ಬೆಂಗಳೂರು: 15 ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿರುವುದರಿಂದ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ಗೆ ದೊಡ್ಡ ಸವಾಲು ಎದುರಾಗಿದೆ. ಸರ್ಕಾರ ಪತನವಾದಾಗಿನಿಂದಲೂ ಉಪ ಚುನಾವಣೆಗೆ ಒಂದಿಲ್ಲೊಂದು ರೀತಿಯಲ್ಲಿ ಸಿದ್ಧತೆ ಆರಂಭಿಸಿದ್ದ ಕಾಂಗ್ರೆಸ್‌ಗೆ, ಈ ಉಪ ಚುನಾವಣೆ ನಿರೀಕ್ಷಿತವಾಗಿತ್ತು.
ಬಿಜೆಪಿಯು ಸರ್ಕಾರವನ್ನು ಉಳಿಸಿಕೊಳ್ಳಲು 17 ಕ್ಷೇತ್ರಗಳಲ್ಲಿ ಕನಿಷ್ಠ 7 ಕ್ಷೇತ್ರಗಳಲ್ಲಾದರೂ ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ. ಕಾಂಗ್ರೆಸ್‌ಗೆ ಕೈ ತಪ್ಪಿರುವ ಕ್ಷೇತ್ರ ಗಳನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. 17 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ 14 ಕ್ಷೇತ್ರಗಳ ಶಾಸಕರು ರಾಜೀನಾಮೆ ನೀಡಿ ಅನರ್ಹರಾಗಿರುವುದರಿಂದ ಅವುಗಳಲ್ಲಿ ಕನಿಷ್ಠ 8 ಕ್ಷೇತ್ರ ಗೆಲ್ಲಲು ಕಾಂಗ್ರೆಸ್ ಗುರಿ ಇಟ್ಟುಕೊಂಡಿದೆ.
ಆ ಮೂಲಕ ಸ್ಪಷ್ಟ ಬಹುಮತ ಇಲ್ಲದಿದ್ದರೂ ಸರ್ಕಾರ ನಡೆಸುತ್ತಿರುವ ಬಿಜೆಪಿಗೆ ಶಾಕ್ ನೀಡಿ, ರಾಜ್ಯದಲ್ಲಿ ಮತ್ತೆ ಹೊಸ ರಾಜಕೀಯ ಲೆಕ್ಕಾಚಾರಕ್ಕೆ ನಾಂದಿ ಹಾಡಲು ತಂತ್ರ ಹೆಣೆಯುತ್ತಿದೆ. ಕಾಂಗ್ರೆಸ್ ನಾಯಕರು 17 ಕ್ಷೇತ್ರಗಳ ಜಿಲ್ಲಾ ಮುಖಂಡರು, ಸ್ಥಳೀಯ ಕ್ಷೇತ್ರಗಳ ನಾಯಕರ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಅನರ್ಹಗೊಂಡ ಶಾಸಕರಿಗೆ ಪ್ರಬಲ ಸ್ಪರ್ಧೆ ನೀಡುವ ಅಭ್ಯರ್ಥಿಗಳ ಹುಡುಕಾಟಕ್ಕೆ ಈಗಾಗಲೇ ಸೂಚಿಸಿದ್ದು, ಎಲ್ಲ ಕ್ಷೇತ್ರಗಳಿಗೂ ಸ್ಥಳೀಯ ಮುಖಂಡರ ಅಭಿಪ್ರಾಯ ಪಡೆದು ವರದಿ ನೀಡುವಂತೆ ಸೂಚಿಸಲಾಗಿದೆ.
ಮೈತ್ರಿಗೆ ತಿಲಾಂಜಲಿ: ಮೈತ್ರಿ ಸರ್ಕಾರ ಪತನಗೊಂಡ ನಂತರ ಕಾಂಗ್ರೆಸ್‌ನಲ್ಲಿ ಬಹುತೇಕ ನಾಯಕರು ಜೆಡಿಎಸ್ ಜತೆಗಿನ ಮೈತ್ರಿ ಮುರಿದುಕೊಳ್ಳುವಂತೆ ಒತ್ತಡ ಹೇರಿದ್ದರು. ಅದೇ ರೀತಿ ಜೆಡಿಎಸ್, ಶಾಸಕರು ಅನರ್ಹಗೊಂಡಿರುವ ಕ್ಷೇತ್ರಗಳೂ ಸೇರಿ 17 ಕ್ಷೇತ್ರಗಳಿಗೂ ಚುನಾವಣೆ ಸಿದ್ಧತೆ ನಡೆಸುತ್ತಿದೆ.
ಅಲ್ಲದೆ ರಾಜ್ಯ ನಾಯಕರು ಈ ವಿಷಯವನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದು, ಬಹುತೇಕ ಏಕಾಂಗಿಯಾಗಿ ಸ್ಪರ್ಧಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಜೆಡಿಎಸ್ ಕೂಡ ಏಕಾಂಗಿಯಾಗಿ ಸ್ಪರ್ಧಿಸಲು ಸಿದ್ಧವಾಗಿರುವುದರಿಂದ ಕೆಲವು ಕ್ಷೇತ್ರಗಳಲ್ಲಿ ಆಂತರಿಕ ಒಪ್ಪಂದ ಮಾಡಿಕೊಂಡು ಬಿಜೆಪಿಯನ್ನು ಸೋಲಿಸುವ ಯತ್ನ ಮಾಡಬಹುದಾದರೂ ಮೈತ್ರಿ ಮುಂದುವರಿಸಲು ರಾಜ್ಯ ನಾಯಕರಿಗೆ ಇಷ್ಟವಿಲ್ಲ ಎಂದು ಹೇಳಲಾಗಿದೆ.
ಸಮಾವೇಶ ಆಯೋಜನೆ: ಕಾಂಗ್ರೆಸ್ ಈಗಾಗಲೇ ಉಪ ಚುನಾವಣೆಗೆ ರಂಗ ಪ್ರವೇಶ ಮಾಡಿದ್ದು, ಅನರ್ಹಗೊಂಡಿರುವ ಶಾಸಕರ ಕ್ಷೇತ್ರಗಳಲ್ಲಿ ಪಕ್ಷದ ಸಮಾವೇಶಗಳನ್ನು ಹಮ್ಮಿಕೊಂಡಿದೆ. ಈ ಮೂಲಕ, ಪರೋಕ್ಷವಾಗಿ ಚುನಾವಣಾ ಪ್ರಚಾರವನ್ನೇ ಆರಂಭಿಸಿದೆ.
ಈಗಾಗಲೇ ಶನಿವಾರ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ ಸಮಾವೇಶ ಮಾಡುವ ಮೂಲಕ ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದೆ. ಎಲ್ಲಾ ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಸಮಾವೇಶ ಮಾಡಲು ಸಿದ್ಧತೆ ಮಾಡಿಕೊಂಡಿದ್ದು, ಈಗ ಚುನಾವಣೆ ಘೋಷಣೆ ಆಗಿರುವುದರಿಂದ ಅಧಿಕೃತ ಚುನಾವಣಾ ಪ್ರಚಾರ ಸಮಾವೇಶಗಳನ್ನಾಗಿ ಪರಿವರ್ತಿಸುವ ಸಾಧ್ಯತೆಯಿದೆ.