ಬೆಂಗಳೂರು: ಅಧಿಕಾರದಲ್ಲಿ ಎಷ್ಟು ದಿನ ಇರುತ್ತೇವೆ ಎನ್ನುವುದಕ್ಕಿಂತ ಅಧಿಕಾರದಲ್ಲಿದ್ದಾಗ ಯಾವ ರೀತಿ ಕೆಲಸ ಮಾಡಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ ಎಂದು ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡಿಗರ ಸಂಘದಿಂದ ಭಾನುವಾರ ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಜ್ರಮಹೋತ್ಸವ ಹಾಗೂ ಕರಾವಳಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರಾವಳಿ ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಬ್ರಹ್ಮಾವರ ಕ್ಷೇತ್ರದ ಕೊನೆಯ ಶಾಸಕ ನಾನಾಗಿದ್ದೆ. ಅಲ್ಲಿಗೆ ನನ್ನ ಒಂದು ಭಾಗದ ರಾಜಕೀಯ ಜೀವನ ಪೂರ್ಣವಾಗಿತ್ತು ಎಂಬುದನ್ನು ಅನೇಕ ಬಾರಿ ಹೇಳಿಕೊಂಡಿದ್ದೆ. ಆದರೆ, ಅಧಿಕಾರದಲ್ಲಿದ್ದ ದಿನಗಳಲ್ಲಿ ಮಾಡಿದ ಕೆಲಸ, ಜನ ಸಾಮಾನ್ಯ ರೊಂದಿಗೆ ಇಟ್ಟುಕೊಂಡಿರುವ ಸಂಪರ್ಕ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ. ಚುನಾವಣೆಯಲ್ಲಿ ಸೋತರು ಚಲಾವಣೆಯಲ್ಲಿ ಇದ್ದೇನೆ ಎಂಬುದನ್ನು ಈ ಪ್ರಶಸ್ತಿ ಆಯ್ಕೆಯಿಂದ ಸಾಬೀತಾಗಿದೆ ಎಂದರು.
ಹಿಂದಿನ ರಾಜಕಾರಣಕ್ಕೂ ಇಂದಿನ ರಾಜಕಾರಣಕ್ಕೂ ಬಹಳ ವ್ಯತ್ಯಾಸ ಇದೆ. ಇಂದಿನ ರಾಜಕಾರಣದಲ್ಲಿ ಸ್ಥಾನ ಗಳಿಸುವುದೇ ಮುಖ್ಯವಾಗಿದೆ. ಜನ ಕೆಲಸ ಮಾಡಲಿ ಎಂದು ಶಾಸಕನ್ನು ಆಯ್ಕೆ ಮಾಡುತ್ತಾರೆ. ಮಂತ್ರಿಗಿರಿಗಾಗಿ ಶಾಸಕ ತಪ್ಪು ಮಾಡುವುದು ಸರಿಯಲ್ಲ. ಜನಸೇವೆ ಮುಖ್ಯವಾಗಿರಬೇಕು ಎಂದರು.
ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲರು ರಾಜಕೀಯವಾಗಿ ಕೆಲಸ ಮಾಡಲು ಮುಕ್ತ ಅವಕಾಶ ನೀಡಿದ್ದರು. ನೀರಿನ ಸಮಸ್ಯೆ ಇಂದು ಸಾಕಷ್ಟು ದೊಡ್ಡಮಟ್ಟದಲ್ಲಿದೆ. ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ. ಕುಡಿಯುವ ನೀರಿಗಾಗಿ ಚೆಕ್‌ಡ್ಯಾಂಗಳ ನಿರ್ಮಾಣ ಅಗತ್ಯವಾಗಿ ಆಗಬೇಕಿದೆ.
ಅಧಿಕಾರದಲ್ಲಿ ಇದ್ದಾಗ ಮಾಡಿರುವ ಅಭಿವೃದ್ಧಿ ಕಾರ್ಯ ಇನ್ನು ನೆನಪಿದೆ. ಚುನಾವಣೆಯಲ್ಲಿ ಸೋತರೂ, ರಾಜಕಾರಣದಲ್ಲಿದ್ದಾ ಮಾಡಿದ ಅಭಿವೃದ್ಧಿ ಕಾರ್ಯ ತೃಪ್ತಿ ನೀಡುತ್ತಿದೆ ಎಂದು ಹೇಳಿದರು. ಸಂಗೀತ ಸಾಧಕ ಡಾ.ವಿದ್ಯಾಭೂಷಣ ತೀರ್ಥರು, ಸಮಾಜ ಸೇವಕ ಕೆ.ಮೋಹನದೇವ ಅಳ್ವ ಹಾಗೂ ಉದ್ಯಮಿ ಎಸ್ .ಟಿ.ಆರ್.ಮಡಿ ಅವರಿಗೆ ಕರಾವಳಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಬಾ. ರಾಮಚಂದ್ರ ಉಪಾಧ್ಯ, ಉಪಾಧ್ಯಕ್ಷರಾದ ಪಿ.ಎಸ್. ಬಾಗಿಲ್ತಾಯ, ಡಾ.ಕೆ.ಸಿ.ಬಲ್ಲಾಳ್, ಪ್ರಧಾನ ಕಾರ್ಯದರ್ಶಿ ವೈ. ಜಯಂತ್ ರಾವ್ ಉಪಸ್ಥಿತರಿದ್ದರು.