Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2004ರಲ್ಲಿ ತಾವು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಸಂದರ್ಭದಲ್ಲಿ ಸಿದ್ದರಾಮಯ್ಯ ಜೆಡಿಎಸ್‌ನಿಂದ ಗೆದ್ದು ಆಯ್ಕೆಯಾದರು. ಆದರೆ ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಸೇರ್ಪಡೆಯಾದರು. ಈ ವೇಳೆ ಪಕ್ಷದ ಹಿರಿಯ ನಾಯಕರ ನಿರ್ಧಾರಕ್ಕೆ ಮನ್ನಣೆ ನೀಡಿ, ಪಕ್ಷದ ಶಿಸ್ತಿನ ಸಿಪಾಯಿಯಂತೆ ಸಿದ್ದರಾಮಯ್ಯ ಪರವಾಗಿ ಕೆಲಸ ಮಾಡಿದೆ.
Related Articles
Advertisement
ಸುಸಂಸ್ಕೃತ ರಾಜಕಾರಣ ಮಾಡುವ ಯಾವುದೇ ಸಿಟ್ಟು ಮಾಡಿಕೊಳ್ಳುವುದು ಬೇಡವೆಂದು ಗೌರವದಿಂದ ನಡೆದುಕೊಂಡಿದ್ದೆ. ಆದರೆ ನಾಮಪತ್ರ ಸಲ್ಲಿಸುವಾಗ ಸೌಜನ್ಯಕ್ಕೂ ಆಹ್ವಾನಿಸಲಿಲ್ಲ, ನಾನಿದ್ದ ಹೋಟೆಲ್‌ನಲ್ಲಿ ಸಭೆ ನಡೆದರೂ ನನ್ನನ್ನು ಕರೆಯಲಿಲ್ಲ. ಇಂತಹ ಯಾವುದೇ ಸಂಭ್ರಮದಲ್ಲಿ ತಮಗೆ ಜಾಗವಿಲ್ಲ ಎಂದ ಮೇಲೆ ಏಕೆ ಇರಬೇಕೆಂದು ನಿರ್ಧರಿಸಿ, ಕಾಂಗ್ರೆಸ್‌ಗೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದರು.
ತಕ್ಕಪಾಠ ಕಲಿಸಬೇಕು: ತಮಗೆ ಸಾರ್ವಜನಿಕವಾಗಿ ಅಪಮಾನ ಮಾಡಿದ್ದಲ್ಲದೆ, ವೀರಶೈವ ಸಮಾಜವನ್ನು ನಿರ್ನಾಮ ಮಾಡಲು ಹೊರಟಿರುವ ಸಿದ್ದರಾಮಯ್ಯ ಅವರಿಗೆ ಈ ಚುನಾವಣೆಯಲ್ಲಿ ತಕ್ಕಪಾಠ ಕಲಿಸುವುದು ಅನಿವಾರ್ಯವಾಗಿದೆ. ತಮ್ಮ ಲಾಭಕ್ಕಾಗಿ ಒಂದು ಸಮುದಾಯವನ್ನು ರಾಜಕೀಯವಾಗಿ ತುಳಿಯುವ ಇಂತಹ ವ್ಯಕ್ತಿಗೆ ಹೊಡೆತ ಬಿದ್ದಾಗ ಗೊತ್ತಾಗಲಿದೆ. ಒಂದು ಸಮುದಾಯಕ್ಕೆ ನಾಲ್ಕು ಟಿಕೆಟ್ ಕೊಡುವ ಇವರು,
ಮತ್ತೂಂದು ಸಮಾಜಕ್ಕೆ ಒಂದಾದರೂ ಕೊಡಲಿಲ್ಲ. ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎನ್ನುವ ಇವರ ಮಾತು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತೆ. ಇವರ ನೈಜತೆಯನ್ನು ಸಮಾಜದ ಮುಂದಿಡಲು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇನೆ. ಬೇರೆ ಪಕ್ಷದ ಆಹ್ವಾನವಿದ್ದರೂ ಯಾವುದೇ ಪಕ್ಷದಲ್ಲಿ ಗುರುತಿಸಿಕೊಳ್ಳದೆ, ಇವರನ್ನು ಎದುರಿಸುವ ಪ್ರಬಲ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತೇನೆ ಎಂದರು.
