ಹಾವೇರಿ: ಭಾರತೀಯ ಜನತಾ ಪಾರ್ಟಿ ದೊಡ್ಡ ಪಕ್ಷವಾಗಿದೆ. ಹೀಗಾಗಿ ಸಚಿವ ಸ್ಥಾನಕ್ಕಾಗಿ ದೊಡ್ಡ ಮಟ್ಟದಲ್ಲಿ ಲಾಬಿ ಆಗುವುದು ಸಹಜ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ಹೇಳಿದರು.
ನಗರದ ಐಬಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರು ಶಿಸ್ತಿನ ಸಿಪಾಯಿಗಳಾಗಿದ್ದಾರೆ. ವರಿಷ್ಠರು ಹೇಳಿದ್ದನ್ನ ನಾವು ಪಾಲನೆ ಮಾಡಬೇಕು. ನಮ್ಮ ಪಕ್ಷದ ಕಡೆಯಿಂದ ನನಗೆ ಯಾವುದೆ ಸೂಚನೆ ಬಂದಿಲ್ಲ ಎಂದರು.
ಮುಖ್ಯಮಂತ್ರಿಗಳು ಮತ್ತು ಬಿಜೆಪಿ ರಾಜ್ಯಾಧ್ಯಕ್ಷರು ಪ್ರಭು ಚವ್ಹಾಣ ಒಳ್ಳೆಯ ಕೆಲಸ ಮಾಡಿದ್ದೀರಿ ಅಂತಿದ್ದಾರೆ. ಮಾಧ್ಯಮಗಳಲ್ಲಿ ಮಾತ್ರ ಪ್ರಭು ಚವ್ಹಾಣ ಕೈ ಬಿಡ್ತಾರೆ ಅಂತಿದ್ದಾರೆ. ಹೈಕಮಾಂಡ್, ಸಿಎಂ, ಕೋರ್ ಕಮಿಟಿ ತೆಗೆದುಕೊಳ್ಳೋ ತೀರ್ಮಾನ ಅಂತಿಮ ಎಂದು ಹೇಳಿದರು.
ಇದನ್ನೂ ಓದಿ:2-3 ದಿನದಲ್ಲಿ ಪಟ್ಟಿ ಬರಬಹುದು: ಸಚಿವ ಸ್ಥಾನ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ನೀಡಿದ ಬಿಎಸ್ ವೈ
ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಬೆಂಕಿ ಹಾಕುವ ಕೆಲಸ ಮಾಡುತ್ತಿದ್ದಾರೆ. ನಮ್ಮ ರಾಜ್ಯದ ಒಂಚೂರು ಭಾಗ ಅವರಿಗೆ ಕೊಡುವುದಿಲ್ಲ. ಕರ್ನಾಟಕ ಆರು ಕೋಟಿ ಕನ್ನಡಿಗರ ಸಂಪತ್ತು. ಅಜಿತ್ ಪವಾರ್ ಏನೂ ಮಾಡಲ್ಲ, ಬರೀ ಬೆಂಕಿ ಹಾಕುವ ಕೆಲಸ ಮಾಡುತ್ತಾರೆ ಎಂದರು.
ಮರಾಠಾ ಅಭಿವೃದ್ಧಿ ಪ್ರಾಧಿಕಾರ, ವೀರಶೈವ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ವಿಚಾರಕ್ಕಾಗಿ ಪ್ರತಿಕ್ರಿಯಿಸಿದ ಸಚಿವರು, ಮರಾಠಾ ಅಭಿವೃದ್ಧಿ ಪ್ರಾಧಿಕಾರ ಮಾಡಲು ನಾನೂ ಮನವಿ ಮಾಡಿದ್ದೆ. ಅಭಿವೃದ್ಧಿಗಾಗಿ ಏನೇನು ಬೇಕೋ ಅದನ್ನ ನಮ್ಮ ಸಿಎಂ ಮಾಡ್ತಿದ್ದಾರೆ ಎಂದರು.