ಉಡುಪಿ: ನಾಟಕ ಕಲೆಗೆ ಗೌರವ ಕೊಡಬೇಕಾದದ್ದು ನಮ್ಮ ಕರ್ತವ್ಯ. ಕೊಂಕಣಿ ಸಮಾಜದವರು ಒಟ್ಟಾಗಿ ಈ ಕೆಲಸವನ್ನು ಮಾಡುತ್ತಿದ್ದೀರಿ. ಇದು ಇನ್ನಷ್ಟು ಯಶಸ್ಸನ್ನು ಸಾಧಿಸುವಂತಾಗಲಿ ಎಂದು ಶಾಸಕ ಕೆ. ರಘುಪತಿ ಭಟ್ ಅಭಿಪ್ರಾಯಪಟ್ಟರು.
ಉಡುಪಿಯ ಅನಂತ ವೈದಿಕ ಕೇಂದ್ರದ ನೇತೃತ್ವದಲ್ಲಿ ಬಿಂಬ ಮಂಗಳೂರು ಅಭಿನಯಿಸುವ ಕಾಸರಗೋಡು ಚಿನ್ನಾ ನಿರ್ದೇಶನದ ಪ್ರಶಸ್ತಿ ವಿಜೇತ ಕೊಂಕಣಿ ನಾಟಕ “ಗಾಂಟಿ’ ಪ್ರದರ್ಶನವನ್ನು ಉಡುಪಿಯ ಪುರಭವನದಲ್ಲಿ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
“ತರಂಗ’ ವಾರಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್. ಪೈ ಅವರು ಮಾತನಾಡಿ, ಸಾರಸ್ವತ ಸಮಾಜದ ಸಂಸ್ಕೃತಿ, ಆಚಾರ ವಿಚಾರ ವಿಶಿಷ್ಟವಾ ದುದು.ಪುರಾತನ ಇತಿಹಾಸವಿರುವ ಸಮಾಜದ ಅರಿವು ಮುಂದಿನ ಪೀಳಿಗೆಗೆ ಸಿಗಬೇಕಾಗಿದೆ. ಅಂತಹ ಪ್ರಯತ್ನ ಇಲ್ಲಿ ನಡೆಯುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು.
ಉಡುಪಿ ಸಂಗೀತ ಸಭಾದ ಅಧ್ಯಕ್ಷ ಟಿ. ರಂಗ ಪೈ, ಉದ್ಯಮಿ ಮುರಳೀಧರ ಬಾಳಿಗಾ, “ಅಮ್ಗೆಲೆ ವಾಣಿ’ ಅಧ್ಯಕ್ಷ ವಸಂತ ನಾಯಕ್ ಶುಭ ಕೋರಿದರು. ರಂಗಕರ್ಮಿ ಕಾಸರಗೋಡು ಚಿನ್ನಾ ಅವರು ಮಾತನಾಡಿ, 35 ವರ್ಷಗಳ ಹಿಂದೆ ಈ ನಾಟಕ ಇಲ್ಲಿ ಪ್ರದರ್ಶನಗೊಂಡಿತ್ತು. ಈಗ ಎಲ್ಲರ ಸಹಕಾರದಿಂದ ಮತ್ತೆ ಪ್ರದರ್ಶನಗೊಳ್ಳುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ರಂಗಕರ್ಮಿಗಳಾದ ಚಿತ್ರಾಪುರ ಸಮಾಜದ ಗಣೇಶ ಕಂಡ್ಲೂರು, ಜಿಎಸ್‌ಬಿ ಸಮಾಜದ ಶ್ವೇತಾ ಸುಧಾ ಪೈ, ಆರ್‌ಎಸ್‌ಬಿ ಸಮಾಜದ ಗೋಪಿ ಹಿರೇಬೆಟ್ಟು, ಕುಡಾಲ ದೇಶ ಸಮಾಜದ ಅಶೋಕ ಸಾಮಂತ, ವೈಶ್ಯವಾಣಿ ಸಮಾಜದ ಪಾಂಡುರಂಗ ಪ್ರಭು ಕೊಳಂಬೆ ಅವರನ್ನು ಸಮ್ಮಾನಿಸಲಾಯಿತು.
ಅನಂತ ವೈದಿಕ ಕೇಂದ್ರದ ಸ್ಥಾಪಕ ವೇ|ಮೂ| ಚೇಂಪಿ ರಾಮಚಂದ್ರ ಭಟ್ ಸ್ವಾಗತಿಸಿ ವಿ| ಹರಿಪ್ರಸಾದ ಶರ್ಮ ಕಾರ್ಯಕ್ರಮ ನಿರ್ವಹಿಸಿದರು. ಸ್ನೇಹಾ ವಂದಿಸಿದರು.