Advertisement

ಪರಾಮರ್ಶಿಸಿ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ

11:31 PM Nov 02, 2021 | Team Udayavani |

ರಾಜ್ಯ ಸರಕಾರ ಕರ್ನಾಟಕ ರಾಜ್ಯೋತ್ಸವ ಆಚರಣೆಯನ್ನು ಇನ್ನಷ್ಟು ಜನ ಸ್ನೇಹಿಯಾಗಿ ಜನರೆಲ್ಲರೂ ಪಾಲ್ಗೊಳ್ಳುವಂತೆ ಮಾಡಲು ಮುಂದಾಗಿರುವುದು ಕನ್ನಡ ಭಾಷೆ ಹಾಗೂ ಜನತೆ ಸಂತಸ ಪಡುವ ಹಾಗೂ ಸಂಭ್ರಮಿಸುವ ವಿಷಯ.

Advertisement

ರಾಜ್ಯೋತ್ಸವ ಕೇವಲ ಸರಕಾರದ ಆಚರಣೆಯಾಗದೇ ಪ್ರತಿಯೊಬ್ಬ ಕನ್ನಡಿಗರೂ ಆಚರಣೆಯಲ್ಲಿ ಪಾಲ್ಗೊಂಡಾಗ ಮಾತ್ರ ಅದು ಜನೋತ್ಸವ ಆಗಲಿದೆ. ಆ ನಿಟ್ಟಿನಲ್ಲಿ ಜನರು ಪಾಲ್ಗೊಳ್ಳುವಂತೆ ಮಾಡಲು ಪ್ರೇರೇಪಿ ಸುವ ಹಾಗೂ ಜಾಗೃತಿಗೊಳಿಸುವ ಕೆಲಸವನ್ನು ಸರಕಾರ ನಿರಂತರವಾಗಿ ಮಾಡಿದಾಗ ಮಾತ್ರ ಅದು ಸಫ‌ಲವಾಗುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ನೀಡುವ ಗೌರವದ ಮೊತ್ತವನ್ನು ಮುಂದಿನ ವರ್ಷದಿಂದ 5 ಲಕ್ಷಕ್ಕೆ ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿರುವುದೂ ಕೂಡ ಸ್ವಾಗತಾರ್ಹ ವಿಷಯ.

ರಾಜ್ಯ ಸರಕಾರ ಕೊಡಮಾಡುವ ಇತರ ವೈಯಕ್ತಿಕ ಪ್ರಶಸ್ತಿಗಳ ಮೊತ್ತ 5 ಲಕ್ಷದಿಂದ 7 ಲಕ್ಷ ರೂ.ಗಳ ವರೆಗೂ ಇದೆ. ಹೀಗಾಗಿ ರಾಜ್ಯೋತ್ಸವ ಪ್ರಶಸ್ತಿ ಮೊತ್ತ ಏರಿಕೆ ಮಾಡಲು ಹೊರಟಿರುವುದು ಸಮಯೋಚಿತ ನಿರ್ಧಾರ.

ಇದರ ಜತೆಗೆ ಇನ್ನೆರಡು ಬದಲಾವಣೆಗಳನ್ನು ತರುವುದಾಗಿ ಸಿಎಂ ಘೋಷಣೆ ಮಾಡಿದ್ದಾರೆ. ಈ ಹಿಂದೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ಯಾವುದೇ ನಿರ್ದಿಷ್ಟ ಮಾನದಂಡವೇ ಇರಲಿಲ್ಲ. ಪ್ರಶಸ್ತಿ ಪುರಸ್ಕೃತರ ವಯೋಮಿತಿ ಹಾಗೂ ಒಂದು ವರ್ಷದಲ್ಲಿ ಎಷ್ಟು ಜನರಿಗೆ ನೀಡಬೇ ಕೆಂಬ ನಿಯಮಗಳಿರಲಿಲ್ಲ. ಪ್ರಶಸ್ತಿ ನೀಡುವವರೆಗೂ ಹೆಸರು ಸೇರ್ಪಡೆಯಾಗುತ್ತಲೇ ಹೋಗುತ್ತಿತ್ತು. ಇದು ತೀರಾ ಗೊಂದಲಕ್ಕೂ ಕಾರಣವಾಗುತ್ತಿತ್ತು. ರಾಜ್ಯ ಸರಕಾರದ ಈ ನಡೆಯನ್ನು ಹಿರಿಯ ನಾಗರಿಕರೊಬ್ಬರು ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲೇರಿದ ಅನಂತರ ರಾಜ್ಯೋತ್ಸವ ಪ್ರಶಸ್ತಿಯ ಬೇಕಾಬಿಟ್ಟಿ ವಿತರಣೆಗೆ ತಡೆ ಬಿದ್ದಿದೆ. 2017ರಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಿಕೆಗೆ ಕೆಲವು ನಿಯಮಗಳನ್ನು ರೂಪಿಸಿದ್ದು, ಅದರಲ್ಲಿ ಪ್ರಮುಖವಾಗಿ 60 ವರ್ಷ ಮೀರಿದ ಸಾಧಕರನ್ನು ಗುರುತಿಸಬೇಕು ಎನ್ನುವುದು ಕೂಡ ಒಂದು. ಈಗ ಸಿಎಂ ಬೊಮ್ಮಾಯಿ ಅವರು ವಯೋಮಿತಿ ಕಡಿಮೆ ಮಾಡುವ ಘೋಷಣೆ ಮಾಡಿರುವುದು ಜಿಜ್ಞಾಸೆಗೆ ಕಾರಣವಾಗಲಿದೆ.

