Advertisement

ಸುಲಭದಲ್ಲಿ ಚಿನ್ನದ ಒಡೆಯರಾಗುವುದು ಕಷ್ಟದ ಮಾತೇನೂ ಅಲ್ಲ !

12:30 AM Jan 21, 2019 | Team Udayavani |

ಸುಲಭದಲ್ಲಿ ಚಿನ್ನದ ಒಡೆಯರಾಗಬೇಕೆಂಬ ಕನಸು ಯಾವತ್ತೂ  ಮಧ್ಯಮ ವರ್ಗದವರಲ್ಲಿ ಇರುವುದು ಸಹಜವೇ. ಈ ಕನಸನ್ನು ನನಸು ಮಾಡುವ ರೀತಿಯಲ್ಲಿ ಚಿನ್ನಾಭರಣ ಮಳಿಗೆಗಳು ಆಕರ್ಷಕ ಸುಲಭ ಕಂತು ಪಾವತಿಯ ‘ಚಿನ್ನ ಉಳಿತಾಯ ಯೋಜನೆ’ಗಳನ್ನು  ಗ್ರಾಹಕರಿಗಾಗಿ ರೂಪಿಸಿರುತ್ತಾರೆ. 

Advertisement

ಒಂದು ದೃಷ್ಟಿಯಲ್ಲಿ ನೋಡಿದರೆ ಇದು ಸಣ್ಣ ಮತ್ತು ಮಧ್ಯಮ ವರ್ಗದ ಜನರ ಪಾಲಿನ ಸಿಸ್ಟಮ್ಯಾಟಿಕ್‌ ಇನ್‌ವೆಸ್ಟ್‌ಮೆಂಟ್‌ ಪ್ಲಾನ್‌ (SIP) ಎಂದೇ ಹೇಳಬಹುದು. ಈ ರೀತಿಯ ಯೋಜನೆಗಳಲ್ಲಿ ಒಂದು ಆರ್ಥಿಕ ಮತ್ತು ಉಳಿತಾಯದ ಶಿಸ್ತು ಇರುತ್ತದೆ.

ಏಕೆಂದರೆ ನಮ್ಮ ಯಾವತ್ತೂ ಖರ್ಚು ವೆಚ್ಚಗಳು ನಮ್ಮ ತಿಂಗಳ ಆದಾಯದಿಂದ ಉಳಿತಾಯಕ್ಕೆಂದು ತೆಗೆದಿರಿಸಿದ ಬಳಿಕದಲ್ಲಿ ಉಳಿಯುವ ಮೊತ್ತಕ್ಕೆ ಸೀಮಿತವಾಗಿದ್ದರೆ ಮಾತ್ರವೇ ನಮ್ಮಿಂದ ಉಳಿತಾಯ ಸಾಧ್ಯ. Income minus saving should be your expenditure ಎಂಬ ಪ್ರಸಿದ್ಧ ಆಂಗ್ಲ ನುಡಿ ಇಲ್ಲಿ ಸ್ಮರಣೀಯ. 

ಆದುದರಿಂದ ಚಿನ್ನ ಉಳಿತಾಯ ಯೋಜನೆಗಳ ಮೂಲಕ ತಿಂಗಳ ಕಂತಿನ ರೂಪದಲ್ಲಿ ಹಣವನ್ನು ಕ್ರಮಬದ್ಧವಾಗಿ ಉಳಿಸುವ ಮತ್ತು ಸ್ಕೀಮ್‌ ಮುಗಿದಾಗ ನಮ್ಮ ಆಯ್ಕೆಯ ಚಿನ್ನದ ಒಡವೆಯನ್ನು, ಇನ್ನಷ್ಟು ಸ್ವಲ್ಪ ಹೆಚ್ಚು ಹಣ ಹಾಕಿ, ಮನೆಗೆ ತರುವ ಸೌಭಾಗ್ಯ ಇದೆಯಲ್ಲ, ಅದು ನಿಜಕ್ಕೂ ಬ್ಲೆಸ್ಸಿಂಗ್‌ ಇನ್‌ ಡಿಸ್‌ಗೆçಸ್‌ ಎಂದೇ ಹೇಳಬೇಕು.

