Advertisement

ಆರ್ಥಿಕ ನೆರವಿಲ್ಲದೆ ಶಿಕ್ಷಣ ಸಂಸ್ಥೆ ನಡೆಸುವುದು ಸುಲಭವಲ್ಲ

02:47 PM Mar 16, 2018 | |

ಮಂಗಳೂರು : ವಿದ್ಯಾರ್ಥಿಗಳಿಂದ ಯಾವುದೇ ರೀತಿಯಲ್ಲಿ ಆರ್ಥಿಕ ನೆರವನ್ನು ಪಡೆಯದೆ ಶಿಕ್ಷಣ ಸಂಸ್ಥೆ ನಡೆಸುವುದು ಸುಲಭದ ಕೆಲಸವಲ್ಲ. ಆದರೆ ನವಭಾರತ ರಾತ್ರಿ ಪ್ರೌಢಶಾಲೆ ಇದನ್ನು ಸಾಧಿಸಿದೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್‌. ವಿನಯ ಹೆಗ್ಡೆ ಹೇಳಿದರು.

Advertisement

ನಗರದ ರಥಬೀದಿಯಲ್ಲಿರುವ ನವಭಾರತ ರಾತ್ರಿ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಮಾತನಾಡಿದ ಅವರು, ನನಗೂ ಈ ಶಾಲೆಗೂ ಕಳೆದ ಅನೇಕ ವರ್ಷಗಳಿಂದ ಸಂಬಂಧವಿದೆ. ಈ ಶಾಲೆಯ ಸೃಷ್ಟಿಕರ್ತ ಖಾಲಿದ್‌ ಮಹಮ್ಮದ್‌ ಭಗವಂತ ಮೆಚ್ಚುವ ಸೇವೆ ಮಾಡಿದ್ದಾರೆ ಎಂದು ತಿಳಿಸಿದರು.

 ಕಳೆದ 75 ವರ್ಷಗಳ ಹಿಂದೆ ಅನೇಕರಿಗೆ ವಿದ್ಯಾಭ್ಯಾಸಕ್ಕೆ ತುಂಬಾ ಕಷ್ಟವಿತ್ತು. ಮನೆಯಲ್ಲಿ ಬಡತನವಿದ್ದ ಸಮಯದಲ್ಲಿ ಬೆಳಗ್ಗೆ ಕೂಲಿ ಕೆಲಸಕ್ಕೆ ಹೋಗುವ ಅನಿವಾರ್ಯತೆ ಹಲವಾರು ಮಂದಿಗಿತ್ತು. ಆಗ ಅವರು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದರು. ಅಂತಹವರಿಗೆ ಬೆಳಕಾಗಿ ರಾಜ್ಯದಲ್ಲೇ ಮೊದಲ ರಾತ್ರಿ ಪ್ರೌಢಶಾಲೆಯಾಗಿ ಹುಟ್ಟಿಕೊಂಡದ್ದು ನವಭಾರತ ಶಾಲೆ ಎಂದು ಹೇಳಿದರು.

ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ| ಪಿ.ವಿ. ಶೆಣೈ ಮಾತನಾಡಿ, ಈ ಸಂಸ್ಥೆಯು ಕೇವಲ ನಾಲ್ಕು ಮಂದಿ ವಿದ್ಯಾರ್ಥಿಗಳಿಂದ ಪ್ರಾರಂಭವಾಗಿ, ರಾಜ್ಯದಲ್ಲೇ ಮೊದಲ ರಾತ್ರಿ ಪ್ರೌಢಶಾಲೆಯಾಗಿ ಹೊರಹೊಮ್ಮಿದೆ. ಸದ್ಯ ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌ ತರಗತಿ, ಯಕ್ಷಗಾನ, ಯೋಗಾಸನ, ಎಸ್‌ಎಸ್‌ಎಲ್‌ಸಿ ಕೋಚಿಂಗ್‌ ಕಲಿಸುತ್ತಿದ್ದೇವೆ. ವಿದ್ಯಾರ್ಥಿಗಳಿಂದ ನಯಾ ಪೈಸೆ ತೆಗೆದುಕೊಳ್ಳದೆ ದಾನಿಗಳ ಹಣದಿಂದ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದೇವೆ ಎಂದು ವಿವರಿಸಿದರು.

ನವಭಾರತ ಎಜುಕೇಶನ್‌ ಸೊಸೈಟಿ ಅಧ್ಯಕ್ಷ ಡಾ| ಬಿ. ಅಹಮದ್‌ ಹಾಜಿ ಮೊಹಿಯುದ್ದೀನ್‌ ತುಂಬೆ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉದ್ಯಮಿ ವಿಲಾಸ ನಾಯಕ್‌, ಕೈಂಡ್‌ ಫೌಂಡೇಶನ್‌ ಕಾರ್ಯದರ್ಶಿ ಡಾ| ಪಿ. ಕೇಶವನಾಥ, ಸಂಸ್ಥೆಯ ಸಂಚಾಲಕ ಎಂ. ರಾಮಚಂದ್ರ ಸಹಿತ ಗಣ್ಯರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಯಕ್ಷಗಾನ ಬಯಲಾಟ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next