ಮೈಸೂರು: ಇತ್ತೀಚಿನ ದಿನಗಳಲ್ಲಿ ಕ್ರೀಡೆಗಳನ್ನು ವೃತ್ತಿಪರ ದೃಷ್ಟಿಯಿಂದ ನೋಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಸಂಸದ ಪ್ರತಾಪ್‌ಸಿಂಹ ಅಭಿಪ್ರಾಯಪಟ್ಟರು.
ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್, ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ ಮಾನಸಗಂಗೋತ್ರಿಯ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ರ್‍ಯಾಂಕಿಂಗ್ ಬ್ಯಾಡ್ಮಿಂಟನ್ ಪಂದ್ಯಾವಳಿ ಮಾತನಾಡಿ, ಈ ಹಿಂದೆ ಕ್ರೀಡೆಯನ್ನು ವೃತ್ತಿಪರ ದೃಷ್ಟಿಯಿಂದ ನೋಡುವ ಪ್ರವೃತ್ತಿ ಕಡಿಮೆ ಇತ್ತು.
ಆದರೆ ಸದ್ಯ ಪರಿಸ್ಥಿತಿ ಬದಲಾಗಿದ್ದು, ಕ್ರೀಡೆ ವೃತ್ತಿಪರವಾಗಿ ನೋಡಲಾಗುತ್ತಿದೆ. ಕ್ರೀಡೆ ಮನರಂಜನೆಯ ಜತೆಗೆ ಆರೋಗ್ಯದ ದೃಷ್ಟಿಯಿಂದಲೂ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಪೋಷಕರು ಕ್ರೀಡೆಗೆ ಹೆಚ್ಚಿನ ಪೋ›ತ್ಸಾಹ ನೀಡಬೇಕಿದೆ ಎಂದರು.
ಈ ಹಿಂದೆ ವಿಶ್ವದ ಎಲ್ಲಾ ದೇಶಗಳು ತಮ್ಮ ಶಕ್ತಿಯನ್ನು ಯುದ್ಧಗಳಲ್ಲಿ ತೋರುತ್ತಿದ್ದವು. ಆದರೆ 2ನೇ ಮಹಾಯುದ್ಧದ ನಂತರ ಎಲ್ಲಾ ದೇಶಗಳು ತಮ್ಮ ಶಕ್ತಿಯನ್ನು ಕ್ರೀಡಾ ಕ್ಷೇತ್ರದಲ್ಲಿ ತೋರಿಸುತ್ತಿದೆ. ಇದರಿಂದಾಗಿ ಅಥ್ಲೆಟಿಕ್ಸ್, ಒಲಪಿಂಕ್‌ನಂತಹ ಕ್ರೀಡಾಕೂಟಗಳಲ್ಲಿ ಪದಕಗಳಿಗಾಗಿ ದೇಶಗಳು ಪೈಪೋಟಿ ನಡೆಸುತ್ತಿದ್ದು, ದೇಶದಲ್ಲಿ ಸೈನಾ ನೆಹ್ವಾಲ್, ಪಿ.ವಿ.ಸಿಂಧು ಅವರಂತಹ ಕ್ರೀಡಾಪಟುಗಳು ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದರು.
ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಉಪಾಧ್ಯಕ್ಷ ಎಸ್.ಜಿ.ಪ್ರಭು ಮಾತನಾಡಿ, ಮೈಸೂರಿನಲ್ಲಿ ಸುಸಜ್ಜಿತ ಬ್ಯಾಡ್ಮಿಂಟನ್ ಕ್ರೀಡಾಂಗಣ ನಿರ್ಮಿಸಲು ಮುಡಾ ವತಿಯಿಂದ ಸಿಎ ನಿವೇಶನ ಮಂಜೂರು ಮಾಡುವಂತೆ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಮುಡಾ ಅಧ್ಯಕ್ಷ ಡಿ.ಧ್ರುವಕುಮಾರ್, ಕೆಲವೇ ದಿನಗಳಲ್ಲಿ ಪ್ರಾಧಿಕಾರದಿಂದ ಸಿಎ ನಿವೇಶನಕ್ಕಾಗಿ ಅರ್ಜಿ ಆಹ್ವಾನಿಸಲಿದ್ದು, ಈ ಸಂದರ್ಭದಲ್ಲಿ ಅಸೋಸಿಯೇಷನ್‌ನಿಂದ ಸಲ್ಲಿಸುವ ಅರ್ಜಿಯನ್ನು ಕಾನೂನಾತ್ಮಕವಾಗಿ ಪರಿಶೀಲಿಸಿ ನಿವೇಶನ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.
ಡಿಸಿ ಡಿ.ರಂದೀಪ್, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪೊ›.ದಯಾನಂದ ಮಾನೆ, ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ, ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಎಂ.ಎಸ್.ಎಸ್.ಕುಮಾರ್ ಹಾಜರಿದ್ದರು.