಳಬಾರದು? ನಿಜಕ್ಕೂ ಸಾವು ಕರುಣಾಳು ಅಲ್ಲವೆ? ಬದುಕು, ಸಾವಿನಕೃಪೆ ಅಲ್ಲವೆ?
Related Articles
Advertisement
ಯಮನಿಗೆ ಆಶ್ಚರ್ಯವಾಯಿತು. ಮೂರು ದಿನದಿಂದ ಈ ಮಗು ಉಪವಾಸ ಮಾಡಿದೆ. ಆಹಾ! ಮರ್ತ್ಯಲೋಕದ ಮನೋಬಲವೇ! ಮನೆಯಾಕೆಯೂ ಉಪವಾಸ! ಯಮನನ್ನು ಕಂಡಕೂಡಲೇ ಮಡದಿ ಹೇಳಿದ ಒಂದು ಮಾತು, ಅಗ್ನಿಯೇ ಒಳಬಂದಂತೆ ಮನೆಗೆ ಬಂದಿರುವನು ಈ ಅತಿಥಿ. ನೀರು ನಿಡಿ ಮುಟ್ಟಿಲ್ಲ.
ಈ ಅಗ್ನಿಯನ್ನು ಉಪಶಾಂತಗೊಳಿಸುವುದು ಮೊದಲ ಕೆಲಸ- ಎಂಬ ಮಾತು.ಸಾವಿನ ದೊರೆ ಕರಗಿಹೋದ. ತನ್ನನ್ನು ಕಂಡರೆ ಭಯದಿಂದ ನಡುಗುವ ಮನುಷ್ಯ ಲೋಕದಿಂದ ಬಂದ ಈ ಪುಟ್ಟ ಅತಿಥಿಯ ಮೇಲೆ ಅಕ್ಕರೆಯುಕ್ಕಿತು. ತನ್ನ ನಿರೀಕ್ಷೆಯಲ್ಲಿ ಕಳೆದ ಮೂರು ರಾತ್ರಿಗಳನ್ನು ನೆನೆದು ಮೂರು ವರಗಳನ್ನು ನೀಡುವೆನೆಂದು ಯಮಧರ್ಮ ತನ್ನ ಉದಾರತೆಯಿಂದ ಉಂಟಾದ ಸಂತಸವನ್ನು ತಾನೇ ಅನುಭವಿಸಿದ.
ಮಹಾಭಾರತದ ಸಾವಿತ್ರಿ ಉಪಾಖ್ಯಾನದಲ್ಲಿ ಇಂಥದೇ ಸಂದರ್ಭವೊಂದು ಬಂದಿದೆ. ಸತ್ಯವಾನನ ಜೀವವನ್ನು ಸೆಳೆದು ಒಯ್ಯುತ್ತಿದ್ದವನು, ಹಿಂತಿರುಗಲೊಲ್ಲದೆ ಹಿಂಬಾಲಿಸುತ್ತಿದ್ದ ಸಾವಿತ್ರಿಗೆ ವರಗಳನ್ನು ನೀಡುವನು. ಸತ್ಯವಾನನ ಜೀವವೊಂದನ್ನುಳಿದು ಬೇರೇನು ಕೇಳಿದರೂ ಕೊಡುವೆನೆಂದಿದ್ದ. ಜೀವ ಅಮೂಲ್ಯ. ಜೀವ ಅಪೂರ್ವ. ಜೀವಕ್ಕೆ ಬೇರೆ ಯಾವುದೂ ಸರಿಸಾಟಿಯಲ್ಲ. ಅದಕ್ಕೆ ಹೋಲಿಕೆಯೇ ಇಲ್ಲ. ಸಾವಿನಲ್ಲಿ ಗೊತ್ತಾಗುವ ಈ ನಿಜ ಬದುಕಿನಲ್ಲಿಯೇ ಗೊತ್ತಾಗುವಂತಿದ್ದರೆ! ಹಾಗೆ ಗೊತ್ತಾದವರಿದ್ದರೆ ಅಂಥವರ ಬದುಕು ನಿಜವಾಗಿ ಜೀವಂತ. ಅದು ಆಧ್ಯಾತ್ಮಿಕವಾಗಿಯೂ ಜೀವಂತ. ಸಾಮಾಜಿಕವಾಗಿಯೂ ಜೀವಂತ. ಸಾಕ್ರಟೀಸ್ ಕೊನೆಯ ಮಾತು ಇದು: “ನನಗೆ ಮರಣ ದಂಡನೆ ವಿಧಿಸಿದ್ದೀರಿ. ಒಳ್ಳೆಯದು. ಒಪ್ಪಿಕೊಳ್ಳುವೆ. ನಾನು ಸಾಯಲು ಹೊರಟಿರುವೆ. ನೀವೆಲ್ಲ ಬದುಕಿ ಬಾಳಲು ಹೊರಟಿದ್ದೀರಿ. ಆದರೆ, ಇವೆರಡರಲ್ಲಿ ಯಾವುದು ಒಳ್ಳೆಯದೋ ದೇವರು ಮಾತ್ರ ಬಲ್ಲ”.
ಜೀವವನ್ನು, ಬದುಕಿನಲ್ಲಿ- ಉಳಿದ ವಸ್ತು ವಾಹನ ಭೋಗಗಳಿಗೆ ಬಲಿಕೊಡಲಾಗುತ್ತಿದೆ. ಅನಿತ್ಯ ಪದಾರ್ಥಗಳಿಗೆ ನಿತ್ಯ ವಸ್ತುವನ್ನು ಬಲಿಕೊಡಲಾಗುತ್ತಿದೆ. ಜೀವಿಗೆ, ಜೀವದ, ಜೀವಂತಿಕೆಯ ಮಹಣ್ತೀವು ಗೊತ್ತಾಗುವುದೆಷ್ಟು ಕಷ್ಟ! ಜೀವಂತಿಕೆ ಎಂದರೆ ಸುಖಾಪೇಕ್ಷೆಯಲ್ಲ. ಜೀವಂತಿಕೆ ಎಂದರೆ ಲೋಕವ್ಯವಸ್ಥೆಯೊಡನೆ ರಾಜಿ ಒಪ್ಪಂದದ ಬದುಕಲ್ಲ. ಜೀವಂತಿಕೆ ಎಂದರೆ ಜೀವನ್ಮರಣ ಪ್ರಶ್ನೆ ಎದುರಾದಾಗಲೂ ಕೇಡಿನೊಡನೆ ರಾಜಿಯಾಗದೆ ಮರಣವನ್ನೇ ಆಯುವ ಹೊತ್ತಿನಲ್ಲಿ ಪ್ರಕಟವಾಗುವ ಉನ್ನತ ಭಾವ-ಸ್ಥಿತಿ. ಆಗ- ಇಂಥವರ ನೆತ್ತಿಯ ಮೇಲೆ ಜಗತ್ತಿನ ಪ್ರಳಯವನ್ನು ತೋರಿಸಬಲ್ಲ ಬೆಳಕು ಬೆಳಗುತ್ತಿರಬಹುದು!
-ಲಕ್ಷ್ಮೀಶ ತೋಳ್ಪಾಡಿ