Advertisement

ಜನರಿಗೆ ಸತ್ಯ ತಿಳಿಸುವ ಪ್ರಯತ್ನ ಅಗತ್ಯ : ತೇಜಸ್ವಿ ಸೂರ್ಯ

11:08 PM Nov 22, 2022 | Team Udayavani |

ಮಣಿಪಾಲ: ಕೇಂದ್ರ ಹಾಗೂ ರಾಜ್ಯ ಸರಕಾರದ ಸಾಧನೆಯನ್ನು ಜನಸಾಮಾನ್ಯರಿಗೆ ತಿಳಿಸದೆ ಹೋದರೆ ಕಾಂಗ್ರೆಸ್‌ನವರ ಸುಳ್ಳೆ ಎಲ್ಲೆಡೆ ಮೇಳೈಸಲಿದೆ. ಮುಂದಿನ ವರ್ಷ ಚುನಾವಣೆ ನಡೆಯುವುದರಿಂದ ಯುವಮೋರ್ಚಾದ ಕಾರ್ಯಕರ್ತರು ಅತ್ಯಂತ ಸೂಕ್ಷ್ಮ ಹಾಗೂ ಎಚ್ಚರಿಕೆ ಯಿಂದ ಕಾರ್ಯೋನ್ಮುಖರಾಗುವ ಮೂಲಕ ಸತ್ಯವನ್ನು ಜನರಿಗೆ ತಿಳಿಸಬೇಕು ಎಂದು ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಸಂಸದ ತೇಜಸ್ವಿ ಸೂರ್ಯ ಕರೆ ನೀಡದರು.

Advertisement

ಮಂಗಳವಾರ ಮಣಿಪಾಲದಲ್ಲಿ ನಡೆದ ಬಿಜೆಪಿ ಯುವಮೋರ್ಚಾ ರಾಜ್ಯ ಕಾರ್ಯಕಾರಿಣಿ ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರಿ, ಹಾಲು ಉತ್ಪಾದನೆ, ರಫ್ತು ಹೀಗೆ ಎಲ್ಲ ಕ್ಷೇತ್ರದಲ್ಲೂ ಗುಜರಾತ್‌ ಮುಂದಿದೆ. ಕರ್ನಾಟಕಕ್ಕೂ ಈ ಎಲ್ಲ ಕ್ಷೇತ್ರದಲ್ಲೂ ಮೊದಲ ಸ್ಥಾನಗಳಿಸುವ ಸಾಮರ್ಥ್ಯ ಇದೆ. ಇದರ ಸಾಕಾರ ಕ್ಕಾಗಿ ಬಿಜೆಪಿ ಮುಂದಿನ 25 ವರ್ಷ ಆಡಳಿತದಲ್ಲಿ ಇರಬೇಕು. ಸಂಸತ್‌ನಿಂದ ಗ್ರಾ.ಪಂ. ವರೆಗೂ ಬಿಜೆಪಿ ಅಧಿಕಾರದಲ್ಲಿ ಇರಬೇಕು. ಆ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ 5 ಟ್ರಿಲಿಯನ್‌ ಆರ್ಥಿಕತೆಗೆ ಕರ್ನಾಟಕದಿಂದ 1 ಟ್ರಿಲಿಯನ್‌ ಕೊಡುಗೆ ಯಾಗಿ ನೀಡಲು ಸಾಧ್ಯ ಎಂದರು.

ವಿಪಕ್ಷದ ವಿರುದ್ಧ ವಾಗ್ಧಾಳಿ
ಗುಜರಾತ್‌ ಹಿಮಾಚಲ ಪ್ರದೇಶ ಸಹಿತವಾಗಿ ಚುನಾವಣೆ ಆಗಿರುವ ಹಾಗೂ ಆಗುತ್ತಿರುವ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಆಮ್‌ ಆದ್ಮಿ ಪಕ್ಷ (ಎಎಪಿ) ಈಗ ಜಮಾನತ್‌ ಜಪ್ತ್ ಪಾರ್ಟಿ (ಜೆಜೆಪಿ) ಆಗಿದೆ. ಗುಜರಾತ್‌ನ ಎಲ್ಲ ಕ್ಷೇತ್ರಗಳಲ್ಲೂ ಈ ಪಕ್ಷದ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳಲಿದ್ದಾರೆ. ಬಿಜೆಪಿ 130ರಿಂದ 140 ಸೀಟು ಗಳಿಕೆಯೊಂದಿಗೆ ಮತ್ತೂಮ್ಮೆ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್‌ ಸಂಪೂರ್ಣ ಶಸ್ತ್ರತ್ಯಾಗ ಮಾಡಿದೆ. ರಾಹುಲ್‌ ಗಾಂಧಿಯವರು ಚುನಾವಣೆ ಪ್ರಚಾರ ಬಿಟ್ಟು ವಾಕಿಂಗ್‌ ಮಾಡುತ್ತಿದ್ದಾರೆ. ಕರ್ನಾಟಕದಲ್ಲೂ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಶಸ್ತ್ರತ್ಯಾಗ ಮಾಡಲಿದೆ. ಡಿ.ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವ ರನ್ನು ಜೋಡಿಸಲು ರಾಹುಲ್‌ ಗಾಂಧಿ ಯವರಿಗೆ ಸಾಧ್ಯವಾಗಿಲ್ಲ. ಹಾಗಿರುವಾಗ ಭಾರತ ವನ್ನು ಹೇಗೆ ಜೋಡಿಸುತ್ತಾರೆ ಎಂದು ಪ್ರಶ್ನಿಸಿದರು.

