Advertisement
ಬಿಳಿನೆಲೆ ಗ್ರಾಮದ ನಾಗರಕಟ್ಟೆ ಹೊಳೆಗೆ ತಾತ್ಕಾಲಿಕವಾಗಿ ನಿರ್ಮಿಸಿಕೊಂಡ ಮರದ ಸೇತುವೆ ಶಿಥಿಲಗೊಂಡು ಕುಸಿಯುವ ಭೀತಿಯಲ್ಲಿದೆ. ಕಾಲು ಸಂಕದ ಎರಡು ಬದಿ ಮುಕ್ತವಾಗಿದ್ದು, ಆಧಾರಗಳಿಲ್ಲ. ಎರಡೂ ಬದಿ ಕಂದಕಗಳಿವೆ. ಸಂಕದ ಮಧ್ಯೆ ವಿದ್ಯುತ್ ಕಂಬ ಅಳವಡಿಸಿಕೊಳ್ಳಲಾಗಿದೆ. ಸೇತುವೆ ಮೇಲೆ ತೆರಳುವಾಗ ಸುರಕ್ಷತೆ ಇಲ್ಲ. ತಾತ್ಕಾಲಿಕ ಕಾಲು ಸಂಕವೂ ನೆರೆಗೆ ಕೊಚ್ಚಿ ಹೋಗುವ ಹಂತಕ್ಕೆ ತಲುಪಿದ್ದು, ಗಾಣದಗುಂಡಿ, ಬಾಲಡ್ಕ, ಗುಂಡಿಗದ್ದೆ, ಕಾಲಪ್ಪಾಡಿ ಹೊಸೋಕ್ಲು ನಡುತೋಟ ಭಾಗಗಳ ಜನರು ಸಂಕಷ್ಟದಲ್ಲಿದ್ದಾರೆ.
ಈ ಭಾಗದ ಗ್ರಾಮಸ್ಥರು, ತಮ್ಮ ದೈನಂದಿನ ಬದುಕಿಗಾಗಿ ತಾವೇ ಕಟ್ಟಿಕೊಂಡ ಈ ಮರದ ಸೇತುವೆಯನ್ನೇ ಅವಲಂಬಿಸಿದ್ದಾರೆ. ಆದರೆ ಈ ಮಳೆಗಾಲ ನಾಗರಕಟ್ಟೆ ಹಳ್ಳದ ಪ್ರವಾಹದ ಹೊಡೆತಕ್ಕೆ ಮರದ ಸೇತುವೆ ಮುಳುಗುವ ಮತ್ತು ಕುಸಿಯುವ ಹಂತಕ್ಕೆ ತಲುಪಿದೆ. ಜನ ಆತಂಕದಲ್ಲಿದ್ದಾರೆ. ದುರ್ಬಲ ಮರದ ಸೇತುವೆ ಮೇಲೆ ಭಯದ ಹೆಜ್ಜೆ ಇಡುತ್ತ ತೆರಳುವಾಗ ಭಯ ಹುಟ್ಟುತ್ತದೆ. 60 ಕುಟುಂಬಗಳು
ಕೈಕಂಬದಿಂದ 200 ಮೀ. ದೂರದಲ್ಲಿ ಈ ಸೇತುವೆ ಇರುವುದು. ಸೇತುವೆ ಅವಲಂಬಿತ ಪ್ರದೇಶಗಳ ಒತ್ತೂಟ್ಟಿಗಿರುವ ಹಳ್ಳಿಗಳಲ್ಲಿ 60ಕ್ಕೂ ಅಧಿಕ ಕುಟುಂಬಗಳು ನೆಲೆಸಿವೆ. ಎಲ್ಲ ವರ್ಗದವರು ಇಲ್ಲಿದ್ದಾರೆ. ಕೃಷಿ, ಕೂಲಿಯೇ ಇಲ್ಲಿಯವರ ಜೀವನಾಧಾರ.
Related Articles
Advertisement
ಬೇರೆಡೆಗೆ ಶಾಲಾ ಕಾಲೇಜಿಗೆ ತೆರಳುವವರು, ಕೃಷಿ ಕೂಲಿಗೆಂದು ತೆರಳುವವರು ಸಹ ಈ ಮರದ ಸೇತುವೆ ದಾಟಿಕೊಂಡೆ ಹೋಗಬೇಕು. ನೂರಾರು ವರ್ಷಗಳಿಂದ ಊರಿನ ಜನರೇ ಈ ಮರದ ಸೇತುವೆಯನ್ನು ಶ್ರಮದಾನದ ಮೂಲಕ ನಿರ್ಮಿಸಿಕೊಳ್ಳುತ್ತಿದ್ದಾರೆ. ಯಾವುದೇ ಅನುದಾನಗಳು ಬರುತ್ತಿಲ್ಲ. ಸೇತುವೆ ಬೇಡಿಕೆಗೆ ಸ್ಪಂದನ ಸಿಗದಿರುವ ಕಾರಣ ಅವಲಂಬಿತ ಗ್ರಾಮಸ್ಥರು ಅಕ್ಷರಶಃ ನಲುಗಿಹೋಗಿದ್ದಾರೆ.
