ಶಹಾಪುರ: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯ ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಹಲವು ರೈತ ಸಂಘಟನೆಗಳೊಂದಿಗೆ ಶಹಾಪುರ ನಗರದಲ್ಲಿ ಮಾಜಿ ಶಾಸಕ ಗುರು ಪಾಟೀಲ ಶಿರವಾಳ ನೇತೃತ್ವದಲ್ಲಿ ನಗರದ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ನಡೆಸುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಗುರು ಪಾಟೀಲ, ರೈತರ ಸಾಲ ಮನ್ನಾ ಮಾಡಲೇಬೇಕು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಚುನಾವಣೆ ಪೂರ್ವ ನಾಡಿನ ಜನತೆಗೆ ನೀಡಿರುವ ಭರವಸೆಯಂತೆ, ಅಲ್ಲದೆ ಜೆಡಿಎಸ್ ಪ್ರಣಾಳಿಕೆಯಲ್ಲಿ ನಮೂದಿಸಿದಂತೆ ರೈತರ ಸಾಲ ಮನ್ನಾ ಮಾಡಬೇಕು. ಅಧಿಕಾರಕ್ಕೆ ಬರುವ ಮುಂಚಿತವಾಗಿ ಒಂದು ಹೇಳಿಕೆ ಭರವಸೆ ನೀಡುವುದು, ಅಧಿಕಾರಕ್ಕೆ ಬಂದ ಮೇಲೆ ಭರವಸೆ ಮರೆತು ಮಾತು ಬದಲಾಯಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ, ಕಳೆದ ಎರಡು ವರ್ಷದಿಂದ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿಕೊಂಡ ಬಂದಿದ್ದ ಕುಮಾರಸ್ವಾಮಿ ಈಗ ಮುಖ್ಯಮಂತ್ರಿ ಆದ ಮೇಲೆ ಪೂರ್ಣ ಬಹುಮತವಿಲ್ಲ. ಕಾಂಗ್ರೆಸ್‌ನವರ ಜೊತೆ ಚರ್ಚೆ ಮಾಡುತ್ತೇನೆ. ನೋಡುತ್ತೇನೆ ಎನ್ನುವುದು ಎಷ್ಟು ಸಮಜಂಸ. ತಮಗೆ ಎರಡು ನಾಲಿಗೆ ಇವೆ ಎಂಬುದು ಇದು ಸಾಕ್ಷಿಕರಿಸುತ್ತದೆ. ಇಂತಹ ಎರಡು ನಾಲಿಗೆ ಉಳ್ಳ ಮುಖ್ಯಮಂತ್ರಿ ದೊರೆತಿರುವುದು ನಾಡಿನ ದೌರ್ಭಾಗ್ಯ ಎಂದು ಕಿಡಿಕಾರಿದರು.
ಮಾಜಿ ಎಂಎಲ್‌ಸಿ ಅಮಾತೆಪ್ಪ ಕಂದಕೂರ, ರೈತ ಮುಖಂಡ ಮಲ್ಲಣ್ಣ ಪರಿವಾಣ ಮಾತನಾಡಿದರು. ನಂತರ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಅವರಿಗೆ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಲಾಯಿತು.
ಮುಖಂಡರಾದ ಮಲ್ಲಣ್ಣ ಮಡ್ಡಿ, ಡಾ| ಚಂದ್ರಶೇಖರ ಸುಬೇದಾರ, ಲಾಲನಸಾಬ ಖುರೇಶಿ, ವಸಂತಕುಮಾರ ಸುರಪುರಕರ್, ಮಲ್ಲಿಕಾರ್ಜುನ ಚಿಲ್ಲಾಳ, ಗುರು ಕಾಮಾ, ದೇವು ಕೋನೇರ ಸೇರಿದಂತೆ ಇತರರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಅವರು ಅಪಘಾತದಲ್ಲಿ ಮೃತ ಪಟ್ಟ ಸುದ್ದಿ ತಿಳಿದಿದ್ದರಿಂದ, ಪ್ರತಿಭಟನೆಯಲ್ಲಿ ಎರಡು ನಿಮಿಷ ಮೌನಾಚಾರಣೆ ಮಾಡುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.
ದ್ವಂದ್ವ ನಿಲುವು: ರಸ್ತೆ ತಡೆಗೆ ಸೀಮಿತ ಸೋಮವಾರ ಬೆಳಗ್ಗೆ ನಗರದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಮುಖಂಡರು ಸೇರಿದಂತೆ ವಿವಿಧ ರೈತ ಸಂಘಟನೆಗಳು ಬಂದ್ ಆಚರಣೆ ಕುರಿತು ದ್ವಂದ್ವ ನಿಲುವಿನಿಂದಾಗಿ, ಅಂತಿಮವಾಗಿ ಬಸವೇಶ್ವರ ವೃತ್ತದಲ್ಲಿ 2 ತಾಸು ರಸ್ತೆ ತಡೆ ನಡೆಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ಬಸ್ ಸೇರಿದಂತೆ ವಿವಿಧ ಖಾಸಗಿ ವಾಹನಗಳ ಸಂಚಾರಕ್ಕೂ ಅಡತಡೆ ಉಂಟಾಯಿತು. ಆದರೆ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬೆಳಗ್ಗೆ ವರ್ತಕರು ಅಂಗಡಿಗಳನ್ನು ಮುಚ್ಚಲು ನಿರ್ಧರಿಸಿದ್ದರು. ನಂತರ ರಸ್ತೆ ತಡೆಗೆ ಮಾತ್ರ ಹೋರಾಟ ಸೀಮಿತವಾಗಿದ್ದರಿಂದ ಅಂಗಡಿ ಮುಂಗಟ್ಟುಗಳು ಮತ್ತೇ ಎಂದಿನಂತೆ ತೆರೆದರು. ನಗರದಲ್ಲಿ ಆಟೋ ಸೇರಿದಂತೆ ಇತರೆ ವಾಹನಗಳ ಸಂಚಾರಕ್ಕೆ ಯಾವುದೇ ಸಮಸ್ಯೆ ಕಂಡು ಬರಲಿಲ್ಲ.