Advertisement
ಉಳಿದಂತೆ ನಾಲ್ಕು ಮಂದಿ ಚಿಕಿತ್ಸೆಗೆ ಸ್ಪಂದಿಸದ ಕಾರಣ ಅವರಿಗೆ ದೃಷ್ಟಿ ಬರುವುದೂ ಅನುಮಾನ ಎಂದು ಹೇಳಲಾಗುತ್ತಿದೆ. ಕಣ್ಣಿನಲ್ಲಿ ಪೊರೆಯಾಗಿ ಮಂಜು ಮಂಜಾಗಿ ಕಾಣಿಸುತ್ತಿದ್ದರಿಂದ ಸರಿಪಡಿಸಿಕೊಳ್ಳಲೆಂದು ರಾಜ್ಯದ ವಿವಿಧ ಭಾಗದ 8 ಮಂದಿ ಮಹಿಳೆಯರು ಹಾಗೂ 16 ಮಂದಿ ಪುರುಷರು ಕಳೆದ ಮಂಗಳವಾರ (ಜು.9) ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು.
Related Articles
Advertisement
ಶಸ್ತ್ರಚಿಕಿತ್ಸೆ ಸ್ಥಗಿತ: ಘಟನೆಯ ಹಿನ್ನೆಲೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಯನ್ನು ಆಸ್ಪತ್ರೆಯಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಡ್ರಗ್ಸ್ ರಿಯಾಕ್ಷನ್ ಆಗಿರಬಹುದೇ ಅಥವಾ ಮತ್ತೆನಾದರೂ ಇದೆಯೇ ಎಂಬ ಬಗ್ಗೆ ಸ್ಪಷ್ಟತೆ ದೊರೆತಿಲ್ಲ.ಡ್ರಗ್ ಕಂಟ್ರೋಲ್‌ನಿಂದ ವರದಿ ಬರಬೇಕಿದೆ.
ಘಟನೆ ನಡೆದ ತಕ್ಷಣವೇ ಶಸ್ತ್ರಚಿಕಿತ್ಸೆ ಕೊಠಡಿ ಮುಚ್ಚಿದ್ದು, ಆ ವೇಳೆ ಇದ್ದ ವೈದ್ಯರು ಕರ್ನಾಟಕ ರಾಜ್ಯ ಔಷಧ ನಿಯಂತ್ರಣ ಮಂಡಳಿ, ಆರೋಗ್ಯ ಇಲಾಖೆಯ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದಾರೆ. ಅವರು ಬಂದು ಎಲ್ಲವನ್ನೂ ಪರಿಶೀಲಿಸಿ ಹೋಗಿದ್ದಾರೆ.
ಈ ಕುರಿತು ಸಾಕಷ್ಟು ಚರ್ಚೆಗಳು ನಡೆಯಬೇಕಿದೆ. ಒಟ್ಟಾರೆ ಶಸ್ತ್ರಚಿಕಿತ್ಸೆ ವ್ಯತ್ಯಯಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವರದಿ ಬರುವವರೆಗೆ ಆಸ್ಪತ್ರೆಯಲ್ಲಿ ತುರ್ತು ಶಸ್ತ್ರಚಿಕಿತ್ಸೆ ಹೊರತುಪಡಿಸಿ ಯಾವುದೇ ಚಿಕಿತ್ಸೆ ಕೈಗೊಳ್ಳುವುದಿಲ್ಲ ಎಂದು ಮಿಂಟೊ ಆಸ್ಪತ್ರೆ ನಿರ್ದೇಶಕರು ತಿಳಿಸಿದ್ದಾರೆ.
ಚಿಕಿತ್ಸೆಯ ನೋವು ಹೆಚ್ಚಿದೆ: ಶಸ್ತ್ರಚಿಕಿತ್ಸೆಯಿಂದ ಸೋಂಕಾದವರಿಗೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಮುಂದುವರಿಸಿದ್ದು, ಆ ರೋಗಿಗಳ ಕಣ್ಣಿಗೆ ಪ್ರತಿದಿನ ಮೂರು ರೀತಿಯ ಚುಚ್ಚು ಮದ್ದುನ್ನು ವೈದ್ಯರು ನೀಡುತ್ತಿದ್ದಾರೆ. ಶಸ್ತ್ರಚಿಕಿತ್ಸೆಗಿಂತಲೂ ಚುಚ್ಚುಮದ್ದು ಹೆಚ್ಚು ನೋವು ನೀಡುತ್ತಿದೆ. ಸೋಂಕು ಕಡಿಮೆಯಾಗಿ ದೃಷ್ಟಿ ಮರಳಬಹುದು ಎಂದು ಈ ನೋವನ್ನು ಸಹಿಕೊಳ್ಳುತ್ತಿದ್ದೇವೆ. ಮೊದಲು ಮಂಜು ಮಂಜಾಗಿ ಕಾಣುತ್ತಿತ್ತು. ಈಗ ಏನೂ ಕಾಣಿಸುತ್ತಲೇ ಇಲ್ಲ ಎಂದು ರೋಗಿಯೊಬ್ಬರು ತಮ್ಮ ನೋವನ್ನು ಹೇಳಿಕೊಂಡರು.
