Advertisement

ಮಹಿಳೆ ಆತ್ಮರಕ್ಷಣೆ ಕಲೆ ಕಲಿಯುವುದು ಅನಿವಾರ್ಯ: ಡಿಸಿ

06:00 PM Feb 09, 2022 | Shwetha M |

ವಿಜಯಪುರ: ಪ್ರಸ್ತುತ ಸಂದರ್ಭದಲ್ಲಿ ಮಹಿಳೆ ಆತ್ಮರಕ್ಷಣೆ ಕಲೆ ಕಲಿಯುವುದು ಅನಿವಾರ್ಯ ಹಾಗೂ ಅಗತ್ಯವೂ ಹೌದು. ಇದರಿಂದ ಹೆಣ್ಣು ಮಕ್ಕಳಲ್ಲಿ ಆತ್ಮಸ್ಥೈರ್ಯ ಹಾಗೂ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಹೇಳಿದರು.

Advertisement

ಜಿಲ್ಲೆಯ ಕಾರಜೋಳದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಓಬವ್ವ ಆತ್ಮರಕ್ಷಣಾ ಕಲೆಯ ಕೌಶಲ್ಯಗಳ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನುರಿತ ತರಬೇತುದಾರರಿಂದ ಶಾಲೆಗಳಲ್ಲಿ ಆತ್ಮರಕ್ಷಣೆ ಕಲೆಯ ಕೌಶಲ್ಯ ತರಬೇತಿ ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದರು.

ಸಮಾಜದಲ್ಲಿ ಎಲ್ಲ ಹೆಣ್ಣು ಮಕ್ಕಳು ಇದರ ಸದುಪಯೋಗ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಓದಿನೊಂದಿಗೆ ಇಂತಹ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳಬೇಕು. ಇಂತಹ ಕಲೆಗಳನ್ನು ಕಲಿತರೆ ಜೀವನದ ಕೆಲವು ಕೆಟ್ಟ ಸನ್ನಿವೇಶಗಳನ್ನು ಹೆಣ್ಣುಮಕ್ಕಳು ಸುಲಭವಾಗಿ ಎದುರಿಸಬಹುದು ಎಂದರು. ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಇಂತಹ ಅಭ್ಯಾಸಗಳನ್ನು ರೂಢಿಸಿಕೊಂಡು, ಕಾಲೇಜು ಹಂತದಲ್ಲೂ ಮುಂದುವರಿಸಿಕೊಂಡು ಹೋಗಬೇಕು. ಟಿವಿ, ಮೊಬೈಲ್‌ ಬಳಕೆಗಿಂತ ಇಂತಹ ಕಲೆಗಳನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಮನಗೌಡ ಕನ್ನೊಳ್ಳಿ ಮಾತನಾಡಿದರು. ಇದೇ ಸಂದರ್ಭದಲ್ಲಿ ತರಬೇತುದಾರ ವಿಜಯಕುಮಾರ ರಾಠೊಡ ನೇತೃತ್ವದಲ್ಲಿ ವಿದ್ಯಾರ್ಥಿನಿಯರಾದ ಸಿಫಾಲಿ ರಾಠೊಡ, ಶ್ರೀನಿಧಿ ಅವರು ಆತ್ಮರಕ್ಷಣೆ ಕಲೆ ಪ್ರದರ್ಶಿಸಿದರು. ಪ್ರಾಂಶುಪಾಲ ಸತೀಶ ಸಜ್ಜನ, ಶಿಕ್ಷಕಿಯರಾದ ಹೀನಾ ಕೌಸರ ಕಡಕೋಳ, ದಾನಮ್ಮ ಪಾಟೀಲ, ಸಂದಲಬಿ ಮುಜಾವರ, ಪ್ರಶಾಂತ ಸಿಂಧೆ, ವಾರ್ಡನ್‌ ಕವಿತಾ ಹೂಗಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next