Advertisement

ಪ್ರತಿಯೊಬ್ಬರು ಜಲಮೂಲ ಸಂರಕ್ಷಿಸುವುದು ಅನಿವಾರ್ಯ

09:40 PM Jul 31, 2019 | Team Udayavani |

ದೊಡ್ಡಬಳ್ಳಾಪುರ: ಸರ್ಕಾರವೇ ನೀರಿನ ಬವಣೆ ನೀಗಿಸುತ್ತದೆ ಎಂದು ಕಾದು ಕೂರುವ ಬದಲು ಜಲಮೂಲಗಳನ್ನು ಸಂರಕ್ಷಿಸು ಕೆಲಸ ಪ್ರತಿಯೊಬ್ಬರು ಮಾಡಬೇಕಿದೆ ಎಂದು ಡಬ್ಲೂ ಡಬ್ಲೂಎಫ್‌ ಇಂಡಿಯಾದ ಹಿರಿಯ ಯೋಜನಾಧಿಕಾರಿ ವೈ.ಟಿ.ಲೋಹಿತ್‌ ತಿಳಿಸಿದರು.

Advertisement

ತಾಲೂಕಿನ ಘಾಟಿ ಕ್ಷೇತ್ರದಲ್ಲಿ ನಡೆದ ತಾಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ವಿಚಾರ ಗೋಷ್ಠಿಯಲ್ಲಿ ಮಾತನಾಡಿ, ಜಲಮೂಲಗಳ ರಕ್ಷಣೆ ಇಂದಿನ ಅನಿವಾರ್ಯವಾಗಿದೆ. ಈ ಬಗ್ಗೆ ನಾಗರಿಕರು ಆದ್ಯತೆ ನೀಡಬೇಕಿದೆ. ನೀರು ನಮ್ಮ ಅಧಿಕಾರ ಎಂಬ ಭಾವನೆ ಬಿಟ್ಟು, ನೀರು ನಮ್ಮ ಜವಾಬ್ದಾರಿ ಎಂಬ ಪ್ರಜ್ಞೆ ಬೆಳೆಯಬೇಕಿದೆ ಎಂದರು.

ಜನಪರ ಆಡಳಿತ ದೊರೆತ್ತಿಲ್ಲ: ಶಾಶ್ವತ ನೀರಾವರಿ ಹೋರಾಟ ಸಮಿತಿ ಮುಖಂಡರಾದ ಸುಲೋಚನಮ್ಮ ವೆಂಕಟರೆಡ್ಡಿ ಮಾತನಾಡಿ, ಸರ್ಕಾರಗಳು ಇಂದು ಚಳವಳಿ ಹೋರಾಟಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿರುವುದು ಆತಂಕಕಾರಿ. ಅಭಿವೃದ್ಧಿಗೆ ಆದ್ಯತೆ ನೀಡಿ ಅಧಿಕಾರ ಶಾಹಿ ಕೆಲಸ ಮಾಡದ ಹೊರತು, ಜನಪರ ಆಡಳಿತ ದೊರೆಯುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ನೋಡುವ ದೃಷ್ಟಿಕೋನ ಬದಲಾಗಲಿ: ಮಾಜಿ ನಗರಸಭಾ ಸದಸ್ಯೆ ಎಲ್‌.ಎನ್‌.ವಸುಂಧರಾ ದೇವಿ ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ಮಹಿಳಾ ಸಂವೇದನೆ ಪ್ರಖರವಾಗಿಯೇ ಕಂಡು ಬಂದಿದೆ. ಆದರೆ, ಅಂದಿಗೂ-ಇಂದಿಗೂ ಮಹಿಳೆಯನ್ನು ಎರಡನೇ ದರ್ಜೆಯ ಪ್ರಜೆಯಾಗಿಯೇ ನೋಡುವ ದೃಷ್ಟಿಕೋನ ಬದಲಾಗದಿರುವುದು ವಿಷಾದನೀಯ. ಸಾಹಿತ್ಯದ ಸಂವೇದನೆಗಳು ಆಚರಣೆಗೂ ಬಂದಾಗ ಮಾತ್ರ ಮಹಿಳಾ ಸಮಾನತೆಯ ಕನಸು ನನಸಾಗುತ್ತದೆ ಎಂದರು.

ಕಾನೂನು ಎಲ್ಲರಿಗೂ ಅನ್ವಯ: ವಕೀಲ ಆಂಜನಮೂರ್ತಿ ಮಾತನಾಡಿ, ಕಾನೂನು ಎಲ್ಲರಿಗೂ ಅನ್ವಯವಾಗುತ್ತದೆ. ಮನುಷ್ಯನ ಹುಟ್ಟಿನಿಂದ ಸಾವಿನವರೆಗೆ ಕಾನೂನುಗಳನ್ನು ಪಾಲನೆ ಮಾಡಲೇಬೇಕು. ಕಾನೂನು ಉಲ್ಲಂಘನೆ ಶಿಕ್ಷಾರ್ಹ. ಕೆಲ ಸರಳ ಕಾನೂನುಗಳ ಬಗ್ಗೆ ಎಲ್ಲ ನಾಗರಿಕರೂ ಜಾಗೃತಿ ಹೊಂದಬೇಕು. ನಾಗರಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿಯೇ ಕಾನೂನು ಸೇವಾ ಪ್ರಾಧಿಕಾರಗಳು ಕೆಲಸ ಮಾಡುತ್ತಿವೆ ಎಂದರು.

Advertisement

ಸಮ್ಮೇಳನಾಧ್ಯಕ್ಷ ನಾಗೇಂದ್ರ ಪ್ರಸಾದ್‌, ಮಾಜಿ ನಗರಸಭಾ ಸದಸ್ಯ ವಡ್ಡರಹಳ್ಳಿ ರವಿ, ಕನ್ನಡ ಪಕ್ಷದ ಮುಖಂಡ ಪರಮೇಶ್‌, ಮುಖಂಡರಾದ ನಾಗರಾಜ್‌, ರುಕ್ಮಿಣಿ, ರಾಜೇಶ್ವರಿ, ಪ್ರಮೀಳಾ ಮಹದೇವ್‌, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ, ಸಾಮಾಜಿಕ ಹೋರಾಟಗಾರ ಚಂದ್ರತೇಜಸ್ವಿ, ಕನ್ನಡ ಪಕ್ಷದ ಕಾರ್ಯದರ್ಶಿ ಡಿ.ಪಿ.ಆಂಜನೇಯ, ಅಭಿನೇತ್ರಿ ಸಾಂಸ್ಕೃತಿಕ ಸಂಘದ ರೇವತಿ ಅನಂತರಾಮ್‌, ಕರವೇ ಮುಖಂಡ ಹಮಾಮ್‌ ವೆಂಕಟೇಶ್‌ ಭಾಗವಹಿಸಿದ್ದರು. ದೇವರಾಜ ಅರಸು ಕಾಲೇಜಿನ ಪ್ರಾಂಶುಪಾಲ ಕೆ.ಆರ್‌.ರವಿಕಿರಣ್‌ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ಚಂದ್ರಪ್ಪ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ತಾಲೂಕಿನ ವಿವಿಧ ಕವಿಗಳು ಭಾಗವಹಿಸಿ ಕವನ ವಾಚನ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next