ಪೆಟ್ಟು ಬಿದ್ದಾಗ್ಲೆ ಗೊತ್ತಾಗೋದು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ 257 ಮತಗಳ ಅಂತರದಿಂದ ಗೆದ್ದಾಗ ನನ್ನ ಕೊಡುಗೆ ಇತ್ತು. ನಂತರ ಈ ಜಾತಿರಾಜಕಾರಣದ ಸಹವಾಸಬೇಡ ಎಂದು ವರುಣಾಕ್ಕೆ ಹೋದರು. ಈಗ ಮಗನಿಗೆ ಅನುಕೂಲ ಮಾಡಿಕೊಡಲು ಮತ್ತೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಂದು ಸ್ಪರ್ಧೆ ಮಾಡಿದ್ದಾರೆ. ಈ ರೀತಿಯ ಕುತಂತ್ರ, ಸಮಾಜ ಒಡೆಯುವ ಇಂತಹ ಮನಸ್ಸಿನ ವ್ಯಕ್ತಿಗಳಿಗೆ, ಹೊಡೆತ ಬಿದ್ದಾಗಲೇ ಪೆಟ್ಟು ಗೊತ್ತಾಗಲಿದೆ. ಇದಕ್ಕಾಗಿ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಪಾಠ ಕಲಿಸಬೇಕಿದೆ ಎಂದರು.
ಜಿ.ಟಿ.ದೇವೇಗೌಡರಿಗೆ ಬೆಂಬಲ: ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗೆ ಪಾಠ ಕಲಿಸುವ ಸಲುವಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಹೀಗಾಗಿ ವರುಣಾ ಹಾಗೂ ಚಾಮುಂಡೇಶ್ವರಿಯಲ್ಲಿ ಸೂಕ್ತ ಅಭ್ಯರ್ಥಿಗಳಿಗೆ ಬೆಂಬಲ ನೀಡಲಿದ್ದು, ಅದರಂತೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡರಿಗೆ ಬೆಂಬಲ ನೀಡುತ್ತೇನೆ. ಆದರೆ ಇದಕ್ಕಾಗಿ ಯಾವುದೇ ಪಕ್ಷದ ವೇದಿಕೆಯನ್ನು ಬಳಸಿಕೊಳ್ಳದೆ, ಪ್ರತ್ಯೇಕ ವೇದಿಕೆಯಲ್ಲಿ ಸಿದ್ದರಾಮಯ್ಯ ಅವರಿಂದ ವೀರಶೈವ ಸಮಾಜಕ್ಕೆ ಏನು ಅನ್ಯಾಯವಾಗಿದೆ,
ನನ್ನನ್ನು ಯಾವ ರೀತಿ ತುಳಿದರು ಎಂಬುದನ್ನು ಜನರ ಮುಂದಿಡುತ್ತೇನೆ. ಇನ್ನು ವರುಣಾ ಕ್ಷೇತ್ರದಲ್ಲಿ ಇನ್ನೂ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಬಾಕಿ ಇದೆ, ಹೀಗಾಗಿ ಸೂಕ್ತ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಪರವಾಗಿ ನಿಲ್ಲುವ ಕುರಿತ ಪ್ರಶ್ನೆಯೊಂದಕ್ಕೆ ಪರೋಕ್ಷವಾಗಿ ಉತ್ತರಿಸಿದರು.
ವರುಣ ನಿಮ್ಮ ಆಸ್ತಿಯೇನು, ನಿಮ್ಮ ಮಗನಿಗೆ ಅನುಕೂಲ ಮಾಡಿಕೊಡಲು ಯಾರನ್ನು ಮೂಲೆಗುಂಪು ಮಾಡಿದ್ದೀರಾ ಎಂದು ಹತ್ತು ವರ್ಷದ ಹುಡುಗನನ್ನು ಕೇಳಿದರು ಹೇಳುತ್ತಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಕೆಲಸ ಮಾಡಿದರೆ, ವರುಣಾದಲ್ಲಿ ಅವರ ಪುತ್ರನ ವಿರುದ್ಧ ಕೆಲಸ ಮಾಡಬೇಕಲ್ಲವೇ? ಎರಡೂ ಒಂದೇ ಬಳ್ಳಿಯಂತೆ.-ರೇವಣ್ಣ ಸಿದ್ದಯ್ಯ, ನಿವೃತ್ತ ಪೊಲೀಸ್ ಅಧಿಕಾರಿ.