Advertisement

ಪ್ರಕೃತಿ ಮಾತೆ ಉಳಿಸುವುದು ಅನಿವಾರ್ಯ

11:45 AM Apr 23, 2019 | pallavi |

ಹುಬ್ಬಳ್ಳಿ: ಸಸಿ ನೆಟ್ಟು ಬೆಳೆಸುವ ಸಂಕಲ್ಪ ಮಾಡಿ ಭೂಮಿ, ಪ್ರಕೃತಿ ಮಾತೆ ಉಳಿಸುವುದು ಇಂದಿನ ಅನಿವಾರ್ಯತೆ ಎಂದು ಪರಿಸರ ಪ್ರೇಮಿ ಆರ್‌.ಜಿ. ತಿಮ್ಮಾಪುರ ಹೇಳಿದರು.

Advertisement

ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ದೇಶಪಾಂಡೆ ಪ್ರತಿಷ್ಠಾನ ಸಹಯೋಗದಲ್ಲಿ ಇಲ್ಲಿನ ವಿದ್ಯಾನಗರ ಅಕ್ಷಯ ಕಾಲೊನಿಯ ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಕೋರ್‌ ವಿಜ್ಞಾನ ಚಟುವಟಿಕಾ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಭೂ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜೀವಗಳಿಗೆ ಅಗತ್ಯವಾಗಿರುವುದೆಲ್ಲವೂ ಭೂಮಿಯಲ್ಲಿದೆ. ಸಕಲ ಜೀವರಾಶಿಗಳಿಗೂ ಇರುವುದೊಂದೇ ಭೂಮಿ. ಜೀವೋತ್ಪತ್ತಿ ಮತ್ತು ಜೀವವಿಕಾಸಕ್ಕೆ ನೆರವಾದದ್ದು ಸಸ್ಯ ಸಂಕುಲ. ಮನುಷ್ಯನ ದುರಾಸೆಯಿಂದ ಸಸ್ಯ ಸಂಕುಲ, ನೈಸರ್ಗಿಕ ಸಂಪನ್ಮೂಲ ಕ್ಷೀಣಿಸುತ್ತಿದೆ. ಅದು ಜೈವಿಕ ಅಸಮತೋಲನ ಮತ್ತು ಭೂ ಉಷ್ಣತೆ ಹೆಚ್ಚಲು ಕಾರಣವಾಗಿದೆ ಎಂದರು.

ಕೋರ್‌ ವಿಜ್ಞಾನ ಚಟುವಟಿಕಾ ಕೇಂದ್ರದ ಮುಖ್ಯಸ್ಥ ಗುರು ಮದ್ನಳ್ಳಿ ಪ್ರಾಸ್ತಾವಿಕ ಮಾತನಾಡಿ, ಹಸಿರಿನಿಂದ ಕಂಗೊಳಿಸುತ್ತಿದ್ದ ಭೂಮಿ ಇಂದು ಕಾಂಕ್ರೀಟ್ ಕಾಡಾಗುತ್ತಿದೆ. ಮಾಲಿನ್ಯ, ಅತಿ ಜನಸಂಖ್ಯೆಯಿಂದ ಗೊಂದಲದ ಗೂಡಾಗುತ್ತಿದೆ. ಮನುಷ್ಯ ಅನ್ನ ಬೆಳೆಯುವ ಮಣ್ಣು, ಉಸಿರಾಡುವ ಗಾಳಿ, ಕುಡಿಯುವ ನೀರು ಸೇರಿದಂತೆ ಭೂಮಾತೆಯ ಒಡಲಿಗೆ ವಿಷವುಣಿಸಿ ಚಂದ್ರನ ಮೇಲೆ, ಮಂಗಳನ ಅಂಗಳದಲ್ಲಿ ಮನೆ ಕಟ್ಟುವ ಕನಸು ಕಾಣುತ್ತಿದ್ದಾನೆ ಎಂದರು.

ವಿದ್ಯಾರ್ಥಿಗಳಾದ ಯಶವಂತ ಕೋಡಬಾಳ, ಮೇಘಾ ಮಾಳಮ್ಮನವರ ಅತಿಥಿಯಾಗಿ ಮಾತನಾಡಿದರು. ಭೂಮಿ ಹಾಗೂ ಜೀವಿಗಳ ಉಗಮ, ಭೂಮಿ ತನ್ನೊಳಗೆ ಹುದುಗಿಸಿಟ್ಟುಕೊಂಡಿರುವ ವಿಸ್ಮಯ, ಕುತೂಹಲಕಾರಿ ಸಂಗತಿಗಳ ಕುರಿತು ವೀಡಿಯೋ ಮತ್ತು ಪ್ರಜಂಟೇಶನ್‌ ಮೂಲಕ ಮಕ್ಕಳಿಗೆ ಶಿಕ್ಷಕ ಭರಮಪ್ಪ ಮೂಲಗಿ ತಿಳಿಸಿದರು.

Advertisement

ನಂತರ ನಡೆದ ಸಂವಾದದಲ್ಲಿ ಆರ್‌.ಜಿ. ತಿಮ್ಮಾಪುರ ವಿದ್ಯಾರ್ಥಿಗಳು ಕೇಳಿದ ಆಲದ ಮರಕ್ಕೆ ಬೀಳಲು ಬೇರುಗಳು ಏಕಿರುತ್ತವೆ? ಇತ್ತೀಚೆಗೆ ಪಕ್ಷಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಏಕೆ? ಸೇರಿದಂತೆ ಇನ್ನಿತರೆ ಪ್ರಶ್ನೆಗಳಿಗೆ ಉತ್ತರಿಸಿದರು.

ಶಂಕರ ಕುರುಬರ, ಫಕ್ಕೀರೇಶ್ವರ ಮಡಿವಾಳರ, ನಿವೇದಿತಾ ಜವಳಿಮಠ, ಸುಜಯ ಭೋಜಕರ, ಭಾಗ್ಯಶ್ರೀ ಗಂಡಿ, ಪುಂಡಲೀಕ ದೇವರಮನಿ, ದೀಪ್ತಿ ಗಾಯಕವಾಡ, ರಮೇಶ ಹನಸಿ, ಬಸವರಾಜ ಮುದಗಲ್ಲ, ನಾರಾಯಣ ಚವ್ಹಾಣ, ಜ್ಯೋತಿ ಕಾಪರೆ, ಹನ್ನಿಫಾ ಗೋಟೇಗಾರ, ನಿಂಗನಗೌಡ ಸತ್ತಿಗೌಡ್ರ, ಮಂಜುನಾಥ ಜಾನಣ್ಣವರ, ಸವಿತಾ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next