ಭಯದ ಬದುಕುನಾಗರಕಟ್ಟೆ ಎಂಬ ಗುಡ್ಡಗಾಡು ಹಳ್ಳಿಯ ಜನರನ್ನು ಕಾಡುವ ದೊಡ್ಡ ಸಮಸ್ಯೆ ಎಂದರೆ ಸಂಪರ್ಕ ಸೇತುವೆ. ಇಲ್ಲಿನವರದು ಕಾಡಿನ ಮರೆಯ ಅತ್ಯಂತ ಕಷ್ಟಕರ ಬದುಕು. ವಿದ್ಯುತ್, ದೂರವಾಣಿ, ರಸ್ತೆ ಸೌಲಭ್ಯ ಇಲ್ಲ. ಕಾಡಿನ ನಡುವಿನ ಹಾದಿಯೇ ರಹದಾರಿ. ಚುನಾವಣೆ ಬಂದಾಗ ರಾಜಕಾರಣಿಗಳು ನೀಡುವ ಭರವಸೆಗಳು ಅವರೊಂದಿಗೇ ಹೋಗಿರುತ್ತವೆ ಎನ್ನುವುದು ಹಳ್ಳಿಗರ ಆರೋಪ. ರಸ್ತೆ ಸಿಗಬೇಕಿದ್ದರೆ ಇಲ್ಲಿಯ ಜನ ಕಾಲ್ನಡಿಗೆಯಲ್ಲಿ 10 ನಿಮಿಷ ಸಾಗಬೇಕು. ಈ ಸೇತುವೆ ಸಂಪರ್ಕ ಕಡಿತಗೊಂಡರೆ ನಡುತೋಟ, ಪಿಲಿಕಜೆ ಮೂಲಕ ಕಾಲನಿ ಮಾರ್ಗವಾಗಿ ಕೈಕಂಬ ತಲುಪಬೇಕು. ಇದು ಸುತ್ತು ಬಳಸಿನ ದಾರಿ. ಕಾಡಿನ ನಡುವೆ ದುರ್ಭರ ಬದುಕು ನಡೆಸುತ್ತಿರುವ ಇವರ ಸಂಚಾರಕ್ಕೆ ನಾಗರಕಟ್ಟೆ ಮಾರ್ಗವೇ ಆಸರೆ. ಸೇತುವೆಯೂ ದುರ್ಬಲ ಗೊಂಡಿರುವುದರಿಂದ ಜನರು ಭಯದ ನೆರಳಿನಲ್ಲಿ ಬದುಕು ನಡೆಸುತ್ತಿದ್ದಾರೆ. ನಮಗೊಂದು ಸೇತುವೆ ಕೊಡಿ
ನಾಗರಕಟ್ಟೆ ಬಳಿ ಹರಿಯುವ ಹಳ್ಳಕ್ಕೆ ಅಡ್ಡಲಾಗಿ ಶಾಶ್ವತ ಸೇತುವೆ ನಿರ್ಮಿಸಿಕೊಡಿ ಎಂಬ ನಮ್ಮ ಬೇಡಿಕೆಯನ್ನು ಯಾರು ಇದುವರೆಗೆ ಪರಿಗಣಿಸಿಲ್ಲ. ಮಳೆಗಾಲದಲ್ಲಿ ಹಳ್ಳ ತುಂಬಿ ಹರಿಯುವುದರಿಂದ ಮರದ ಕಿರು ಸೇತುವೆ ಮೇಲೆ ಹೆಜ್ಜೆ ಇಡುವುದು ದುಸ್ತರ. ಶಾಲೆಗೆ ಹೋಗುವ ಪುಟ್ಟ ಪುಟ್ಟ ಮಕ್ಕಳ ಜೀವ ಕೈಯಲ್ಲಿ ಹಿಡಿದು ಸಾಗಬೇಕು. ಸಂಬಂಧಿತರು ಗಮನ ಹರಿಸಿ, ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕು. ಹತ್ತಾರು ವರ್ಷಗಳಿಂದ ಸೌಲಭ್ಯ ವಂಚಿತರಾಗಿ ಅತ್ಯಂತ ಸಂಕಷ್ಟದ ಬದುಕು ನಡೆಸುತ್ತಿರುವ ನಮ್ಮೆಡೆಗೆ ಆಡಳಿತ ವ್ಯವಸ್ಥೆ ಕಣ್ಣು ಹಾಯಿಸಬೇಕು.
– ಪ್ರದೀಪ ಕಳಿಗೆ, ಫಲಾನುಭವಿ ದೊಡ್ಡ ಮೊತ್ತದ ಅನುದಾನ ಬೇಕು
ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿ ಅಲ್ಲಿಗೆ ಹೆಚ್ಚಿನ ಅನುದಾನದ ಆವಶ್ಯಕತೆ ಇದೆ. ಶಾಸಕರ ಬಳಿ ದೊಡ್ಡ ಮೊತ್ತದ ಅನುದಾನಕ್ಕೆ ಬೇಡಿಕೆ ಇಟ್ಟಿದ್ದೇವೆ.
– ಶಾರದಾ, ಅಧ್ಯಕ್ಷೆ, ಬಿಳಿನೆಲೆ ಗ್ರಾ.ಪಂ. ಬಾಲಕೃಷ್ಣ ಭೀಮಗುಳಿ