Advertisement

ಚಿನ್ನಾಭರಣ ಮಳಿಗೆಗಳು ಚಿನ್ನ ಉಳಿತಾಯ ಸ್ಕೀಮು ರೂಪಿಸುವಲ್ಲಿ ಹಲವಾರು ನಿಯಮಗಳನ್ನು, ಶರತ್ತುಗಳನ್ನು ಪಟ್ಟಿ ಮಾಡಿರುತ್ತಾರೆ ಎಂಬುದನ್ನು ನಾವು ಕಳೆದ ವಾರ ಕಂಡುಕೊಂಡವು. ಆದರ ಮುಂದುವರಿಕೆಯಲ್ಲಿ ಈಗ ನಾವು ಇತರ ನಿಯಮಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಪ್ರಶ್ನೋತ್ತರ ರೂಪದಲ್ಲಿ ಕಾಣಬಹುದು : 

ಚಿನ್ನ ಉಳಿತಾಯದ ತಿಂಗಳ ಕಂತುಗಳನ್ನು ಕಟ್ಟುವುದು ಹೇಗೆ?

ಕಂತುಗಳನ್ನು ನಗದು, ಡಿಡಿ, ನೆಫ್ಟ್/ಆರ್‌ಟಿಜಿಎಸ್‌, ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌, ಎಲ್ಲೆಡೆ ಪಾವತಿಸಲ್ಪಡುವ ಚೆಕ್‌ಗಳ ಮೂಲಕ ಸ್ವೀಕರಿಸಬಹುದಾಗಿರುತ್ತದೆ. ಚೆಕ್‌ಗಳನ್ನು ಆಡಳಿತ ವರ್ಗದ ಅನುಮತಿಯ ಮೇರೆಗೆ ವಿಶ್ವಾಸಾರ್ಹ ವ್ಯಕ್ತಿಗಳಿಂದ ಮಾತ್ರವೇ ಸ್ವೀಕರಿಸಬಹುದಾಗಿರುತ್ತದೆ.  ಚೆಕ್‌ಗಳನ್ನು ಸ್ವೀಕರಿಸಲಾದ ಸಂದರ್ಭಗಳಲ್ಲಿ, ಚೆಕ್‌ಗಳ ವಟಾವಣೆಯ ಬಳಿಕವೇ ರಶೀದಿ ಬರೆಯಲಾಗುತ್ತದೆ. ದೊಡ್ಡ ಮೊತ್ತದ ಕಂತುಗಳ ಸಂದರ್ಭದಲ್ಲಿ ಚೆಕ್‌ ತೆಗೆದುಕೊಳ್ಳದಿರುವುದೇ ಸೂಕ್ತವೆಂದು ತಿಳಿಯಲಾಗಿರುತ್ತದೆ. 

ಚಿನ್ನ ಉಳಿತಾಯದ ಗ್ರಾಹಕರಿಗೆ ರೇಟ್‌ ಬೆನಿಫಿಟ್‌ (ದರ ಪರಿವರ್ತನೆಯ ಲಾಭ) ಅನ್ವಯವಾಗುವುದೇ ?

ಸಾಮಾನ್ಯವಾಗಿ  ಇಲ್ಲ. ಚಿನ್ನ/ಬೆಳ್ಳಿಯ ದರಗಳು ಆಯಾ ದಿನದ ಖರೀದಿಗೆ ಸಂಬಂಧಪಟ್ಟು ಅನ್ವಯವಾಗುತ್ತವೆ.

ಚಿನ್ನ ಉಳಿತಾಯದ  ಗ್ರಾಹಕರು ಸ್ಕೀಮಿನಿಂದ ಯಾವಾಗ ಹೊರಬರಬಹುದು ?

ಗ್ರಾಹಕರು 11ನೇ ತಿಂಗಳ ಅನಂತರ ಮತ್ತು ಮೊದಲ ಕಂತು ಪಾವತಿಸಿದ 15 ದಿನಗಳ ಬಳಿಕ ಸ್ಕೀಮಿನಿಂದ ಹೊರಬರಬಹುದು ಎಂಬ ನಿಯಮ ಇರುತ್ತದೆ. ಇದಕ್ಕೆ  ಮುನ್ನ ಯಾವುದೇ ಕಾರಣಕ್ಕೆ ನಗದನ್ನು ಮರುಪಾವತಿಸಲಾಗುವುದಿಲ್ಲ ಎಂಬ ನಿಯಮವೂ ಇರುವ ಸಾಧ್ಯತೆ ಇದೆ. 

ಸ್ಕೀಮಿನಿಂದ ಚಿನ್ನ ಉಳಿತಾಯದ ಗ್ರಾಹಕರಿಗೇನು ಲಾಭ ?

ಸ್ಕೀಮು ರೂಪಣೆದಾರರು ಸಾಮಾನ್ಯವಾಗಿ  ಒಂದು ತಿಂಗಳ ಕಂತನ್ನು ಗ್ರಾಹಕರಿಗೆ ತನ್ನ ಕೊಡುಗೆಯಾಗಿ ನೀಡುತ್ತಾರೆ ಮತ್ತು 11ನೇ ತಿಂಗಳ ಕೊನೆಯಲ್ಲಿ ಡಿಸ್ಕೌಂಟ್‌ (ರಿಯಾಯಿತಿ) ನೀಡುತ್ತಾರೆ. 

