Advertisement

ನೀತಿ ಸಂಹಿತೆ: ವಸ್ತು, ನಗದು ಒಯ್ಯುವಾಗ ದಾಖಲೆ ಅಗತ್ಯ

09:25 AM Mar 31, 2018 | Team Udayavani |

ಮಂಗಳೂರು: ಚುನಾವಣಾ ದಿನಾಂಕ ಘೋಷಣೆಯಾದ ಕ್ಷಣದಿಂದಲೇ ನೀತಿ ಸಂಹಿತೆಯೂ ಜಾರಿಯಾಗಿದೆ. ಚುನಾವಣೆ ಜಾರಿಗೊಂಡ ಬಳಿಕ ಕಾರ್ಯಾಂಗವು ಸಂಪೂರ್ಣವಾಗಿ ಚುನಾವಣಾ ಆಯೋಗದ ಅಧೀನಕ್ಕೆ ಒಳಪಟ್ಟು ಕಾರ್ಯನಿರ್ವಹಿಸುತ್ತದೆ. ಅದರ ಮೂಲಕ ಚುನಾವಣಾ ಆಯೋಗವು ಎಲ್ಲ ರೀತಿಯ ಆಗುಹೋಗು, ವ್ಯವಹಾರ, ಚಲನವಲನಗಳ ಮೇಲೆ ಹದ್ದಿನ ಕಣ್ಣಿರಿಸಿ ಚುನಾವಣಾ ಅಕ್ರಮಗಳನ್ನು ತಡೆಯಲು ಶ್ರಮಿಸುತ್ತದೆ. ಈ ಹಿನ್ನೆಲೆಯಲ್ಲಿ ಸಂಚಾರದ ವೇಳೆ ಜನಸಾಮಾನ್ಯರು ಕೆಲವು ಎಚ್ಚರಿಕೆಗಳನ್ನು ವಹಿಸುವುದರೊಂದಿಗೆ ತಾವು ಕೊಂಡೊಯ್ಯುವ ವಸ್ತುಗಳ ದಾಖಲೆಗಳನ್ನು ಜತೆಗಿರಿಸಿಕೊಂಡರೆ ಅನಗತ್ಯ ಮುಜುಗರ, ಇಕ್ಕಟ್ಟುಗಳಿಂದ ಪಾರಾಗಬಹುದು.

Advertisement

ಈಗಾಗಲೇ ಜಿಲ್ಲೆಯಲ್ಲಿ  24×7 ಚೆಕ್‌ಪೋಸ್ಟ್‌ ಗಳು ಅಲ್ಲಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪೊಲೀಸರು ವಾಹನಗಳ ತಪಾಸಣೆಯಲ್ಲಿ ನಿರತರಾಗಿದ್ದಾರೆ. ಚುನಾವಣೆ ಹೊತ್ತಿನಲ್ಲಿ ಯಾವುದೇ ಅಕ್ರಮ ವಹಿವಾಟುಗಳು ಜರಗದೆ, ಅದು ಸುಗಮವಾಗಬೇಕು ಎಂಬುದಕ್ಕಾಗಿ ವಾಹನ ತಪಾಸಣೆ ನಡೆಯುತ್ತಿದೆ. ಹೀಗಾಗಿ ಜನರು ಬೆಲೆಬಾಳುವ ವಸ್ತುಗಳು, ನಗದನ್ನು ಕೊಂಡೊಯ್ಯುವಾಗ ಸೂಕ್ತ ದಾಖಲೆಗಳನ್ನು ಇರಿಸಿಕೊಳ್ಳುವುದು ಅವಶ್ಯವಾಗಿದೆ.