ಡಬಲ್‌ ಎಂಜಿನ್‌ ಶಕ್ತಿ
ಪಂಜಾಬ್‌, ಪಶ್ಚಿಮ ಬಂಗಾಲ ಸಹಿತ ಕೆಲವು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿಲ್ಲ. ಹೀಗಾಗಿ ಕೇಂದ್ರ ಸರಕಾರದ ಯಾವ ಯೋಜನೆಗಳೂ ಶೇ. 100ರಷ್ಟು ಅನುಷ್ಠಾನ ಆಗುತ್ತಿಲ್ಲ. ಆದರೆ ಡಬಲ್‌ ಎಂಜಿನ್‌ ಸರಕಾರ (ಕೇಂದ್ರ, ರಾಜ್ಯಗಳೆರಡರಲ್ಲೂ ಬಿಜೆಪಿ ಆಡಳಿತ) ಇರುವ ರಾಜ್ಯಗಳಲ್ಲಿ ಕೇಂದ್ರ ಸರಕಾರದ ಉಜಾಲ, ಉಜ್ವಲ, ಸುಜಲ, ಜಲಜೀವನ್‌ ಮಿಷನ್‌ ಸೇರಿದಂತೆ ಎಲ್ಲ ಯೋಜನೆಯೂ ಶೇ. 100ರಷ್ಟು ಅನುಷ್ಠಾನ ಆಗುತ್ತಿದೆ. ಕರ್ನಾಟಕ ಸರಕಾರ ಕಿಸಾನ್‌ ಸಮ್ಮಾನ ಯೋಜನೆಗೆ 4 ಸಾವಿರ ರೂ. ಸೇರಿಸಿ ಕೊಡುತ್ತಿದೆ. ಬೆಂಗಳೂರಿನಲ್ಲಿ ಸಬ್‌ ಅರ್ಬನ್‌ ರೈಲು ಸಂಚಾರ ಯೋಜನೆಗೆ ಶಂಕುಸ್ಥಾಪನೆಯಾಗಿದೆ. ಚಿಕ್ಕಮಗಳೂರಿಗೆ ರೈಲು ನಿಲ್ದಾಣ ಬಂದಿದೆ. ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ವಿಮಾನ ನಿಲ್ದಾಣದ 2ನೇ ಟರ್ಮಿನಲ್‌ 5 ಸಾವಿರ ಕೋ.ರೂ. ವೆಚ್ಚದಲ್ಲಿ ಉತ್ಕೃಷ್ಟ ರೀತಿಯಲ್ಲಿ ನಿರ್ಮಿಸಲಾಗಿದೆ. ಹೀಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೆಲಸ ಮಾಡಿ ತೋರಿಸಿದೆ. ಅದನ್ನು ಜನ ಸಾಮಾನ್ಯರಿಗೆ ಮುಟ್ಟಿಸುವ ಕಾರ್ಯ ಯುವಮೋರ್ಚಾ ಮಾಡಬೇಕು ಎಂದರು.

Advertisement

ರಾಜಕೀಯ ಇಚ್ಛಾಶಕ್ತಿ
ಮಂಗಳೂರಿನಲ್ಲಿ ನಡೆದ ಭಯೋತ್ಪಾದನ ಕೃತ್ಯ ಸಹಿತ್ಯವಾಗಿ ಆಂತರಿಕ ಹಾಗೂ ಬಾಹ್ಯ ಸುರಕ್ಷತೆಗೆ ಸಂಬಂಧಿಸಿದ ಯಾವುದೇ ಘಟನೆ ನಡೆದಾಗಲೂ ಅತ್ಯಂತ ಸೂಕ್ಷ್ಮವಾಗಿ ಅದನ್ನು ಗಮನಿಸಿ, ಪ್ರಬಲವಾಗಿ ವಿರೋಧಿಸುವ ರಾಜಕೀಯ ಇಚ್ಛಾಶಕ್ತಿ ತೋರಿಸಬೇಕು. ಕೇಂದ್ರ ಸರಕಾರ ತ್ರಿವಳಿ ತಲಾಖ್‌, ಕಾಶ್ಮೀರದಲ್ಲಿ 371(ಜೆ) ರದ್ದು ಮಾಡಿದೆ. ರಾಮಮಂದಿರ ನಿರ್ಮಾಣ ಮಾಡುತ್ತಿದೆ. ಪಿಎಫ್ಐ ಬ್ಯಾನ್‌ ಆಗಿದೆ.

