ಕೂಡ್ಲಿಗಿ: ಬದಲಾದ ಕಾಲ ಘಟ್ಟದಲ್ಲಿ ಪುಸ್ತಕಗಳನ್ನು ಓದುವ ವ್ಯವದಾನವು ನಮ್ಮಲ್ಲಿ ಇಲ್ಲವಾಗಿರುವುದು ದುರಂತವೇ ಸರಿ ಎಂದು ಕೂಡ್ಲಿಗಿ ಹಿರೇಮಠದ ಷ.ಬ್ರ.ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮಿಗಳು ವಿಷಾದಿಸಿದರು.
ಪಟ್ಟಣದ ಹಿರೇಮಠ ಕಲ್ಯಾಣ ಮಂಟಪದಲ್ಲಿ ಕೂಡ್ಲಿಗಿಯ ಶರ್ಮ ಪ್ರಕಾಶನ ವತಿಯಿಂದ ಪಂಡಿತ ಕೆ.ಎಂ. ನಾಗಭೂಷಣ ಶರ್ಮ ನಿವೃತ್ತ ಸಂಸ್ಕೃತ ಪಂಡಿತರ ಜನ್ಮಶತಮಾನೋತ್ಸವ ಮತ್ತು ಅವರ ಜೀವನ ಚರಿತ್ರೆಯಾದ “ಪ್ರತಿಭೆಯ ಸಿರಿ’ ಪುಸ್ತಕ ಬಿಡುಗಡೆ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ನಾಗಲೋಟದ ಬದುಕಿನಲ್ಲಿ ಮನುಷ್ಯ ಎಲ್ಲದರಲ್ಲೂ ಅಪ್ರಬುದ್ಧತೆ. ಯಾವುದರಲ್ಲೂ ಸಹ ಪರಿಪೂರ್ಣ ಜ್ಞಾನ ಇಲ್ಲವಾಗಿದೆ. ಕನಿಷ್ಟ ಪಕ್ಷ ವಿಷಯಗಳನ್ನು ಅರಿಯುವ ಮನಸ್ಥಿತಿಯೂ ಇಲ್ಲವಾಗಿದೆ. ಪುಸ್ತಕಗಳನ್ನು ಓದುವುದರಿಂದ ಮನಸ್ಸನ್ನು ಪ್ರಫುಲ್ಲಗೊಳಿಸಿಕೊಳ್ಳುವ ಜತೆಗೆ ಆತ್ಮ ವಿಮರ್ಶಕತೆಯನ್ನು ಮಾಡಿಕೊಳ್ಳಲು ಸಹಕಾರಿಯಾಗುತ್ತದೆ. ಕೃತಿಗಳು ಓದುಗರನ್ನ ಓದಿಸಿಕೊಂಡು ಹೋಗುವಂತಹ ಕೌತುಕ ಹಾಗೂ ಕುತೂಹಲವನ್ನು ಹೊಂದಿರಬೇಕು.
ಜತೆಗೆ ಸಮಾಜವನ್ನು ತಿದ್ದುವ ಕೆಲಸವನ್ನು ಸಹ ಕೃತಿಯಲ್ಲಿ ವಿಷಯ ವಸ್ತುಗಳು ಇರಬೇಕು. ಆದರೆ ಇಂದಿನ ಬದುಕಿನಲ್ಲಿ ಓದುವ ಮನಸ್ಸು ಇಲ್ಲ ಕೇಳಿ ತಿಳಿಯುವ ಜ್ಞಾನ ಸಹ ಇಲ್ಲವಾಗಿದೆ. ಆದ್ದರಿಂದ ಯುವ ಪೀಳಿಗೆಯು ಸಾಹಿತ್ಯಾತ್ಮಕ ಕೃತಿಗಳನ್ನ ಓದುವ ಮೂಲಕ ಮಹನೀಯರ ಆದರ್ಶಗಳನ್ನು ಪರಿಪಾಲಿಸಬೇಕಾಗಿದೆ. ಮಕ್ಕಳಲ್ಲಿ ಉತ್ತಮ ಸಂಸ್ಕಾರಗಳನ್ನ ರೂಢಿಸಬೇಕಾದರೆ ಪುಸ್ತಕಗಳು ಓದುವಂತಾಗಬೇಕು. ಶಿಕ್ಷಕ ಪಂಡಿತ ನಾಗಭೂಷಣ ಶರ್ಮ ಆಲದ ಮರದಂತೆ ತಮ್ಮ
ಮಕ್ಕಳ ಜತೆ ಸಮಾಜದ ಇತರೆ ವರ್ಗದರನ್ನು ಸಹ ಮಮತೆಯಿಂದ ಆತಿಥ್ಯ ನೀಡಿ ಶಿಕ್ಷಣ ಕೊಡಿಸಿರುವುದು ಸಾಮಾಜಿಕ ಜವಾಬ್ದಾರಿಯನ್ನ ತೋರಿಸುವ ಮೂಲಕ ಸಮಾಜಕ್ಕೆ ಆದರ್ಶಪ್ರಾಯರಾಗಿ, ಸಮಾಜಯುಖಿಯಾಗಿ ಬದುಕಬೇಕು ಎನ್ನುವ ಸಂದೇಶವನ್ನು ಸಹ ನೀಡಿದ್ದಾರೆ ಎಂದು ಸ್ಮರಿಸಿದರು.
ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿಕಟ ಪೂರ್ವ ಜಿಲ್ಲಾಧ್ಯಕ್ಷ ಹಾಗೂ ಕೊಟ್ಟೂರೇಶ್ವರ ಮಹಾವಿದ್ಯಾಲಯದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿದ್ದರಾಮ ಕಲ್ಮಠ ಪುಸ್ತಕ ಬಿಡುಗಡೆ ಮಾಡಿದರು. ಕೃತಿ ಕುರಿತು ಗದುಗಿನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಹಾಗೂ ಸಾಹಿತಿ ಸಿದ್ದು ಯಾಪಲಪರವಿ ಮಾತಾನಾಡಿದರು.ಅಧ್ಯಕ್ಷತೆಯನ್ನ ಕೊಟ್ಟೂರಿನ ನಿವೃತ್ತ ಬಿಇಒ ಎಚ್.ಎಂ. ಹಾಲಯ್ಯ ವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ವೀರೇಶ್ ಅಂಗಡಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಎಂ. ರವಿಕುಮಾರ್, ಬಳ್ಳಾರಿ ವಿ.ವಿ ಸಂಘದ ಮಾಜಿ ಉಪಾಧ್ಯಕ್ಷ ಎಚ್.ಎಂ. ವೀರಭದ್ರ ಶರ್ಮ, ಕೃತಿಯ ಲೇಖಕ ಬಿ.ಎಂ. ಪ್ರಭುದೇವ, ಧನಂಜಯ ಸ್ವಾಮಿ, ಶರ್ಮ ಪ್ರಕಾಶನದ ಗುರುದೇವ ಶರ್ಮ, ಕೊಟ್ರೇಶ್ ಶರ್ಮಾ, ಲಕ್ಷ್ಮೀ ಶರ್ಮ ಇದ್ದರು.