ಸಾರ್ವಜನಿಕರು 50,000 ರೂ.ಗಳಿಗಿಂತ ಮೇಲ್ಪಟ್ಟು ನಗದು ಒಯ್ಯುವಾಗ ಸೂಕ್ತ ದಾಖಲೆಗಳನ್ನು ಇರಿಸಿಕೊಳ್ಳಬೇಕು. ಎಟಿಎಂ ಅಥವಾ ಬ್ಯಾಂಕ್‌ನಿಂದ 50,000 ರೂ.ಗಳಿಗಿಂತ ಹೆಚ್ಚು ಮೊತ್ತವನ್ನು ಡ್ರಾ ಮಾಡಿದರೆ ರಶೀದಿಯನ್ನು ತಪ್ಪದೇ ಜತೆಗಿರಿಸಿಕೊಳ್ಳಬೇಕು. ಇತರ ಯಾವುದೇ ಮೂಲಗಳಿಂದ ಈ ಕನಿಷ್ಠ ಮಿತಿಗಿಂತ ಹೆಚ್ಚು ಹಣ ಪಡೆದುಕೊಂಡರೂ ಚೆಕ್‌ ಪೋಸ್ಟ್‌ನಲ್ಲಿ ತಪಾಸಣೆಗೊಳಪಡಿಸಿದಾಗ ಸೂಕ್ತ ದಾಖಲೆ ಹಾಜರುಪಡಿಸಬೇಕು. ನೀತಿ ಸಂಹಿತೆ ಜಾರಿಯಲ್ಲಿರುವಾಗ ನಗದು ಕೊಂಡೊಯ್ಯುವುದಕ್ಕೆ ಯಾವುದೇ ಮಿತಿ ಇಲ್ಲದಿದ್ದರೂ 10 ಲಕ್ಷ ರೂ. ಗಳಿಗಿಂತ ಹೆಚ್ಚಿನ ಮೊತ್ತವನ್ನು ದಾಖಲೆ ಸಹಿತ ಕೊಂಡೊಯ್ದರೂ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗುತ್ತದೆ. ಆದರೆ ಸೂಕ್ತ ದಾಖಲೆಗಳಿದ್ದರೆ ಯಾವುದೇ ಸಮಸ್ಯೆ ಉಂಟಾಗದು.

ಚಿನ್ನಾಭರಣಕ್ಕೂ ಅನ್ವಯ
ಕೇವಲ ಹಣ ಮಾತ್ರವಲ್ಲ; ಚಿನ್ನಾಭರಣ ಅಥವಾ ಇತರ ಬೆಲೆಬಾಳುವ ವಸ್ತುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೊಂಡೊಯ್ಯುವಾಗಲೂ ಅದಕ್ಕೂ ಸೂಕ್ತ ದಾಖಲೆ ಇರಿಸಿಕೊಂಡು ತಪಾಸಣೆ ನಿರತರು ಕೇಳಿದಾಗ ಹಾಜರುಪಡಿಸಬೇಕಾಗುತ್ತದೆ. ಇದು ಶುಭ ಸಮಾರಂಭಗಳ ಋತು; ಮದುವೆ ಬಟ್ಟೆ, ಚಿನ್ನಾಭರಣ ಖರೀದಿ ಸಾಮಾನ್ಯ. ಚಿನ್ನಾಭರಣ, ವಸ್ತ್ರ ಅಥವಾ ಇತರ ಗೃಹಪಯೋಗಿ ವಸ್ತುಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿ ಒಂದೆಡೆಯಿಂದ ಇತರೆಡೆಗೆ ಕೊಂಡೊಯ್ಯುವಾಗ ಅದರ ಬಿಲ್‌ ಪಾವತಿ ರಶೀದಿಯನ್ನು ಜತೆಗಿರಿಸಿ ಕೊಳ್ಳುವುದು ಒಳ್ಳೆಯದು. ಆದರೆ ಇವುಗಳ ಮೇಲೆ ಯಾವುದೇ ಮಿತಿಗಳನ್ನು ಹಾಕಲಾಗಿಲ್ಲ. ‘ಶುಭ ಸಮಾರಂಭಗಳಿಗೆ ತೆರಳುವಾಗ ಹಳೆಯ ಚಿನ್ನಾಭರಣಗಳನ್ನು ಬ್ಯಾಗ್‌ನಲ್ಲೋ ಪರ್ಸ್‌ನಲ್ಲೋ ಕೊಂಡೊಯ್ಯುವ ಬದಲು ಧರಿಸಿಕೊಂಡು ತೆರಳಿದರೆ ಉತ್ತಮ. ಇದು ಯಾವುದೇ ಅನುಮಾನಗಳಿಗೆ ಎಡೆಮಾಡಿಕೊಡುವುದಿಲ್ಲ’ ಎಂದು ಜಿಪಂ ಸಿಇಒ ಡಾ| ಎಂ.ಆರ್‌. ರವಿ ತಿಳಿಸಿದ್ದಾರೆ.