ಚಿನ್ನ ಉಳಿತಾಯದ ಗ್ರಾಹಕರು ಸಮಯಕ್ಕೆ ಸರಿಯಾಗಿ ತಿಂಗಳ ಕಂತುಗಳನ್ನು ಕಟ್ಟದಿದ್ದರೆ ಏನಾಗುತ್ತದೆ ?

ಸಮಯಕ್ಕೆ ಸರಿಯಾಗಿ ಕಂತುಗಳನ್ನು ಕಟ್ಟದಿದ್ದರೆ, ಪ್ರತೀ ವಿಳಂಬಿತ ಪಾವತಿಗೆ ಶೇ.10ರಷ್ಟು ಬೋನಸ್‌ ಕಡಿತವಾಗುವ ನಿಯಮ ಇರುತ್ತದೆ. ಉದಾಹರಣೆಗೆ ಗ್ರಾಹಕರೋರ್ವರು ಎರಡು ಕಂತಗಳನ್ನು ವಿಳಂಬಿಸಿದ್ದರೆ, ಶೇ.20ರಷ್ಟು ಬೋನಸ್‌ ಹಣವನ್ನು ಕಡಿತ ಮಾಡಲಾಗುವ ಕ್ರಮ ಇರುತ್ತದೆ. 

ಚಿನ್ನ ಉಳಿತಾಯದ  ಗ್ರಾಹಕರು 11 ತಿಂಗಳ ಬಳಿಕ ಮತ್ತು 15 ದಿನಗಳಿಗೆ ಮುನ್ನ ಸ್ಕೀಮನ್ನು ಹೊಂದಿಸದಿದ್ದರೆ ಏನಾಗುತ್ತದೆ ?

ಗ್ರಾಹಕರು 10ನೇ ಕಂತನ್ನು ಕಟ್ಟಲು ಬಂದಾಗ, ಸ್ಕೀಮ್‌ ಸಿಬಂದಿಗಳು ಆತನಿಗೆ ಸಿದ್ಧವಿರುವ ಒಡವೆಗಳನ್ನು ಆಯ್ಕೆ ಮಾಡುವಂತೆ ಇಲ್ಲವೇ ಆತನ ಇಷ್ಟಾನುಸಾರದ ಒಡವೆಗೆ ಆರ್ಡರ್‌ ನೀಡುವುದನ್ನು (ಓಎಫ್ ಬುಕ್ಕಿಂಗ್‌) ಖಾತರಿಪಡಿಸಿಕೊಳ್ಳುತ್ತಾರೆ. 

ಇದರ ಹೊರತಾಗಿಯೂ ಗ್ರಾಹಕನು 15 ದಿನಗಳಿಗೆ ಮುನ್ನ ಮತ್ತು 11 ತಿಂಗಳ ಬಳಿಕ ಸ್ಕೀಮಿನಿಂದ ಹೊರಬರಲು ವಿಫ‌ಲನಾದಲ್ಲಿ, ಗ್ರಾಹಕನು ಕಟ್ಟಿರುವ ಕಂತು ಮೊತ್ತವನ್ನು  ಸ್ಕೀಮ್‌ ರೂಪಣೆದಾರರು ಆತನ ಬ್ಯಾಂಕ್‌ ಖಾತೆಗೆ ನೇರವಾಗಿ ಜಮಾವಣೆ ಮಾಡುವ ಕ್ರಮವೂ ಇರುತ್ತದೆ.  

ಇಂತಹ ಸಂದರ್ಭದಲ್ಲಿ , ಆ ಗ್ರಾಹಕನು ತನ್ನ ಎಲ್ಲ ಕಂತುಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿರುವ ಹೊರತಾಗಿಯೂ ಆತನಿಗೆ ಬೋನಸ್‌ ಆಗಲೀ ಇತರ ಲಾಭಗಳಾಗಲೀ ಸಿಗುವುದಿಲ್ಲ. ಇದನ್ನು ಗ್ರಾಹಕರಿಗೆ ಸ್ಕೀಮ್‌ ಆರಂಭಿಸುವ ಸಂದರ್ಭದಲ್ಲೇ ಸ್ಪಷ್ಟವಾಗಿ ತಿಳಿಸುತ್ತಾರೆ. 

Advertisement

Udayavani is now on Telegram. Click here to join our channel and stay updated with the latest news.

Next