ಮುಲಾಮಿನಲ್ಲಿ ಕೀಟದ ಅಂಶ ಪತ್ತೆ: ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ವೇಳೆ ರೋಗಿಗಳ ಕಣ್ಣಿಗೆ ಲೇಪಿಸುವ ಮುಲಾಮಿನಿಂದ ಕಣ್ಣಿನ ಒಳಭಾಗದಲ್ಲಿ ಗಂಭೀರವಾದ ಸಮಸ್ಯೆ ಕಾಣಿಸಿಕೊಂಡಿದೆ. “ಪ್ರಾಥಮಿಕ ವರದಿಯ ಪ್ರಕಾರ ಶಸ್ತ್ರಚಿಕಿತ್ಸೆ ವೇಳೆ ಬಳಸಿರುವ ಮುಲಾಮಿನಲ್ಲಿ ಕೀಟಾಂಶ ಕಾಣಿಸಿಕೊಂಡಿದ್ದು, ಸೋಂಕಿಗೆ ಅದೇ ಕಾರಣವಾಗಿದೆ. ಆದರೆ, ಈ ಕುರಿತ ಪ್ರಾಥಮಿಕ ವರದಿಯನ್ನು ಡ್ರಗ್ ಕಂಟ್ರೋಲರ್‌ಗೆ ಕಳಿಸಿದ್ದು, ಅವರ ವರದಿ ಬಂದ ನಂತರ ಎಲ್ಲವೂ ಸ್ಪಷ್ಟವಾಗಲಿದೆ.
ಈ ಮುಲಾಮನ್ನು ಶಸ್ತ್ರಚಿಕಿತ್ಸೆ ವೇಳೆ ಕಣ್ಣಿನ ಪೊರೆಯ ಮೇಲ್ಮೈ ನಿಯಂತ್ರಣಕ್ಕೆ ಬಳಸಲಾಗುತ್ತದೆ. ಈ ಕುರಿತು ಕರ್ನಾಟಕ ರಾಜ್ಯ ಔಷಧ ನಿಯಂತ್ರಣ ಮಂಡಳಿಗೆ ಹಾಗೂ ಮುಲಾಮು ತಯಾರಿಸಿದ ಕಂಪನಿ ಹಾಗೂ ಆರೋಗ್ಯ ಇಲಾಖೆ ಮುಖ್ಯ ಕಾರ್ಯದರ್ಶಿಗಳಿಗೆ ವರದಿ ಕುರಿತು ಪತ್ರ ಬರೆಯುತ್ತಿದ್ದೇವೆ’ ಎಂದು ಆಸ್ಪತ್ರೆ ನಿರ್ದೇಶಕಿ ಸುನೀತಾ ರಾಥೋಡ್ ತಿಳಿಸಿದ್ದಾರೆ.
ಎಡಗಣ್ಣುಗೆ ಮಂಜು ಮಂಜಾದ ಕಾರಣ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡೆ. ಆಪರೇಷನ್ ನಂತರ ಆ ಕಣ್ಣು ಬಾವು ಬಂದಿದ್ದು, ಏನೂ ಕಾಣುತ್ತಿಲ್ಲ. ವೈದ್ಯರನ್ನು ಕೇಳಿದರೆ ಸರಿ ಹೋಗುತ್ತೆ ಎಂದು ಹೇಳುತ್ತಿದ್ದಾರೆ. ಎರಡು ದಿನ ಆಸ್ಪತ್ರೆಯಲ್ಲಿರಬೇಕು ಎಂದು ಹೇಳಿದ್ದರು. ವಾರ ಕಳೆದರು ಚಿಕಿತ್ಸೆ ನೀಡುತ್ತಲೇ ಇದ್ದಾರೆ.-ನಂಜಮ್ಮ, ದೃಷ್ಟಿ ಕಳೆದುಕೊಂಡವರು