ದಾಖಲೆ ಇಲ್ಲದಿದ್ದರೆ ವಶಕ್ಕೆ
ಸೂಕ್ತ ದಾಖಲೆ ಇಲ್ಲದೇ ಮಿತಿಗಿಂತ ಹೆಚ್ಚಿನ ನಗದು ಅಥವಾ ಇತರ ವಸ್ತುಗಳನ್ನು ಕೊಂಡೊಯ್ದಲ್ಲಿ ಕಾನೂನುಬಾಹಿರ ನಗದು ವರ್ಗಾವಣೆ ಪ್ರಕರಣ ದಾಖಲಾಗುತ್ತದೆ. ವಾಹನದಲ್ಲಿ ಯಾವುದೇ ಪಕ್ಷದ ಚಿಹ್ನೆ, ಧ್ವಜ ಅಥವಾ ಸಣ್ಣ ಕುರುಹುಗಳಿದ್ದರೂ ಅದನ್ನು ಪಕ್ಷದ ಉದ್ದೇಶಕ್ಕೆಂದೇ ಗುರುತಿಸುವ ಸಾಧ್ಯತೆಗಳೂ ಇವೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ದಾಖಲೆಗಳನ್ನು ಇಟ್ಟುಕೊಂಡೇ ತೆರಳುವುದು ಉತ್ತಮವಾಗಿದೆ. ಖಾಸಗಿ ಶುಭಸಮಾರಂಭಗಳ ಮೇಲೆ ನೀತಿ ಸಂಹಿತೆ ಪರಿಣಾಮ ಬೀರುವುದಿಲ್ಲ. ಆದರೆ ಸಂಬಂಧಪಟ್ಟವರು NOC (ನೋ ಆಬ್ಜೆಕ್ಷನ್‌ ಸರ್ಟಿಫಿಕೇಟ್‌) ಅನುಮತಿ ಪತ್ರವನ್ನು ಜಿಲ್ಲಾಡಳಿತದ ಕಡೆಯಿಂದ ಪಡೆದುಕೊಳ್ಳುವುದು ಉತ್ತಮ. ಒಂದು ವೇಳೆ ಸಮಾರಂಭದ ಏರ್ಪಾಟು, ಒದಗಿಸಲಾದ ಊಟ ಉಪಾಹಾರ, ಕೊಡುಗೆ ಇತ್ಯಾದಿಗಳಲ್ಲಿ ರಾಜಕೀಯ ಮುಖಂಡರ ಪಾತ್ರದ ಬಗ್ಗೆ ದೂರು ಬಂದಲ್ಲಿ ಕ್ರಮತೆಗೆದುಕೊಳ್ಳಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Advertisement

ದಾಖಲೆ ಇರಲಿ
ಜಿಲ್ಲೆಯ ಅಲ್ಲಲ್ಲಿ ಚೆಕ್‌ಪೋಸ್ಟ್‌ ಗಳು ಕಾರ್ಯನಿರ್ವಹಿಸುತ್ತಿವೆ. ಹಣ ಅಥವಾ ಯಾವುದೇ ವಸ್ತುಗಳನ್ನು ಕೊಂಡೊಯ್ಯುವಾಗ ಸರಿಯಾದ ದಾಖಲೆ ಜತೆಗಿರಲಿ. ಯಾವುದೇ ಅಕ್ರಮ ವಹಿವಾಟು ಘಟಿಸದಿರಲು ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸಲಾಗುತ್ತದೆ.
-ವೈಶಾಲಿ, ಅಪರ ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ

Advertisement

Udayavani is now on Telegram. Click here to join our channel and stay updated with the latest news.

Next