ಹುಬ್ಬಳ್ಳಿ: ಯದ್ಧ ಭೂಮಿಯಲ್ಲಿ ಯಾರು ಇದ್ದರು ಎಂಬುದಲ್ಲ, ಕೃಷ್ಣ-ಅರ್ಜುನ ಇಬ್ಬರೇ ಇದ್ದರು ಎಂಬುದೇ ಇತಿಹಾಸ. ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ನಮ್ಮ ತಂಡವನ್ನು ಒಡೆಯುವ ಯತ್ನ ಮಾಡಬಹುದೇ ವಿನಃ ನನ್ನ ನಿಲುವು ಬದಲಿಸುವುದು ಅಸಾಧ್ಯ ಎಂದು ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ನಾತನಾಡಿದ ಅವರು, ಧಾರವಾಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬದಲಿಸಬೇಕೆಂಬ ನಮ್ಮ ಧ್ವನಿಗೆ ಬಿಜೆಪಿ ಹೈಕಮಾಂಡ್ ಸ್ಪಂದಿಸಿಲ್ಲ. ಕೇವಲ ವೀರಶೈವ ಲಿಂಗಾಯತ ಸಮಾಜಕ್ಕೆ ಮಾತ್ರವಲ್ಲ ಬಹುಸಂಖ್ಯಾತ ಹಲವು ಸಮಾಜದವರಿಗೆ ಬಿಜೆಪಿ ಟಿಕೆಟ್ ತಪ್ಪಿದೆ, ಸ್ವಲ್ಪ ಜನಸಂಖ್ಯೆಯ ಸಮಾಜದವರಿಗೆ ಟಿಕೆಟ್ ನೀಡಲಾಗಿದೆ ರಾಷ್ಟ್ರೀಯ ಪಕ್ಷಕ್ಕೆ ಇದು ಒಳ್ಳೆಯದಲ್ಲ. ಈಶ್ವರಪ್ಪ ಅವರಿಗೂ ಅನ್ಯಾಯ ಮಾಡಲಾಗಿದೆ. ಧಾರವಾಡ ಕ್ಷೇತ್ರದಲ್ಲಿ ಬಹುಸಂಖ್ಯಾತ ಲಿಂಗಾಯತರಿಗೆ ಅವಕಾಶ ನೀಡದೆ ಕಡೆಗಣಿಸುವುದು ಸರಿಯಲ್ಲ ಎಂದರು.
ರಾಜಕೀಯಕ್ಕೆ ಬರಬೇಕು, ಚುನಾವಣೆಗೆ ಸ್ಪರ್ಧಿಸಬೇಕೆಂಬ ಬಯಕೆ ಜನರದ್ದಾಗಿದೆ. ಸಮಾಜ, ಭಕ್ತರ ಒತ್ತಾಸೆಯಿಂದ ನಾನು ಧ್ವನಿ ಎತ್ತಿದ್ದೇನೆಯೇ ವಿನಃ ನಾನಾಗಿಯೇ ರಾಜಕೀಯಕ್ಕೆ ಇಳಿಯಬೇಕೆಂದು ನಿರ್ಧರಿಸಿಲ್ಲ ಎಂದರು.
ಮಠಾಧೀಶರು ರಾಜಕೀಯಕ್ಕೆ ಬರಬಾರದು ಎಂಬುದು ಕೇಂದ್ರ ಸಚಿವ ಜೋಶಿ ಬೆಂಬಲಿಗರ ಅನಿಸಿಕೆಯಷ್ಟೇ. ಆದರೆ ಅದೇ ಜೋಶಿಯವರು ತಮ್ಮ ಪಕ್ಷದ ಕಚೇರಿ ಉದ್ಘಾಟನೆಗೆ 120 ಮಠಾಧೀಶರನ್ನು ಕರೆದ್ಯೊದಿದ್ದು ಯಾಕೆ? ಮಠಾಧೀಶರನ್ನು ಚುನಾವಣೆ ವೇಳೆ ಪಕ್ಷದ ಕಚೇರಿ ಉದ್ಘಾಟನೆಗೆ ಬಳಕೆ ಮಾಡಿಕೊಂಡಿದ್ದು ರಾಜ್ಯದಲ್ಲಿ ಇದೇ ಮೊದಲು. ಉತ್ತರ ಭಾರತದಲ್ಲಿ ಮಠಾಧೀಶರು ಜನಪ್ರತಿನಿಧಿಯಾಗಿಲ್ಲವೇ, ದಕ್ಷಿಣ ಭಾರತದಲ್ಲಿ ಮಠಾಧೀಶರು ರಾಜಕೀಯಕ್ಕೆ ಬಂದರೆ ತಪ್ಪೇನು ಎಂದು ಪ್ರಶ್ನಿಸಿದರು.
ಮಠಾಧೀಶರ ಮೇಲೆ ಒತ್ತಡ ತಂದು ಹೇಳಿಕೆ ತಿರುಚುವ ಯತ್ನ ಮಾಡಲಾಗಿದೆ. ವೀರಶೈವ ಲಿಂಗಾಯತ ಒಂದಿಬ್ಬರು ಮಠಾಧೀಶರು, ಸಮಾಜದವರನ್ನು ಬಳಸಿಕೊಂಡು ನನ್ನ ವಿರುದ್ಧ ಹೇಳಿಕೆ ಕೊಡಿಸಲಾಗಿದೆ. ನಿಮಗೆ ಸಮಾಜ ಹಿತ ಮುಖ್ಯವೋ ಅಥವಾ ಕೇಂದ್ರ ಸಚಿವ ಜೋಶಿಯವರ ಹಿತ ಮುಖ್ಯವೋ ಎಂದು ಹೇಳಿಕೆ ನೀಡಿದವರಿಗೆ ಕೇಳುವೆ. ಎಲ್ಲಾ ಪಕ್ಷದವರುವ ನನ್ನನ್ನು ಬೆಂಬಲಿಸಿದ್ದಾರೆ, ಶೀಘ್ರದಲ್ಲೇ ನನ್ನ ನಿಲುವು ಬೆಂಗಳೂರಿನಲ್ಲಿ ಬಹಿರಂಗ ಪಡಿಸುವೆ ಎಂದು ಸ್ವಾಮೀಜಿ ಹೇಳಿದರು.