ತಾಲೂಕಿನ ಸಜೀಪಮುನ್ನೂರು ಗ್ರಾಮದ ಆಲಾಡಿಯಲ್ಲಿ ಜಾಕ್‌ವೆಲ್ ನಿರ್ಮಿಸಿ ನೇತ್ರಾವತಿ ನದಿಯಿಂದ ಉಳ್ಳಾಲ ಹಾಗೂ ಕೋಟೆಕಾರು ನಗರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆಯ ಕಾಮಗಾರಿ ನಡೆಯುತ್ತಿದೆ. ಪ್ರಾರಂಭದಿಂದಲೂ ಈ ಯೋಜನೆಗೆ ಸ್ಥಳೀಯರ ವಿರೋಧವಿದೆ. ಈಗಲೂ ಅದು ಮುಂದುವರಿದಿದೆ. ಹೀಗಾಗಿ ಈ ಕುರಿತು ಸ್ಥಳೀಯರ ಗೊಂದಲಗಳನ್ನು ನಿವಾರಿಸುವ ಕೆಲಸ ಆಗಬೇಕಿದೆ.
ಸ್ಥಳೀಯರು ಇದನ್ನು ವಿರೋಧಿಸುವುದಕ್ಕೆ ಮುಖ್ಯ ಕಾರಣವೆಂದರೆ, ಇಲ್ಲಿನ ಜನರ ನೀರಿನ ಬೇಡಿಕೆಯನ್ನು ಪೂರೈಸದೆ ಈ ಭಾಗದಿಂದ ನೀರನ್ನು ಕೊಂಡೊಯ್ಯಲಾಗುತ್ತದೆ ಎಂದು. ಆದರೆ ಬಳಿಕ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಬಂಟ್ವಾಳ ತಾಲೂಕಿನ ಸ್ಥಳೀಯ 5 ಗ್ರಾಮ ಪಂಚಾಯತ್‌ಗಳಿಗೆ ಇದೇ ಯೋಜನೆಯಿಂದ ನೀರು ಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ. ಆದರೆ ಇದನ್ನು ಸ್ಪಷ್ಟವಾಗಿ ತಿಳಿಸಬೇಕು ಎಂಬುದು ಸ್ಥಳೀಯರ ವಾದವಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ಸಜೀಪಮೂಡ ಗ್ರಾ.ಪಂ.ಆಡಳಿತ ಮಂಡಳಿ ಯೋಜನೆಯ ವಿರುದ್ಧ ಪ್ರತಿಭಟನೆ ನಡೆಸಿದ್ದು, ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧಿಕಾರಿಗಳು ಗ್ರಾ.ಪಂ.ಗೆ ಯಾವುದೇ ರೀತಿಯ ಸ್ಪಂದನೆ ನೀಡುತ್ತಿಲ್ಲ. ಹೀಗಾಗಿ ನಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಯಲು ಬಿಡುವುದಿಲ್ಲ ಎಂದು ಪ್ರತಿಭಟಿಸಿದ್ದರು. ಸಂಬಂಧಪಟ್ಟ ಅಧಿಕಾರಿಗಳು ಗ್ರಾ.ಪಂ.ಗೆ ಭೇಟಿ ನೀಡಿ ನೀರು ಕೊಡುವ ಕುರಿತು ಸ್ಪಷ್ಟವಾಗಿ ತಿಳಿಸಬೇಕು ಎಂಬುದು ಅವರ ವಾದವಾಗಿದೆ.
ಆಲಾಡಿ ಭಾಗದಿಂದ ನೀರು ಪೂರೈಕೆಯಾಗುವ ಪೈಪ್‌ಲೈನ್ ಕಾಮಗಾರಿಯ ವೇಳೆಯೇ, ನೀರು ಶುದ್ದೀಕರಣಗೊಂಡು ಹಿಂದೆ ಬರುವ ಪೈಪ್‌ಲೈನ್ ಹಾಕ ಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದ್ದು, ಇದಕ್ಕೆ ಅಧಿಕಾರಿಗಳು ಕೂಡ ಒಪ್ಪಿಕೊಂಡಿದ್ದರು. ಆದರೆ ಈಗ ನೀರು ಹಿಂದೆ ಬರುವ ಪೈಪ್ ಹಾಕುತ್ತಿಲ್ಲ
ಎಂಬುದು ಗ್ರಾಮಸ್ಥರ ವಾದವಾಗಿದೆ. ಈ ರೀತಿ ಯೋಜನೆ ಪ್ರಾರಂಭದಿಂದಲೂ ಇಂತಹ ಗೊಂದಲಗಳಿದ್ದು, ಪ್ರಸ್ತುತ ಜಾಕ್‌ವೆಲ್‌ನ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ಗೊಂದಲ ಮಾತ್ರ ಬಗೆಹರಿಯದಿರುವುದು ವಿಪರ್ಯಾಸವೇ ಸರಿ.
ಇಂತಹ ಪ್ರಮುಖ ಯೋಜನೆಗಳನ್ನು ಜಾರಿಗೊಳಿಸುವ ಮೊದಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸ್ಥಳೀಯ ಜನರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳದೆ ಇರುವುದೇ ಸಮಸ್ಯೆಗೆ ಕಾರಣವಾಗಿದೆ. ಒಂದು ಪ್ರದೇಶದಿಂದ ಮತ್ತೂಂದು ಪ್ರದೇಶಕ್ಕೆ ನೀರು ಕೊಂಡೊಯ್ಯುವ ಸಂದರ್ಭ ಸಹಜವಾಗಿಯೇ ಇಂತಹ ಅಡ್ಡಿ ಆತಂಕಗಳು ಇರುತ್ತವೆ. ಯೋಜನೆ ಆರಂಭಿಸುವ ಹಂತದಲ್ಲಿಯೇ ಇದಕ್ಕೆ ಪರಿಹಾರೋಪಾಯಗಳನ್ನು ಕಂಡುಕೊಂಡರೆ ಮಹತ್ವದ ಯೋಜನೆ ಸಾಂಗವಾಗಿ ಸಾಗಲು ಸಾಧ್ಯವಾಗುತ್ತದೆ. ಆದುದರಿಂದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇನ್ನಾದರೂ ಇತ್ತ ಗಮನ ಹರಿಸಿ ಯೋಜನೆ ಯಶಸ್ವಿಯಾಗಲು ಸಹಕರಿಸುವುದು ಅಗತ್ಯವಾಗಿದೆ.
-ಸಂ.