ಇದೆಲ್ಲವೂ ಬಿಜೆಪಿಯ ರಾಜಕೀಯ ಇಚ್ಛಾಶಕ್ತಿಯಿಂದ ಸಾಧ್ಯವಾಗಿದೆ. ಕಾಂಗ್ರೆಸ್‌ನ ಯುವ ಘಟಕ, ಜೆಡಿಎಸ್‌ನ ಯುವ ಘಟಕದಿಂದ ಇದನ್ನು ನಿರೀಕ್ಷೆ ಮಾಡಲು ಸಾಧ್ಯವೇ? ಬಿಜೆಪಿ ಅಭಿವೃದ್ಧಿಯ ಜತೆಗೆ ದೇಶದ ಸುರಕ್ಷೆಗೂ ಆದ್ಯತೆ ನೀಡುತ್ತಿದೆ. ದೇಶ ವಿರೋಧಿ, ಸಂವಿಧಾನ ವಿರೋಧಿ ಸಂಘಟನೆಗಳನ್ನು ಬೇರು ಸಮೇತ ಕಿತ್ತುಹಾಕಲಾಗುತ್ತಿದೆ ಎಂದರು.

ಶಾಸಕ ಕೆ. ರಘುಪತಿ ಭಟ್‌ ಮಾತನಾಡಿ, ಬಿಜೆಪಿಗೆ ಸಂಘಟನಾತ್ಮಕ ಶಕ್ತಿ ತುಂಬುವಲ್ಲಿ ಉಡುಪಿಗೆ ಐತಿಹಾಸಿಕ ಹಿನ್ನೆಲೆಯಿದೆ. ಬಿಜೆಪಿ ಉಡುಪಿಯಿಂದ ಯಾವುದೇ ಕಾರ್ಯ ಆರಂಭಿಸಿದರೂ ಅದು ಖಂಡಿತ ಯಶಸ್ಸು ಸಾಧಿಸುತ್ತದೆ ಎಂದರು.

ರಾಜ್ಯ ಯುವಮೋರ್ಚಾ ಪ್ರಭಾರಿ ಮಹೇಶ್‌ ಟೆಂಗಿನಕಾಯಿ ಮಾತನಾಡಿದರು. ಯುವಮೋರ್ಚಾ ರಾಜ್ಯಾಧ್ಯಕ್ಷ ಡಾ| ಸಂದೀಪ್‌ ಕುಮಾರ್‌ ಪ್ರಸ್ತಾವನೆಗೈದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ಮಂಗಳೂರು ಪ್ರಭಾರಿ ಹಾಗೂ ಮೈಸೂರು ಎಲೆಕ್ಟ್ರಿಕಲ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಕೆ. ಉದಯ ಕುಮಾರ್‌ ಶೆಟ್ಟಿ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ವಿಖ್ಯಾತ್‌ ಶೆಟ್ಟಿ ಉಪಸ್ಥಿತರಿದ್ದರು.

ಯುವಮೋರ್ಚಾ ರಾಜ್ಯ ಉಪಾಧ್ಯಕ್ಷ ಹರ್ಷಿತ್‌ ವೆಂಕಟೇಶ್‌ ಸ್ವಾಗತಿಸಿದರು. ರಾಜ್ಯ ಕಾರ್ಯ ಕಾರಿಣಿ ಸದಸ್ಯ ಪ್ರಜ್ವಲ್‌ ಶೆಟ್ಟಿ ವಂದಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಜಿತ್‌ ಹೆಗ್ಡೆ, ಮಲ್ಲಿಕಾರ್ಜುನ ಬಾಳೀಕಾಯಿ ನಿರೂಪಿಸಿದರು.

ಜನಜಾಗೃತಿ ನಿರ್ಣಯ
ಹಿಂದೂ ವಿರೋಧ ಕಾಂಗ್ರೆಸ್‌ನ ಅಪಪ್ರಚಾರ ಹಾಗೂ ಬಿಜೆಪಿ ಸರಕಾರದ ಜನಪರ ಕಾರ್ಯಗಳ ಕುರಿತು ಜನಜಾಗೃತಿ ಮೂಡಿಸುವ ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಾಳೀಕಾಯಿ ಮಂಡಿಸಿದ ಈ ನಿರ್ಣಯವನ್ನು ಉಪಾಧ್ಯಕ್ಷ ಪ್ರಕಾಶ್‌ ಶೃಂಗೇರಿ ಹಾಗೂ ಕಾರ್ಯದರ್ಶಿ ಅಮರೇಶ್‌ ರೈತನಗರ ಅನುಮೋದಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next