Advertisement

ಇದನ್ನೂ ಓದಿ:ಕರ್ನಾಟಕ ಸೇರಿ ಹಲವು ಕಡೆ ಆ್ಯಕ್ಟ್ಸನ್‌ ಲಸಿಕೆ ಪ್ರಯೋಗ

ಅಲ್ಲದೇ ಮುಂದಿನ ವರ್ಷದಿಂದ ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕ ರಿಂದ ಅರ್ಜಿ ಕರೆಯದೇ ಶಿಫಾರಸನ್ನೂ ಸ್ವೀಕರಿಸದೇ ಸರಕಾರವೇ ಸಾಧಕರನ್ನು ಪತ್ತೆ ಹಚ್ಚುವ ಕೆಲಸ ಮಾಡಲಿದೆ ಎನ್ನುವುದು ಒಳ್ಳೆಯ ಬೆಳವಣಿಗೆ ಆದರೂ ಈ ರೀತಿಯ ಆಯ್ಕೆಯಲ್ಲಿ ನಿಜವಾದ ಸಾಧಕರಿ ಗಿಂತ ಪ್ರಭಾವಿಗಳ ಪಾಲೇ ಹೆಚ್ಚಾಗುವ ಆತಂಕವನ್ನು ಅಲ್ಲಗಳೆ ಯುವಂತಿಲ್ಲ. ಆದರೆ ಅದನ್ನು ಇನ್ನಷ್ಟು ಪರಿಷ್ಕರಿಸಿ, ಒಬ್ಬ ವ್ಯಕ್ತಿಯ ಪರ ಒಬ್ಬರೇ ಶಿಫಾರಸ್ಸು ಮಾಡುವ, ಅಥವಾ ನಿರ್ಧಿಷ್ಟ ಶಿಫಾರಸಿಗಿಂತ ಹೆಚ್ಚಿನ ಶಿಫಾರಸು ಬಂದರೆ ಅರ್ಜಿಯನ್ನು ತಿರಸ್ಕರಿಸುವ ನಿಯಮಗಳನ್ನು ಅಳವಡಿಸುವ ಮೂಲಕ ತೆರೆಮರೆಯ ಸಾಧಕರನ್ನು ಸಾರ್ವಜನಿಕರೇ ಹುಡುಕಿ ಶಿಫಾರಸು ಮಾಡುವ ವ್ಯವಸ್ಥೆ ಮುಂದುವರಿಸುವುದು ಸೂಕ್ತವಾಗಿದೆ.

ರಾಜ್ಯ ಸರಕಾರ ಮುಂದಿನ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಹೊಸ ಮಾನದಂಡಗಳನ್ನು ಅಳವಡಿಸಿಕೊಳ್ಳುವ ಮೊದಲು ಹಿಂದಿನ ಅವಾಂತರಗಳು ಹಾಗೂ ನಿಯಮ ಸಡಿಲಿಕೆಗಳಿಂದಾಗುವ ಸಮಸ್ಯೆಗಳ ಬಗ್ಗೆ ಬಗ್ಗೆ ಪರಾಮರ್ಶಿಸಿ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ.

Advertisement

Udayavani is now on Telegram. Click here to join our channel and stay updated with the latest news.

Next