Advertisement

‘ಹುತಾತ್ಮ  ಯೋಧರನ್ನು ಸ್ಮರಿಸುವುದು ಪವಿತ್ರವಾದ ಕೆಲಸ’

11:54 AM Nov 29, 2017 | Team Udayavani |

ಮಹಾನಗರ: ಮಾತೃ ಭೂಮಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ ದೇಶರಕ್ಷಣೆಗಾಗಿ ಹಗಲಿರುಳು ದುಡಿಯುವ ಸಂದರ್ಭದಲ್ಲಿ ಪ್ರಾಣತ್ಯಾಗ ಮಾಡಿರುವ ಹುತಾತ್ಮ ಯೋಧರನ್ನು ಸ್ಮರಿಸಿ, ಗೌರವಿಸುವುದು ಅತ್ಯಂತ ಪವಿತ್ರ ಹಾಗೂ ಪುಣ್ಯದ ಕಾರ್ಯವಾಗಿದೆ ಎಂದು ಭಾರತೀಯ ಸೇನೆಯ ನಿವೃತ್ತ ಕರ್ನಲ್‌ ನಿಟ್ಟೆಗುತ್ತು ಶರತ್‌ ಭಂಡಾರಿ ಹೇಳಿದರು.

Advertisement

ಮುಂಬಯಿಗೆ ಉಗ್ರರು ದಾಳಿ ನಡೆಸಿ (26/11/2008) 9 ವರ್ಷಗಳಾದ ಪ್ರಯುಕ್ತ ನಗರದ ಕದ್ರಿ ಸರ್ಕ್ನೂಟ್‌ ಹೌಸ್‌ ವೃತ್ತದ ಬಳಿ ಇರುವ ಹುತಾತ್ಮರ ಸ್ಮಾರಕದಲ್ಲಿ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ವತಿಯಿಂದ ಏರ್ಪಡಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು. ಮುಂಬಯಿ ದಾಳಿಯಲ್ಲಿ ಹೋರಾಡಿ ಉಗ್ರಗಾಮಿಗಳನ್ನು ಸದೆಬಡಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಯೋಧರು ಮತ್ತು ಪೊಲೀಸರನ್ನು ಹಾಗೂ ಬಲಿಯಾದ ಅಮಾಯಕ ಜನರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಶ್ಲಾಘನೀಯ ಕಾರ್ಯಕ್ರಮ
ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲು ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯು ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ಶ್ಲಾಘಿಸಿದ ಅವರು, ಇದೊಂದು ಮಾದರಿ ಕೆಲಸವಾಗಿದೆ. ದೇಶದ ಬಗ್ಗೆ ಚಿಂತನೆ ಮಾಡುವ ಈ ರೀತಿಯ ಸಂಘಟನೆಗಳು ಇನ್ನಷ್ಟು ಬೆಳೆದು ರಾಷ್ಟ್ರೀಯತೆಯ ದೀಪವನ್ನು ಪ್ರಜ್ವಲಿಸುವ ಕೆಲಸದಲ್ಲಿ ಯಶಸ್ವಿಯಾಗಿ ಮುಂದುವರಿಸಲಿ ಎಂದು ಹಾರೈಸಿದರು.

ಮಾಜಿ ಸೈನಿಕರ ಸಂಘದ ಅಧ್ಯಕ್ಷ ವಿಕ್ರಮ್‌ ದತ್ತ, ಕ್ಯಾ| ದೀಪಕ್‌ ಅಡ್ಯಂತಾಯ, ಎಂ.ಸಿ. ಭದ್ರಯ್ಯ, ರಾಮಣ್ಣ ನಾಯಕ್‌, ಭಗವಾನ್‌ದಾಸ್‌ ಶೆಟ್ಟಿ, ಪುಷ್ಪ ರಾಣಿ ಭದ್ರಯ್ಯ, ನಿವೃತ್ತ ಪೊಲೀಸ್‌ ಅಧಿಕಾರಿ ಟಿ.ಸಿ.ಎಂ. ಶರೀಫ್‌, ಪರಿವರ್ತನ ಟ್ರಸ್ಟ್‌ ಸದಸ್ಯರಾದ ಸಂಜನಾ, ಶ್ರೀನಿ  ಮಂಗಳೂರು, ಕೆಥೋಲಿಕ್‌ ಧರ್ಮ ಪ್ರಾಂತದ ಪರವಾಗಿ ಲೀಡಿಯಾ ಡಿ’ಕುನ್ಹ, ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ, ಕೆನರಾ ಕಾಲೇಜಿನ ಉಪನ್ಯಾಸಕಿ ಪ್ರಮೀಳಾ ರಾವ್‌, ಸಾಮಾಜಿಕ ಮುಂದಾಳುಗಳಾದ ರಾಮ ಅಮೀನ್‌ ಪಚ್ಚನಾಡಿ, ವೇದಿಕೆಯ ಪ್ರಮುಖರಾದ ಜೋಸ್ಸಿ ರೆಗೋ, ಓಸ್ವಾಲ್ಡ್‌ ಡಿ’ಕುನ್ಹ, ಮಾಧ್ಯಮ ಪ್ರಮುಖ್‌ ರೋಶನ್‌ ಡಿ’ಸೋಜಾ ಉಪಸ್ಥಿತರಿದ್ದರು.

ವೇದಿಕೆಯ ಸ್ಥಾಪಕ ಫ್ರಾಂಕ್ಲಿನ್‌ ಮೊಂತೆರೊ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕದ್ರಿ ಉದ್ಯಾನವನದ ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌ ಬಯಲು ರಂಗಮಂದಿರದ ಪ್ಲೈಟ್‌ ಲೆಫ್ಟಿನೆಂಟ್‌ ಕೆವಿನ್‌ ಸೆರಾವೋ ವೇದಿಕೆಯಲ್ಲಿ ಅಂಧ ಕಲಾವಿದರಿಂದ ದೇಶಭಕ್ತಿ ಗಾಯನ ಕಾರ್ಯಕ್ರಮ ಜರಗಿತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next